Drug Abuse
ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ಕಾವೂರು ಮತ್ತು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ಉರುಂದಾಡಿ ಗುಡ್ಡೆಯ ಸಾರ್ವಜನಿಕ ಮೈದಾನದಲ್ಲಿ ಉರ್ವ ನಿವಾಸಿ ತಿಲಕ್ ರಾಜ್ (29) ಎಂಬಾತನನ್ನು ಹಾಗೂ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೇರಳ ಪಾಲಕ್ಕಾಡ್ ಮೂಲದ ಪಂಪ್ವೆಲ್ ಗಾರ್ಡನ್ ಮರೋಳಿ ಬಳಿ ವಾಸವಾಗಿರುವ ಮೊಹಮ್ಮದ್ ಶಾಮಿಲ್ (22)ನನ್ನು ಬಂಧಿಸಲಾಗಿದೆ.
ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಮಣಿಪಾಲ : ಲಾಡ್ಜ್ ಒಂದರ ರೂಮ್ನಲ್ಲಿ ಮಾದಕವಸ್ತುಗಳನ್ನು ಸೇವಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಣಿಪಾಲ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಣಿಪಾಲ ನಗರದ ಡೌನ್ಟೌನ್ ಲಾಡ್ಜ್ನಲ್ಲಿ ನಡೆದಿದೆ.
ಆರೋಪಿಗಳನ್ನು ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆ ನಿವಾಸಿ ರಾಜೇಶ್ ಪ್ರಕಾಶ್ ಜಾದವ್, ಮಲ್ಪೆ ನಿವಾಸಿ ನಾಜೀಲ್ ಯಾನೆ ಆಶಿಪ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿ ಇದ್ದ 40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ ಎಂಡಿಎಂಎ, ರೂ.10,500 ಮೌಲ್ಯದ 225 ಗ್ರಾಂ ತೂಕದ ಗಾಂಜಾ, 15 ಸಣ್ಣ ಸಣ್ಣ ಪ್ಲಾಸ್ಟಿಕ್ ಕವರ್, 5 ಸಿರೀಂಜ್ಗಳು ಮತ್ತು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ : ಮಣಿಪಾಲ ಠಾಣೆ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ರೌಂಡ್ಸ್ ಕರ್ತವ್ಯದಲ್ಲಿರುವಾಗ ಡಿ.ಸಿ ಆಫೀಸ್ ರೋಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದು ಕಂಡುಬಂದಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ದಿವ್ಯಾಶ್ (22) ಎಂದು ಗುರುತಿಸಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ ಈತ ಗಾಂಜಾ ಅಮಲಿನಲ್ಲಿದ್ದ. ಬಳಿಕ ಮಣಿಪಾಲ ಕೆ ಎಂ ಸಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿಯು ಮಾದಕ ವಸ್ತು ಗಾಂಜಾ ಸೇವಿಸಿರುವುದು ದೃಢಗೊಂಡಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡ್ರಗ್ಸ್ ಜಾಲ ಮಟ್ಟಹಾಕಲು ಎಲ್ಲ ಇಲಾಖೆಗಳು ಕೈಜೋಡಿಸಬೇಕು : ಜಿಲ್ಲಾಧಿಕಾರಿ ಖಡಕ್ ಸೂಚನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿ ಗಾಂಜಾವನ್ನು ಸಂಪೂರ್ಣವಾಗಿ ನಿಷೇಧಿಸಲು ಎಲ್ಲಾ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಮುಲ್ಲೈ ಮುಗಿಲನ್ ಎಂ.ಪಿ. ಖಡಕ್ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ಚಟಕ್ಕೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೀಳುತ್ತಿರುವುದು ಕಳವಳಕಾರಿಯಾಗಿದೆ. ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಮಟ್ಟದಲ್ಲಿಯೇ ಆಂತರಿಕವಾಗಿ ನೋಡಲ್ ಆಫೀಸರ್, ಆಪ್ತ ಸಮಾಲೋಚಕರನ್ನು ನೇಮಿಸಿ ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸಬೇಕು. ಡ್ರಗ್ಸ್ ವ್ಯಸನಿಯಾಗಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಮಾಡಿ ವಿದ್ಯಾರ್ಥಿಯ ಮನ ಪರಿವರ್ತಿಸಬೇಕು. ವಿದ್ಯಾರ್ಥಿಗೆ ಯಾವ ಮೂಲದಿಂದ ಡ್ರಗ್ ಸಿಗುತ್ತಿದೆ ಎಂಬ ಬಗ್ಗೆ ಹೆಚ್ಚಿನ ತನಿಖೆಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಶಾಲಾ ಕಾಲೇಜುಗಳ ಹೆಸರಿಗೆ ಧಕ್ಕೆ ಉಂಟಾಗಬಹುದು ಎಂದು ಪ್ರಕರಣವನ್ನು ಮುಚ್ಚಿಡಬಾರದು ಎಂದರು. ಶಾಲಾ ಕಾಲೇಜುಗಳಿಗೆ ಆಗಿಂದಾಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಅಂಚೆ ಕಚೇರಿಗೆ ಬರುವ ಪಾರ್ಸೆಲ್ಗಳು ಅನುಮಾನಾಸ್ಪದವಾಗಿ ತೋರಿ ಬಂದರೆ, ಪದೇ ಪದೇ ಒಂದೇ ರೀತಿಯಲ್ಲಿ ಪಾರ್ಸೆಲ್ಗಳು ಬರುತ್ತಿದ್ದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದಾರೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯವರು ತಪಾಸಣೆ ನಡೆಸಬೇಕು. ಡ್ರಗ್ಸ್ ನಿರ್ಮೂಲನೆಯಲ್ಲಿ ಪ್ರತಿಯೊಂದು ಇಲಾಖೆಯವರು ಜಂಟಿಯಾಗಿ, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ವಾಟ್ಸಪ್ ಗ್ರೂಪ್ಗಳನ್ನು ರಚಿಸಿ, ವೇಳಾಪಟ್ಟಿಗಳನ್ನು ರಚಿಸಿ ಡ್ರಗ್ಸ್ ನಿರ್ಮೂಲನೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು ಪ್ರತಿ ತಿಂಗಳು ಅದರ ವರದಿಯನ್ನು ಒಪ್ಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಆರ್ಟಿಓ ಇಲಾಖೆಯಿಂದ ಎಲ್ಲಾ ಬಸ್ ಡ್ರೈವರ್ ಕಂಡಕ್ಟರ್ಗಳಿಗೆ ಡ್ರಗ್ಸ್ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಭೆ ನಡೆಸಬೇಕು. ಬಸ್ಗಳಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಅಂಟಿಸಬೇಕು. ಸಹಾಯವಾಣಿ ಸಂಖ್ಯೆ ನಂಬರ್ 1933 ಅನ್ನು ಅದರಲ್ಲಿ ನಮೂದಿಸಬೇಕು ಎಂದರು.
ಜಿಲ್ಲೆಯಲ್ಲಿ ಈವರೆಗೂ ಪತ್ತೆಯಾದ ಪ್ರಕರಣಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಹೆಚ್ಚಾಗಿ ಕಂಡು ಬಂದಿದ್ದು ಡ್ರಗ್ಸ್ಗಳನ್ನು ಎಲ್ಲಿಂದ ಪೂರೈಕೆ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು. ಅಪಾರ್ಟ್ಮೆಂಟ್ಗಳಲ್ಲಿ ಡ್ರಗ್ಸ್ ಬಗ್ಗೆ ಸಭೆಯನ್ನು ನಡೆಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿಸಿಪಿ, ಸಿದ್ದಾರ್ಥ್ ಗೋಯಲ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವ ಆರೋಪದಲ್ಲಿ ಅನ್ಯಕೋಮಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಸಲಾಂ ಎಂಬಾತ ಕೃತ್ಯ ಎಸಗಿದ್ದು, ಈತ ಗಾಂಜಾ ವ್ಯಸನಿ ಎಂದು ಆರೋಪಿಸಲಾಗಿದೆ. ಬುಧವಾರ ತಡರಾತ್ರಿ ಈತ ನಾಗನಕಟ್ಟೆಗೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ. ವಿಚಾರ ತಿಳಿದು ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆಯೂ ಈತ ಇಂಥಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಹೇಳಲಾಗಿದೆ. ಸದ್ಯ ಪುತ್ತೂರು ಪೊಲೀಸರು ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಉಡುಪಿ : ಮೂಡನಿಡಂಬೂರು ಗ್ರಾಮದ ಬನ್ನಂಜೆಯ ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಇಕ್ಬಾಲ್ (33) ಎಂದು ಗುರುತಿಸಲಾಗಿದೆ.
ಇಕ್ಬಾಲ್ ಮಾದಕ ದ್ರವ್ಯ ಸೇವನೆ ಮಾಡಿ ಅಮಲಿನಲ್ಲಿರುವುದು ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದು, ಉಡುಪಿ ಜಿಲ್ಲಾಸ್ಪತ್ರೆ, ಅಜ್ಜರಕಾಡು ಉಡುಪಿ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿರುವುದಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಡ್ರಗ್ಸ್ ವಿರುದ್ಧ ಕಠಿಣ ಕ್ರಮಕ್ಕೆ ವಿಧಾನಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುವೆ – ಮಂಜುನಾಥ ಭಂಡಾರಿ
ಮಂಗಳೂರು : ಡ್ರಗ್ಸ್ ದಂಧೆಗೆ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಈ ಬಾರಿಯ ವಿಧಾನಪರಿಷತ್ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಎಂಎಲ್ಸಿ ಮಂಜುನಾಥ ಭಂಡಾರಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ತೊಡಗಿದವರನ್ನು ಬಂಧಿಸಿದ್ದರೂ ಅವರು ಜಾಮೀನು ಪಡೆದು ಹೊರಗೆ ಬಂದು ಮತ್ತೆ ಅದೇ ಕೆಲಸ ಮಾಡುತ್ತಾರೆ. ಡ್ರಗ್ಸ್ ದಂಧೆಗೆ ಬಹಳ ಸಣ್ಣ ಕೇಸ್ಗಳು ಇರುವುದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ಜಾರಿಯಾಗಬೇಕಾದರೆ ಕಾನೂನಿನಲ್ಲಿ ತಿದ್ದುಪಡಿ ಮಾಡಿದ್ದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.
ಅವಿಭಜಿತ ದ.ಕ.ಜಿಲ್ಲೆಯಲ್ಲಿನ ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಗೃಹಮಂತ್ರಿ, ಐಜಿ, ಪೊಲೀಸ್ ಕಮಿಷನರ್ಗೆ ಪತ್ರ ಬರೆದಿದ್ದೆ. ಡ್ರಗ್ಸ್ ದಂಧೆಯ ಕರಾಳತೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ಇಲ್ಲಿನ ಕಾಲೇಜುಗಳಲ್ಲಿ ಅಡ್ಮಿಷನ್ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ಡ್ರಗ್ಸ್ ದಂಧೆಯನ್ನು ಡಿಜಿಯವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಕಳ : ಇಲ್ಲಿನ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ಡ್ರಗ್ಸ್ ದಂಧೆಯ ಬಗ್ಗೆ ಕಾರ್ಕಳ ನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ.
ಆರೋಪಿ ಆಂಧ್ರಪ್ರದೇಶದ ಗಿರಿರಾಜು ಜಗಾಧಾಬಿ (31) ಹಾಗೂ ಶಂಕರಪುರದ ಜಾನ್ ನೊರೋನ್ಹಾ (30) ಈ ಮೊದಲು ಕುವೈಟ್ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಜಾನ್ ನೊರೋನ್ಹಾನಿಗೆ ಗಿರಿರಾಜು ಕರೆ ಮಾಡಿ ಡ್ರಗ್ಸ್ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದ.ಜಾನ್ ನೊರೋನ್ಹಾ ಸೂಚನೆಯಂತೆ ಗಿರಿರಾಜು ಉಡುಪಿಗೆ ಬಂದಿದ್ದು, ಅಲ್ಲಿ ಆತನಿಗೆ ಕಾರ್ಕಳದ ಶಾಹಿದ್(39)ನನ್ನು ಪರಿಚಯಿಸಲಾಗಿತ್ತು. ಶಾಹಿದ್ ಸ್ಥಳೀಯವಾಗಿ ಸುಮಾರು ಒಂದು ತಿಂಗಳಿನಿಂದ ಸಿಂಥೆಟಿಕ್ ಡ್ರಗ್ಸ್ಗೆ ಪ್ರಯತ್ನಿಸಿದ್ದ. ಸಿಗದಿದ್ದಾಗ ಅಭಯ್(23)ನನ್ನು ಸಂಪರ್ಕಿಸಿದ್ದ.
ಅಭಯ್ ಈ ಮೊದಲು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆತ ಬೆಂಗಳೂರಿನಲ್ಲಿ ಡ್ರಗ್ಸ್ ಸಿಗುವ ಬಗ್ಗೆ ಖಚಿತಪಡಿಸಿ ಶಾಹಿದ್ ಹಾಗೂ ಗಿರಿರಾಜುನನ್ನು ಬೆಂಗಳೂರಿಗೆ ಬರಲು ತಿಳಿಸಿದ್ದ. ಕಾರ್ಕಳದಿಂದ ಶಾಹಿದ್, ಅಲ್ತಾಫ್ ಮತ್ತು ಅಭಯ್ನೊಂದಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್ ಖರೀದಿಸಿ ಗಿರಿರಾಜುವಿಗೆ ನೀಡಿರುತ್ತಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಈ ಮೂವರು ಆರೋಪಿಗಳು ಬ್ರೋಕರೇಜ್ ಕಮಿಷನ್ ಪಡೆದು, ಅದರಲ್ಲಿ ಸ್ವಲ್ಪ ಡ್ರಗ್ಸ್ ಅನ್ನು ಅಲ್ತಾಫ್ಗೆ ತಂದಿದ್ದರು. ಇದೇ ಡ್ರಗ್ಸ್ ಅನ್ನು ಅತ್ಯಾಚಾರ ಪ್ರಕರಣದ ದಿನ ಯುವತಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಯುವತಿಗೆ ನೀಡಿ ಉಳಿದ ಡ್ರಗ್ಸ್ ಅನ್ನು ಅಲ್ತಾಫ್ನ ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಗಿರಿರಾಜುವಿನಿಂದ ಎಂಡಿಎಂಎ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಆರೋಪಿಗಳಿಗೆ ಡ್ರಗ್ಸ್ ನೀಡಿದ ವ್ಯಕ್ತಿಯನ್ನು ಇನ್ನಷ್ಟೇ ಬಂಧಿಸಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಮಣಿಪಾಲ : ಉಡುಪಿ, ಮಣಿಪಾಲ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಮೊಹಮ್ಮದ್ ಫಯಾಜ್ (30), ಪ್ರಜ್ವಲ್ (34), ನಿಸಾರ್ ಅನ್ಸಾರ್ (25) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ಗಾಂಜಾ ಸೇವಿಸಿರುವುದನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗ ದೃಢಪಡಿಸಿದೆ. ಈ ಕುರಿತು ಸೆನ್ ಠಾಣೆಯಲ್ಲಿ 2, ಮಣಿಪಾಲ ಠಾಣೆಯಲ್ಲಿ 1 ಪ್ರತ್ಯೇಕ ಪ್ರಕರಣ ದಾಖಲಾಗಿದೆ.