Dakshina Kannada
ಮಂಗಳೂರು : ಪ್ರವಾಸಿಯೊಬ್ಬರು ನಗರದ ರೆಸಾರ್ಟ್ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮಡಿಕೇರಿಯ ಕುಶಾಲನಗರದ ಪ್ರವಾಸಿ ನಿಶಾಂತ್ ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ನಿಶಾಂತ್ ಕುಶಾಲನಗರದಲ್ಲಿ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು. ಪ್ರವಾಸಕ್ಕೆಂದು ಮಂಗಳೂರಿಗೆ ಸ್ನೇಹಿತನ ಜೊತೆ ಬಂದ ಸಂದರ್ಭ ದುರ್ಘಟನೆ ಸಂಭವಿಸಿದೆ. ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಉಡುಪಿ : ಸಮಾಜ ಸೇವಕ, ನುರಿತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಅವರ ಮನೆಗೇ ತೆರಳಿ ಸನ್ಮಾನಿಸಲಾಯಿತು.
ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಅವರು ಈಶ್ವರ್ ಮಲ್ಪೆ ಸಾಧನೆ, ಸನ್ಮಾನಗಳ ವಿವರವನ್ನೊಳಗೊಂಡ ಅಭಿನಂದನ ಪತ್ರ ವಾಚಿಸಿದರು. ಅಧ್ಯಕ್ಷ ಚಂದ್ರಕಾಂತ ಕೆ.ಎನ್. ಶಾಲು ಹೊದಿಸಿ ಸನ್ಮಾನಿಸಿದರು. ಪೂರ್ವಾದ್ಯಕ್ಷ ಶಶಿಧರ ಭಟ್ ನಿಧಿ ಸಮರ್ಪಿಸಿದರು.
ಸನ್ಮಾನ ಸ್ವೀಕರಿಸಿದ ಈಶ್ವರ್ ಮಲ್ಪೆ ಮಾತನಾಡಿ ಎಲ್ಲರ ಶುಭ ಹಾರೈಕೆ, ಬೆಂಬಲ, ಪ್ರೋತ್ಸಾಹ ಹಾಗೂ ದೇವರ ದಯೆಯಿಂದ ತನಗೆ ಇಂಥ ಪುಣ್ಯಕಾರ್ಯ ಮಾಡಲು ಶಕ್ತಿ ಬಂದಿದೆ. ಅದನ್ನು ಮುನ್ನಡೆಸಿಕೊಂಡು ಹೋಗುವ ಆಶಯ ಇದೆ ಎಂದರು.
ಪೂರ್ವಾದ್ಯಕ್ಷರಾದ ವಿಷ್ಣು ಪಾಡಿಗಾರ್ ಮತ್ತು ಎಂ.ಎಸ್. ವಿಷ್ಣು, ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು : ರೆಸಾರ್ಟ್ ಮತ್ತು ಹೋಮ್ಸ್ಟೇಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದಲ್ಲದೇ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೂಚಿಸಿದ್ದಾರೆ.
ಬುಧವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ರೆಸಾರ್ಟ್, ಹೋಮ್ ಸ್ಟೇ ಮಾಲಕರ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್/ಹೋಮ್ ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಲಾಯಿತು.
ಸುಮಾರು 118 ರೆಸಾರ್ಟ್/ಹೋಮ್ ಸ್ಟೇ ಮಾಲಕರು, ಅಬಕಾರಿ, ಪ್ರವಾಸೋದ್ಯಮ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿಗೆ ತಿಂಗಳಾಂತ್ಯದೊಳಗೆ ಚಾಲನೆ : ಸಂಸದ ಚೌಟ
ಮಂಗಳೂರು : ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದ್ದು, ಮಾರ್ಚ್ ಅಂತ್ಯದೊಳಗೆ ಇದಕ್ಕೆ ಚಾಲನೆ ನೀಡುವರು ಎಂದು ಸಂಸದ ಕ್ಯಾ|ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಸಂಸದರು, ಒಂದು ದಶಕದ ಬೇಡಿಕೆ ಇದು ಎಂದು ವಿವರಿಸಿದ್ದಾರೆ. ಈ ರೈಲಿಗೆ ಹಸಿರು ನಿಶಾನೆ ತೋರುವ ಬಗ್ಗೆ ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಿದ್ದು, ಉದ್ಘಾಟನೆಗೆ ಸಮಯ ನಿಗದಿಯಾಗಲಿದೆ. ಬಳಿಕ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ರೈಲು ಸೇವೆ ಪ್ರಾರಂಭವಾಗಲಿದೆ.
ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿನ ಸುಮಾರು ಮೂವತ್ತಕ್ಕೂ ಅಧಿಕ ಕೈದಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನ ಆಹಾರ ಸೇವಿಸಿದ ಕೆಲ ಸಮಯದ ಬಳಿಕ ಕೈದಿಗಳು ವಾಂತಿ ಮಾಡಲು ಆರಂಭಿಸಿದ್ದಾರೆ. ಇನ್ನೂ ಕೆಲವರಿಗೆ ವಾಂತಿಭೇದಿ ಎರಡೂ ಕೂಡಾ ಕಾಣಸಿಕೊಂಡು ತಲೆ ಸುತ್ತಿ ಬಿದ್ದಿದ್ದಾರೆ.
ಕೈದಿಗಳ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ತಕ್ಷಣ ಜೈಲಿನ ಅಧಿಕಾರಿಗಳು ಭದ್ರತೆಯೊಂದಿಗೆ ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್ಗೆ ಹಲವರು ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫುಡ್ ಪಾಯ್ಸನ್ ಆಗಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನೀರು ಅಥವಾ ಸೇವಿಸಿದ ಆಹಾರದಲ್ಲಿ ವಿಷ ಪದಾರ್ಥ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಕೆಲ ಕೈದಿಗಳು ತೀವ್ರ ಅಸ್ವಸ್ಥರಾಗಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಅಭಾವ ನೀಗಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಭೆ ನಡೆಸಬೇಕಿದೆ. ಕಡಿಮೆ ದರದಲ್ಲಿ ಜನರಿಗೆ ಮರಳು ದೊರೆಯಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೆ ನಾನು ಸಚಿವನಾಗಿದ್ದಾಗ ಸ್ಯಾಂಡ್ ಬಜಾರ್ ಎಂಬ ಮೊಬೈಲ್ ಆ್ಯಪ್ ರೂಪಿಸಿ ಅದರ ಮೂಲಕ ನಿಗದಿತ ಸಮಯದಲ್ಲಿ ನಿಗದಿತ ಬೆಲೆಗೆ ಜನರಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಸರಕಾರ ಬದಲಾದ ಮೇಲೆ ಆ ವ್ಯವಸ್ಥೆ ನಿಲ್ಲಿಸಲಾಗಿದೆ. ಈಗ ಮತ್ತೆ ಸ್ಯಾಂಡ್ ಬಜಾರ್ ಆ್ಯಪ್ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಅಕ್ರಮ ಮರಳುಗಾರಿಕೆ ತಡೆಯುವ ಹಿನ್ನೆಲೆಯಲ್ಲಿ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖಾದರ್ ಅವರು ಅಧಿಕಾರಿಗಳಿಗೆ ಅಧಿಕಾರ, ಕಚೇರಿ ನೀಡಿದ್ದು ಜನರ ಸಮಸ್ಯೆ ನೀಗಿಸಲಿಕ್ಕಾಗಿಯೇ ಹೊರತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಲ್ಲ. ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆಯನ್ನು ಜಿಲ್ಲಾಡಳಿತ ಮರು ಸ್ಥಾಪಿಸಿ ಜನರ ಸಮಸ್ಯೆ ನೀಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ತೀವ್ರ ಮರಳು ಅಭಾವ ಎದುರಾದಾಗ ಒಂದೇ ದಿನದಲ್ಲಿ ಸಿಆರ್ಝಡ್ ವ್ಯಾಪ್ತಿಯ ಮರಳು ದಿಬ್ಬ ತೆರವುಗೊಳಿಸುವ ಆದೇಶ ಜಾರಿ ಮಾಡಿ ಜನರಿಗೆ ಮರಳು ನೀಡುವ ಕಾರ್ಯ ಮಾಡಲಾಗಿತ್ತು. ಈಗ ಮತ್ತೆ ಮರಳು ಅಭಾವ ಸೃಷ್ಟಿ ಆಗಿರುವಾಗ ಕೇಂದ್ರ ಸರಕಾರದಿಂದ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಆದೇಶವನ್ನು ಏಕೆ ಮಾಡಲಾಗುತ್ತಿಲ್ಲ? ಎಂದು ಸ್ಪೀಕರ್ ಪ್ರಶ್ನಿಸಿದರು.
ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಲಿ : ವೇದವ್ಯಾಸ ಕಾಮತ್
ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಬ್ಯಾಂಕ್ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರ ಇನ್ನಷ್ಟು ಶೈಕ್ಷಣಿಕ ಸಾಧನೆಗೆ ಪ್ರೇರಣೆ ನೀಡಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಉರ್ವ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ 650 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮೀನು ಮಾರಾಟ ಫೆಡರೇಶನ್ ಮತ್ತು ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಕಳೆದ 15 ವರ್ಷಗಳಿಂದ ಫೆಡರೇಶನ್ ನಿರಂತರವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪ ಮಾಡುವಂತೆ ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮೇಯರ್ ಶ್ರೀ ಮನೋಜ್ ಕುಮಾರ್ ಮಾತನಾಡಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷರಾದ ಶ್ರೀ ಮೋಹನ್ ಬೆಂಗ್ರೆ, ದ.ಕ. ಜಿಲ್ಲಾ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷರಾದ ಶ್ರೀ ಭರತ್ ಉಳ್ಳಾಲ, ಬಿಜೆಪಿ ಮಂಗಳೂರು ನಗರ ದಕ್ಷಿಣ ಉಪಾಧ್ಯಕ್ಷರಾದ ಶ್ರೀ ಗೌತಮ್ ಕೋಡಿಕಲ್,ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷರಾದ ಶ್ರೀ ಲೋಕೇಶ್ ಸುವರ್ಣ, ಮಹಾನಗರ ಪಾಲಿಕೆ ಸದಸ್ಯೆ ನಯನ ಆರ್. ಕೋಟ್ಯಾನ್, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಉಷಾರಾಣಿ, ಮಹಾಲಕ್ಷ್ಮೀ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಮತಿ ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ದರ್ಶನ್ ವಂದಿಸಿದರು.
ದಕ್ಷಿಣ ಕನ್ನಡಕ್ಕೆ ಹೆಚ್ಚಿನ ಹೂಡಿಕೆಗೆ ಆಗ್ರಹ: ಸಿಎಂಗೆ ಸಂಸದ ಕ್ಯಾ. ಚೌಟ ಪತ್ರ…!
ಮಂಗಳೂರು : ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಭೌಗೋಳಿಕ ಆಕರ್ಷಣೆ, ಅತ್ಯುತ್ತಮ ಬಂದರು ಸಂಪರ್ಕ, ಬಲಿಷ್ಠ ಮೂಲ ಸೌಕರ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಸಂಶೋಧನೆ, ಅಭಿವೃದ್ಧಿ (ಆರ್ ಡಿ), ಮಾಹಿತಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಸಾಗರ ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಕರಾವಳಿ ಭಾಗದಲ್ಲಿ ಎನ್ಐಟಿಕೆ, ಮಣಿಪಾಲ್ನಂತಹ ಸಂಸ್ಥೆಗಳು ಮಾನವ ಸಂಪತ್ತನ್ನು ರೂಪಿಸುತ್ತಿದ್ದು, ಆರ್ ಡಿ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಬಹುದು. ತಂತ್ರಜ್ಞಾನ ನಾವೀನ್ಯತೆಯ ಪಾರ್ಕ್ ಸ್ಥಾಪಿಸಬೇಕು. ಜತೆಗೆ ನವ ಮಂಗಳೂರು ಬಂದರಿನ ಅಭಿವೃದ್ಧಿ ಹಾಗೂ ಜಾಗತಿಕ ವ್ಯಾಪಾರ ಮತ್ತು ಉತ್ಪಾದನ ಕೈಗಾರಿಕೆಗಳನ್ನು ಆಕರ್ಷಿಸಲು ಸಮಗ್ರ ಕರಾವಳಿ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಕಡಲತೀರದಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಜೈವಿಕ ತಂತ್ರಜ್ಞಾನಗಳ ಉತ್ತೇಜನಕ್ಕೆ ಕರಾವಳಿಯ ಸಮು ದಾಯಗಳಿಗೆ ದೀರ್ಘಾವಧಿಯ ಉದ್ಯೋಗ ಒದಗಿಸುವುದು, ಸಮುದ್ರ ಸಂಶೋಧನೆ-ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ನಾಲ್ಕು ಜನರು ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಾವಲ್ ಕಟ್ಟೆ ಸಮೀಪ ಈ ಅಪಘಾತ ಸಂಭವಿಸಿದ್ದು, ಎಡಭಾಗದಲ್ಲಿ ಬರುತ್ತಿದ್ದ ಕಾರು ಬಲಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ.
ಇನ್ನೋವಾ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ಕಾರು ಪಲ್ಟಿ ಹೊಡೆದಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಅಪಘಾತದಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.