ಉಡುಪಿ : ಸಮಾಜದ ಋಣ ತೀರಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಅದು ಶಿಕ್ಷಣ, ಸಮಾಜ ಸೇವೆ, ಸಾಂಸ್ಕೃತಿಕ ರಂಗವೇ ಇರಬಹುದು. ಆದರೆ ಯಕ್ಷಗಾನ, ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಿ, ಸಾಧಕರನ್ನು ಗುರುತಿಸಿ ಅಭಿನಂದಿಸುವುದರಲ್ಲಿ ಸಿಗುವ ಆತ್ಮ ತೃಪ್ತಿಇನ್ನಾವುದೇ ಸೇವೆಯಿಂದ ಸಿಗುವುದು ದುರ್ಲಭ. ಹೀಗಾಗಿ ಕಲಾ ಸೇವೆಯಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊoಡಿದ್ದೇನೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಯಕ್ಷಲೋಕ ಹೆಬ್ಬೇರಿ ಸಂಸ್ಥೆಯ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಾವು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಅದೇ ಉದ್ದೇಶದಿಂದ ಹಲವಾರು ಸಂಘಸoಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಯಕ್ಷಗಾನ ಆಸಕ್ತಿ ನನಗೆ ವರವಾಗಿ ಪರಿಣಮಿಸಿದೆ. 60ರ ವರ್ಷದಲ್ಲಿ ಯಕ್ಷಗಾನವನ್ನು ಗುರು ಸಂಜೀವ ಸುವರ್ಣರ ಬಳಿ ಕಲಿತು 400ಕ್ಕೂ ಅಧಿಕ ಪ್ರದರ್ಶನ ಮಾಡಿದ್ದೇನೆ. ಯಕ್ಷಲೋಕದ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರೊಡನೆಯೂ ಪಾತ್ರವನ್ನು ಮಾಡಿದ ಸಂತೃಪ್ತಿಯಿದೆ. ಈ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸುವ, ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ಸುವರ್ಣವಕಾಶ ಲಭಿಸಿತು. ಈ ಕೊಡುಗೆಗಾಗಿಯೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಗೌರವ ಒಲಿದು ಬಂತು. ಇದು ಯಕ್ಷಗಾನಕ್ಕೆ ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಲು ಆ ದೇವರ ಕೃಪೆ ಎಂದೇ ನಂಬಿದ್ದೇನೆ. ನನ್ನ ಟ್ರಸ್ಟ್ ಮೂಲಕ ಸಾಧಕ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಮಾಡುತ್ತಿದ್ದೇನೆ. ಇದೇ ಸೇವೆ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿಯೂ ಮುಂದುವರಿಸಿದ್ದೇನೆ. ಸೇವೆಯಲ್ಲಿಯೇ ಬದುಕಿನ ಸಾರ್ಥಕವನ್ನು ಕಂಡುಕೊಂಡಿದ್ದೇನೆ ಎಂದು ಅವರು ತಿಳಿಸಿದರು.
ಕಲಾ ಪೋಷಕ ವಿಜಯ ಕುಮಾರ್ ಕಳ್ತೂರು, ಆವರ್ಸೆ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಶಿಧರ ಶೆಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ವಾದಿರಾಜ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ, ಕಲಾ ಪೋಷಕರೂ ಆಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಯಕ್ಷಲೋಕ ಹೆಬ್ಬೇರಿಯ ಅಧ್ಯಕ್ಷ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ಗೌರವಾಧ್ಯಕ್ಷ ಲಕ್ಷ್ಮಿಶ ಭಾರದ್ವಾಜ್, ವಿಜಯೇಂದ್ರ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಲೋಕ ಹೆಬ್ಬೇರಿ ತಂಡದಿoದ ಗುರು ಸುಬ್ರಹ್ಮಣ್ಯ ಪ್ರಸಾದ್ ಅವರ ನಿರ್ದೇಶನದಲ್ಲಿ ‘ಶ್ರೀರಾಮ ದರ್ಶನ’ ಯಕ್ಷಗಾನ ಪ್ರದರ್ಶನ ನಡೆಯಿತು.