ಉಡುಪಿ : 37 ವರ್ಷಗಳ ನಂತರ ಭಂಡಾರಿಕೇರಿ ಶ್ರೀಪಾದರು ತಮ್ಮ ಆತ್ಮೀಯರಾದ ಪರ್ಯಾಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಯ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಚಾತುರ್ಮಾಸ್ಯ ಸ್ವೀಕರಿಸುವ ಪ್ರಯುಕ್ತ ಉಡುಪಿ ಕ್ಷೇತ್ರಕ್ಕೆ ಆಗಮಿಸಿದಾಗ ಶ್ರೀ ಕೃಷ್ಣ ಮಠದ ವತಿಯಿಂದ ಹಾಗೂ ಸ್ವಾಗತ ಕೋರಲಾಯಿತು. ಶ್ರೀಕೃಷ್ಣ ಸೇವಾ ಸಮಿತಿಯ ವತಿಯಿಂದ ಶ್ರೀಮಠದ ಪಟ್ಟದ ದೇವರು ಹಾಗೂ ಶ್ರೀಪಾದರನ್ನು ಸುವರ್ಣ ಪಲ್ಲಕ್ಕಿಯೊಂದಿಗೆ ಸ್ವಾಗತಿಸಿ ಪರ್ಯಾಯ ಶ್ರೀಪಾದರು ಸಾಂಪ್ರದಾಯಿಕ ಸ್ವಾಗತ ಸಲ್ಲಿಸಿದರು. ತದನಂತರ ರಾಜಾಂಗಣದಲ್ಲಿ ನಡೆದ ಭವ್ಯ ಸ್ವಾಗತ ಸಮಾರಂಭ ನೆರವೇರಿತು.
ಭಂಡಾರಕೇರಿ ಶ್ರೀಪಾದರ ಚಾತುರ್ಮಾಸ್ಯದ ಸ್ವಾಗತ ಸಮಾರಂಭ ಸಭೆಯಲ್ಲಿ ಅಧ್ಯಕ್ಷೀಯ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರು, ಭಂಡಾರಕೇರಿ ಶ್ರೀಗಳು ಉಡುಪಿಯಲ್ಲಿ 37 ವರ್ಷಗಳ ಬಳಿಕ ಚಾತುರ್ಮಾಸ್ಯ ಸ್ವೀಕರಿಸಲಿದ್ದಾರೆ. ಭಾಗವತ ಫಲ ಭಗವದ್ಗೀತೆ ಕ್ಷೀರ ಎರಡರ ಪ್ರಸರಣ ಉಡುಪಿಯ ಜನತೆಗೆ ಆಗಲಿದೆ. ಉಡುಪಿ ಕ್ಷೇತ್ರವಾಗಿದ್ದು ಸದಾ ಒಂದಲ್ಲ ಒಂದು ಯತಿಗಳ ಪಾಠ ಪ್ರವಚನ ಚಾತುರ್ಮಾಸ್ಯ ಪರ್ವಕಾಲ ಸಂಸ್ಕೃತಿಯ ಕಾರ್ಯಕ್ರಮ ನಿತ್ಯ ರಥೋತ್ಸವ ನಿತ್ಯಾನ್ನದಾನ ಹೀಗೆ ಸದಾ ದೈವಿಕ ವಾತಾವರಣದಿಂದ ಕೂಡಿರುವ ಉಡುಪಿಯ ಮಹತ್ವವನ್ನು ಎಲ್ಲರೂ ಅರಿಯುವಂತಾಗಬೇಕು.
ಭಂಡಾರ ಕೇರಿ ಶ್ರೀಪಾದರು ನಡೆಸಲಿರುವ ಮನೆ ಮನೆಯಲ್ಲಿ ಭಾಗವತ ಪ್ರವಚನ ಕಾರ್ಯಕ್ರಮದ ಉಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಪುತ್ತಿಗೆ ಶ್ರೀಪಾದರು ಆಶೀರ್ವಚನಗೈದರು.