ಉಡುಪಿ : ನಾಡೋಜ ಎಚ್. ಎಲ್. ನಾಗೇಗೌಡರಿಂದ 1970ರಲ್ಲಿ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಆಧುನಿಕತೆಯ ನಡುವೆ ಮರೆಯಾಗುತ್ತಿರುವ ನಾಡಿನ ಜಾನಪದ ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ, ಪುನರುಜೀವನ ಹಾಗೂ ಪ್ರಸಾರದ ಕಾರ್ಯದಲ್ಲಿ ನಿರತವಾಗಿದೆ.
ಇದರ ಉಡುಪಿ ಜಿಲ್ಲಾ ಘಟಕವು ಖ್ಯಾತ ಸಮಾಜ ಸೇವಕ, ಕಲಾವಿದ, ಉದ್ಯಮಿ ಹಾಗೂ ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ವಿವಿಧ ಕಾರ್ಯಕ್ರಮಗಳ ಆಯೋಜನೆ, ಜಾನಪದ ಕಲಾವಿದರಿಗೆ ಸಹಾಯಹಸ್ತ, ಹಿರಿಯ ಕಲಾವಿದರು. ಮತ್ತು ಸಂಘಟಕರನ್ನು ಗುರುತಿಸಿ, ಗೌರವಿಸುವ ಮೂಲಕ ಕ್ರಿಯಾಶೀಲವಾಗಿದೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಇದೀಗ ಜಾನಪದ ಹಬ್ಬ – 2024 ಕಾರ್ಯಕ್ರಮವನ್ನು ರವಿವಾರ, 27 ಅಕ್ಟೋಬರ್ 2024ರಂದು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9:30ರಿಂದ ಸಂಜೆ 4:30ರ ವರೆಗೆ ಕುಣಿತ ಭಜನೆ, ಹೋಳಿ ಕುಣಿತ, ಗೋಂದೋಳು ಕುಣಿತ, ಜಾನಪದ ವಾದ್ಯಗೋಷ್ಟಿ ಹಾಗೂ ಚೇತೋಹಾರಿ ಪ್ರದರ್ಶನಕ್ಕೆ ಹೆಸರಾದ ಕಲಾಮಯ ಉಡುಪಿ ತಂಡದವರಿಂದ ವೈವಿಧ್ಯಮಯ ಜಾನಪದ ನೃತ್ಯ ಹಾಗೂ ಸಂಗೀತ ಪ್ರದರ್ಶನ ನಡೆಯಲಿದ್ದು, ಕೇರಳ ವಯನಾಡಿನ ಅಪರೂಪದ ಜಾನಪದ ಕಲೆ ಗೋತ್ರಂ ನೃತ್ಯ ವಿಶೇಷ ಆಕರ್ಷಣೆಯಾಗಿದೆ ಎಂದರು.
ಕಾರ್ಯದರ್ಶಿ ರವಿರಾಜ ನಾಯಕ್ ಮಾತನಾಡಿ, ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು (ರಿ) ಉಡುಪಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ) ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಡುಪಿ ಆಯೋಜಿಸುತ್ತಿರುವ ಈ ಜಾನಪದ ಹಬ್ಬವನ್ನು ಪರ್ಯಾಯ ಶ್ರೀ ಪುತ್ರಿಗೆ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಕಿಶೋರ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗುಜ್ಜಾಡಿ ಸ್ವರ್ಣ ಜ್ಯವೆಲ್ಲರ್ಸ್ ಉಡುಪಿಯ ಮುಖ್ಯ ಹಣಕಾಸು ಅಧಿಕಾರಿ ಶ್ರೀ ವರುಣ್ ರಾಮದಾಸ ನಾಯಕ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಹಾಗೂ ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಶ್ರೀ ಮುರಳಿ ಕಡೆಕಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 3:45ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರದ ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ್ ಕೊಡವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯೋಗ ಟೀಚರ್ ಶೋಭಾ ಶೆಟ್ಟಿ ಅವರಿಗೆ ಜಾನಪದ ಸಾಂಸ್ಕೃತಿಕ ಯೋಗ ಸಾಧಕ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ನಾಡಿನ ಅಪರೂಪದ ಜಾನಪದ ಕಲೆಗಳನ್ನು ಕಣ್ಣುಂಬಿಸಿಕೊಂಡು, ಅರಿಯುವ ಅವಕಾಶ ನೀಡುವ ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಸಹೃದಯಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ರವಿರಾಜ ನಾಯಕ್, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸುನೀಲ್ ಕುಮಾರ್ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ ಕಾರ್ಯಧ್ಯಕ್ಷರಾದ ಬಿ. ಅರುಣ್ ಕುಮಾರ್ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಗೋಪಾಲ್ ಸಿ. ಬಂಗೇರ ಹಾಗೂ ಖಜಾಂಚಿ ಪ್ರಶಾಂತ್ ಭಂಡಾರಿ ಉಪಸ್ಥಿತರಿದ್ದರು.