ಮಲ್ಪೆ : ಯಾವುದೇ ಅನುಮಾನಾಸ್ಪದ ಬೋಟುಗಳ ಚಲನವಲನ, ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಅನುಮಾನಾಸ್ಪದ ವ್ಯಕ್ತಿ, ಬೋಟ್ಗಳು ಕಂಡು ಬಂದಲ್ಲಿ ತತ್ಕ್ಷಣ ಇಂಡಿಯನ್ ನೇವಿ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್ ಸಹಿತ ವಿವಿಧ ರಕ್ಷಣ ಸಿಬಂದಿಗಳಿಗೆ ಮಾಹಿತಿ ನೀಡಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ತಿಳಿಸಿದ್ದಾರೆ.
ಮೀನುಗಾರರಿಗೆ ಈ ಬಗ್ಗೆ ಮಾಹಿತಿ ನೀಡಿ ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ ಜನರು ಕಾಣಿಸಿಕೊಂಡಲ್ಲಿ ತತ್ಕ್ಷಣ ಮಾಹಿತಿ ನೀಡಬೇಕು, ಇಲಾಖೆಯಿಂದ ಅಳವಡಿಸಿದ ಟ್ರಾನ್ಸ್ಫಾಂಡರ್ಗಳನ್ನು ಚಾಲನೆಯಲ್ಲಿಟ್ಟುಕೊಂಡು ನಭಾಮಿತ್ರ ಅಪ್ಲಿಕೇಶನ್ ಮುಖಾಂತರ ಮಾಹಿತಿ ನೀಡಬೇಕು.
ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಮುದ್ರದಲ್ಲಿ 2ರಿಂದ 3ಬೋಟುಗಳು ಗುಂಪಿನಲ್ಲಿ ಮೀನುಗಾರಿಕೆ ಮಾಡುವುದು ಸೂಕ್ತ, ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ, ಲಂಗರು ಹಾಕಿರುವಾಗ ನ್ಯಾವಿಗೇಶನಲ್ ಲೈಟನ್ನು ಆನ್ ಮಾಡಿಕೊಳ್ಳಬೇಕು.
ಸಮುದ್ರದಲ್ಲಿ ರಕ್ಷಣ ಪಡೆಯವರು ತಪಾಸಣೆ ಮಾಡಿದ್ದಲ್ಲಿ ಎಲ್ಲರೂ ಸಹಕರಿಸುವುದು ಉತ್ತಮ. ಎಲ್ಲರೂ ಕ್ಯೂಆರ್ ಕೋಡೆಡ್ ಆಧಾರ್ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳತಕ್ಕದ್ದು. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ ಎಂದು ತಿಳಿಸಿದ್ದಾರೆ.