ಉಡುಪಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಶಿಸುತ್ತಿರುವ ಪ್ರಾಚೀನ ಸನಾತನ ಧರ್ಮದ ಸಂರಕ್ಷಣೆಗಾಗಿ ಮೊದಲ ಹೆಜ್ಜೆಯಾಗಿ ಮಹಾದೇವ ಸಂಸ್ಕೃತ ವೇದಾಗಮ ಪಾಠಶಾಲೆಯನ್ನು ಉದ್ಘಾಟಿಸಲಾಯಿತು. ಜಮ್ಮುವಿನ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಾಚೀನವಾದ ಪಂಚವಕ್ತ್ರ ಮಹಾದೇವ ಮಂದಿರದಲ್ಲಿ ವೇದ ಪಾಠಶಾಲೆಯ ಮತ್ತು ಶ್ರಾವಣ ಮಾಸದ ಭಜನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ಲ ಕಾಣ್ವಶಾಖೆಯ ವೇದ, ಕರ್ಮಕಾಂಡದಲ್ಲಿ ಆಗಮಾಧ್ಯಯನ, ಸಂಸ್ಕೃತ-ಭಗವದ್ಗೀತಾ ಅಧ್ಯಯನದ ಒಟ್ಟು ಏಳು ವರ್ಷಗಳ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪಾಠಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪ್ರಸಾದವನ್ನು ನೀಡುವ ಮೂಲಕ ಪಾಠಕ್ಕೆ ಚಾಲನೆಯನ್ನು ನೀಡಲಾಯಿತು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್ಯರು, ಪಂಚವಕ್ತ್ರ ಮಹಾದೇವ ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಸುರೇಶ್ ಕುಮಾರ್ ಶರ್ಮಾ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಒಟ್ಟು ಹತ್ತು ವಿದ್ಯಾರ್ಥಿಗಳು ಪಾಠ ಶಾಲೆಗೆ ಸೇರಿದ್ದಾರೆ. ಜಮ್ಮು ಪ್ರದೇಶದಲ್ಲಿ ಪ್ರಾಥಮಿಕ ಸ್ತರದ ಮೊದಲ ಪಾಠಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

