ಮಂಗಳೂರು : ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಡಿವೈಎಫ್ಐನಿಂದ ನಡೆದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗೋಬ್ಯಾಕ್ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಪ್ರತಿಭಟನೆ ವೇಳೆ ಎಎಸ್ಐ ಒಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವ ಹಕ್ಕುಗಳನ್ನು ದಮನಿಸುತ್ತಿದ್ದಾರೆಂದು ಆರೋಪಿಸಿ ಡಿವೈಎಫ್ಐ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವಿರುದ್ಧ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ರಸ್ತೆ ತಡೆ ಪ್ರತಿಭಟನೆ ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಪೊಲೀಸ್ ಕಮಿಷನರ್ ವಿರುದ್ಧ ಗೋಬ್ಯಾಕ್ ಘೋಷಣೆ ಕೇಳಿ ಬಂದಿತು. ಅಲ್ಲದೆ ಡಿಸಿಪಿ, ಸ್ಪೀಕರ್ ಖಾದರ್, ರಾಜ್ಯ ಸರಕಾರದ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಘೋಷಣೆ ಕೂಗುತ್ತಿದ್ದಂತೆ ಪೊಲೀಸರು ರಸ್ತೆತಡೆಗೆ ಅವಕಾಶ ನೀಡದೆ ಡಿವೈಎಫ್ಐ ಮುಖಂಡ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್ ಸೇರಿದಂತೆ ಮಹಿಳೆಯರನ್ನು ಒಳಗೊಂಡ ಸುಮಾರು 35ರಷ್ಟು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ವ್ಯಾನಿನತ್ತ ಎಳೆದೊಯ್ದಿದ್ದಾರೆ. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ನೂಕಾಟ ತಳ್ಳಾಟದಲ್ಲಿ ಕದ್ರಿ ಠಾಣೆಯ ಎಎಸ್ಐ ಮುತ್ತಪ್ಪರವರು ಅಂಗಾತ ಬಿದ್ದಿದ್ದಾರೆ. ಪರಿಣಾಮ ಅವರ ತಲೆಯ ಹಿಂಭಾಗಕ್ಕೆ ಕಾಂಕ್ರೀಟ್ ರಸ್ತೆಯ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಎರಡು ದಿನಗಳ ಹಿಂದೆ ನಂತೂರು-ಸುರತ್ಕಲ್ ಹೆದ್ದಾರಿ ದುರಸ್ತಿ ಮಾಡಬೇಕೆಂದು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಕೂಳೂರು ಸೇತುವೆಯ ಬಳಿ ಪ್ರತಿಭಟನೆ ನಡೆದಿತ್ತು. ಪೊಲೀಸ್ ಅನುಮತಿ ಇಲ್ಲದಿದ್ದರೂ ಪ್ರತಿಭಟನೆ ನಡೆಸಿದ್ದಾರೆಂದು ಕಾವೂರು ಠಾಣೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುನೀರ್ ಕಾಟಿಪಳ್ಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕೇವಲ 15ದಿನಗಳಲ್ಲಿ 2ಎಫ್ಐಆರ್ ದಾಖಲಿಸಿದ್ದನ್ನು ವಿರೋಧಿಸಿ, ಪೊಲೀಸ್ ಕಮಿಷನರ್ ವರ್ಗಾವಣೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆ ಆಯೋಜಿಸಲಾಗಿತ್ತು.