ಉಡುಪಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮೋಟಾರೀಕೃತ ನಾಡದೋಣಿಗಳನ್ನು ಭೌತಿಕವಾಗಿ ಪರಿಶೀಲಿಸಿ ಮೀನುಗಾರಿಕೆ ಪರವಾನಿಗೆ ಹಾಗೂ ಸೀಮೆಎಣ್ಣೆ ರಹದಾರಿ ನೀಡಲು ಕ್ರಮಕೈಗೊಳ್ಳಲಾಗಿರುತ್ತದೆ.
ಆಗಸ್ಟ್ ತಿಂಗಳಿನಿಂದ ಕೈಗಾರಿಕಾ ಸೀಮೆ ಎಣ್ಣೆಯನ್ನು ಪೂರೈಸಲು ಪೂರ್ವಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಜುಲೈ 29 ರಂದು ಕುಂದಾಪುರ ತಾಲೂಕಿನ ಕೋಡಿ ಕಿನಾರೆ, ಗಂಗೊಳ್ಳಿ ಬಂದರು. ಗಂಗೊಳ್ಳಿ ಲೈಟ್ ಹೌಸ್, ಕಂಚುಗೋಡು ತ್ರಾಸಿ, ಕಂಚುಗೋಡು-ಮಡಿ, ನಾವುಂದ-ಮರವಂತೆ, ಕೊಡೇರಿ-ಕಿರಿಮಂಜೇಶ್ವರ, ಪಡುವರಿ-ತಾರಾಪತಿ, ಮಡಿಕಲ್-ಉಪ್ಪುಂದ, ಕಳಿಹಿತ್ಲು-ಅಳ್ವೆಗದ್ದೆ ಮತ್ತು ಜುಲೈ 30ರಂದು ಉಡುಪಿ ತಾಲೂಕಿನ ಹೆಜಮಾಡಿ-ಪಡುಬಿದ್ರಿ, ಉಚ್ಚಿಲ-ಎರ್ಮಾಳ್, ಮಲ್ಪೆ-ಪಡುಕೆರೆ, ಮಲ್ಪೆ-ಸೀ-ವಾಕ್, ಸಾಸ್ತಾನ-ಕೋಡಿಕನ್ಯಾನ, ಸಾಸ್ತಾನ-ಕೋಡಿ ಜೆಟ್ಟಿ, ಕಾಪು-ಎರ್ಮಾಳ್ ಲೈಟ್ ಹೌಸ್, ಹಂಗಾರಕಟ್ಟೆ-ಕೋಡಿಬೆಂಗ್ರೆಗಳ ಸ್ಥಳಗಳಲ್ಲಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಭೌತಿಕ ತಪಾಸಣೆ ನಡೆಸಲಿದ್ದಾರೆ.
ನಾಡ ದೋಣಿ ಮಾಲೀಕರು ತಪಾಸಣೆ ವೇಳೆಯಲ್ಲಿ ತಮ್ಮ ದೋಣಿ ಇಂಜಿನ್ ಸಮೇತ ದಾಖಲೆಗಳಾದ ಆರ್.ಸಿ ಪ್ರತಿ, ಲೈಸೆನ್ಸ್ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿಯೊಂದಿಗೆ ಖುದ್ದಾಗಿ ಹಾಜರಾಗಿ ತಪಾಸಣೆ ಮಾಡಲು ಸಹಕರಿಸುವಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.