ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆ ಬಳಿ ಕಂಟೇನರ್ನ ಬ್ರೇಕ್ ಲೈನರ್ ಜಾಮ್ ಆಗಿ ಬೆಂಕಿ ಕಾಣಿಸಿಕೊಂಡು ಟಯರ್ ಮೇಲ್ಗಡೆ ಹೊತ್ತಿ ಉರಿದಿದ್ದು ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಯಿತು.
ಪಡುಬಿದ್ರೆ ನಂದಿಕೂರು ಕೈಗಾರಿಕಾ ಪ್ರದೇಶದ ಬ್ರೈಟ್ ಫ್ಲೆಕ್ಸ್ ಕಂಪನಿಯಿಂದ ಮಂಗಳೂರು ಬಂದರ್ ಕಡೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಕಂಟೇನರ್ ಬಪ್ಪನಾಡು ಸೇತುವೆ ತಲುಪುತ್ತಿದ್ದಂತೆ ಬ್ರೇಕ್ ಲೈನರ್ ಜಾಮ್ ಆಗಿ ಟಯರ್ ಮೇಲ್ಗಡೆ ಹೊತ್ತಿ ಉರಿದಿದೆ.
ಬೆಂಕಿ ಧಗ ಧಗನೇ ಹೊತ್ತಿ ಉರಿಯುತ್ತಿದ್ದಂತೆ ಕಂಗಾಲಾದ ಕಂಟೇನರ್ ಚಾಲಕ ಹಿಮಾಚಲ ಪ್ರದೇಶ ನಿವಾಸಿ ರಂಜಿತ್ ಕೆಳಗೆ ಹಾರಿ ಅಪಾಯದಿಂದ ಪಾರಾಗಿದ್ದಾನೆ.
ಕೂಡಲೇ ಮುಲ್ಕಿ ನ.ಪಂ. ಸದಸ್ಯ ಬಾಲಚಂದ್ರ ಕಾಮತ್, ಮುಲ್ಕಿ ಪೊಲೀಸ್ ಠಾಣೆಯ ಎಸ್ಐ ಅನಿತ ನೇತೃತ್ವದಲ್ಲಿ ಮುಲ್ಕಿ ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಹೆಜ್ಮಾಡಿ ಟೋಲ್ ಸಿಬ್ಬಂದಿ ಹಾಗೂ ಸ್ಥಳೀಯರು ಪೆಟ್ರೋಲ್ ಬಂಕ್ ಬಳಿಯಿಂದ ಬೆಂಕಿ ನಂದಿಸುವ ಸಾಧನವನ್ನು ತಂದು ಕೂಡಲೇ ಬೆಂಕಿ ನಂದಿಸಿದ್ದಾರೆ. ಬಳಿಕ ಹಳೆಯಂಗಡಿಯ ಪೂಜಾ ರೇಂಜರ್ಸ್ ವತಿಯಿಂದ ನೀರನ್ನು ತಂದು ಪೂರ್ತಿ ಬೆಂಕಿ ನಂದಿಸಲಾಯಿತು. ಬೆಂಕಿ ಹೊತ್ತಿ ಉರಿದರೆ ಕಂಟೇನರ್ನ ಇಂಧನ ಟ್ಯಾಂಕ್ ಸ್ಫೋಟವಾಗುವ ಸಾಧ್ಯತೆ ಇತ್ತು.
ಅವಘಡದ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಪೊಲೀಸರು ತೆರವುಗೊಳಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ಸೂಕ್ತ ಅಗ್ನಿಶಾಮಕ ದಳದ ಕೇಂದ್ರವಿಲ್ಲದೆ ಮಂಗಳೂರು ಅಥವಾ ಮೂಡಬಿದ್ರೆ ಅಗ್ನಿಶಾಮಕ ದಳವನ್ನು ಸಂಪರ್ಕಿಸಬೇಕಾಗುತ್ತದೆ ಕೂಡಲೇ ಮುಲ್ಕಿಯಲ್ಲಿ ಅಗ್ನಿಶಾಮಕ ದಳ ಕೇಂದ್ರ ಸ್ಥಾಪಿಸಬೇಕು ಎಂದು ಸ್ಥಳೀಯ ಮುಲ್ಕಿ ನ.ಪಂ. ಸದಸ್ಯ ಬಾಲಚಂದ್ರ ಕಾಮತ್ ಸಂಬಂಧಪಟ್ಟ ಆಡಳಿತವನ್ನು ಒತ್ತಾಯಿಸಿದ್ದಾರೆ.