ಮಣಿಪಾಲ : ಅಪ್ಲಾಸ್ಟಿಕ್ ಅನೀಮಿಯಾದಿಂದ ಬಳಲುತ್ತಿರುವ 15 ವರ್ಷದ ಬಾಲಕನಿಗೆ ಅಸ್ಥಿ ಮಜ್ಜೆ ಕಸಿಯೊಂದೇ ಪರಿಹಾರವಾಗಿತ್ತು. ಇದಕ್ಕೆ ಸುಮಾರು 18 ರಿಂದ 20 ಲಕ್ಷ ಖರ್ಚು ಆಗಬಹುದೆಂದು ಚಿಕಿತ್ಸೆ ನೀಡುತ್ತಿರುವ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯರು ತಿಳಿಸಿದ್ದರು.
ಬಡವರಾಗಿದ್ದ ಕುಟುಂಬಸ್ಥರಿಗೆ ಇದನ್ನು ಭರಿಸುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ನೇತೃತ್ವವಹಿಸಿದ್ದ ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲಜಿ ವಿಭಾಗದ ಮುಖ್ಯಸ್ಥರಾದ ಡಾ ವಾಸುದೇವ್ ಭಟ್ ತಂಡದವರು ಹೋಂ ಡಾಕ್ಟರ್ ಫೌಂಡೇಶನ್ನ ನೇತೃತ್ವ ವಹಿಸಿರುವ ಡಾ. ಶಶಿಕಿರಣ್ ಶೆಟ್ಟಿ ಅವರಿಗೆ ಸಹಕರಿಸುವಂತೆ ಮನವಿ ಮಾಡಿದರು.
ಅವರು ತಮ್ಮ ಫೌಂಡೇಶನ್ನ ಸದಸ್ಯರು ಮತ್ತು ದಾನಿಗಳ ಸಹಕಾರದೊಂದಿಗೆ 22 ದಿನದಲ್ಲಿ 20 ಲಕ್ಷ ಸಂಗ್ರಹಿಸಿ ಬಾಲಕನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಇದರ ಕುರಿತು ನಿಧಿ ಹಸ್ತಾಂತರ ಮತ್ತು ಶುಭ ಕೋರುವ ಕಾರ್ಯಕ್ರಮವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಕಾರದೊಂದಿಗೆ ಮಹಿಳಾ ಮತ್ತು ಮಕ್ಕಳ ವಿಭಾಗದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ ಶಶಿಕಿರಣ್ ಶೆಟ್ಟಿ “ನಾವು ಈಗಾಗಲೇ ಸಣ್ಣ ಮೊತ್ತದ ನೆರವು ನೀಡುವ ಮೂಲಕ ಹಲವಾರು ನೊಂದವರಿಗೆ, ಅಶಕ್ತರಿಗೆ ಸಹಾಯ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಸಂಗ್ರಹಣಾ ಉದ್ದೇಶದೊಂದಿಗೆ ಯಶಸ್ವಿಯಾಗಿದ್ದೇವೆ” ಎಂದರು. ಸಣ್ಣ ಮೊತ್ತದಿಂದ ದೊಡ್ಡ ಮೊತ್ತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.