ಮಂಗಳೂರು : ನಗರದಲ್ಲಿ ಗಾಂಜಾವನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ ಆತನಿಂದ 4 ಕೆಜಿ ಗಾಂಜಾವನ್ನು ಮಂಗಳೂರು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಅಬುತಾಹಿರ್ ಯಾನೆ ಅನ್ವರ್(25) ಬಂಧಿತ ವ್ಯಕ್ತಿ.
ಈತ ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಟ, ಮಾರಾಟ ಮಾಡುತ್ತಿದ್ದನು.
ಈತನ ವಶದಿಂದ 1 ಲಕ್ಷ ರೂ ಮೌಲ್ಯದ ನಾಲ್ಕು ಕೆಜಿ ಗಾಂಜಾ, ಗಾಂಜಾ ಸಾಗಾಟಕ್ಕೆ ಉಪಯೋಗಿಸಿದ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ, ಹಾಗೂ ಮೊಬೈಲ್ ಫೋನ್ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 1,75,000/-ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಗಾಂಜಾ ಸಾಗಾಟದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ನರೇಂದ್ರ, ಎಎಸ್ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ, ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.