ಕೋಟ : ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸದ್ಭಾವನಾ-2024 ಎಂಬ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 16ರಂದು ಕೋಟದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಬಾರಿ ಕನ್ನಡ ನಾಡು ಕಂಡ ಉದ್ಯಮಿ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 20 ಸಾವಿರ ರೂ. ಮೌಲ್ಯದ ಬೆಳ್ಳಿಫಲಕ, ನಗದು ಒಳಗೊಂಡಿದೆ. ಇದೇ ವೇಳೆ ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಲಾಗುವುದು. ವಿಶೇಷ ಪುರಸ್ಕಾರವನ್ನು ಪರಿಸರ ಸ್ನೇಹಿ ಸಂಘಟನೆ ಸ್ವಚ್ಛ ಬ್ರಿಗೇಡ್ ಕಾರ್ಕಳ ತಂಡಕ್ಕೆ ನೀಡಲಿದೆ. ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿ ವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳಿಗೆ ನೀಡಲಾಗುವುದು. ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ದೊಡ್ಡಣ್ಣ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾಗವಹಿಸಲಿರುವರು.
ಮಯೂರಿ ನೃತ್ಯ ತಂಡ ಕುಂಭಾಶಿ, ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಅವಿಜಿತ ಜಿಲ್ಲೆಗಳ ಪ್ರಸಿದ್ಧ ನಾಟಕ ತಂಡ ಪಿಂಗಾರ್ ಕಲಾವಿದರ್ ಬಿದ್ರೆ ಇವರ ಹಾಸ್ಯಮಯ ಕದಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ಹಾಗೂ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ತಿಳಿಸಿದ್ದಾರೆ.