ಉಡುಪಿ : ಒಂದು ಧರ್ಮದವರು ಏನೂ ಬೇಕಾದರೂ ಹಾಕಿ ಪರೀಕ್ಷೆಗೆ ಬರಲಿ, ಇನ್ನೊಂದು ಧರ್ಮದವರು ಏನು ಹಾಕಬಾರದು ಎನ್ನುವುದು ನ್ಯಾಯ ಸಮ್ಮತವಾದ ತೀರ್ಮಾನ ಅಲ್ಲ. ಇಂತಹ ನಿರ್ಧಾರಗಳ ಹೆಸರಿನಲ್ಲಿ ಒಂದು ಸಮಾಜದ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಗೃಹ ಸಚಿವರು, ಶಿಕ್ಷಣ ಸಚಿವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರಕ್ಕೆ ಏನಾಗಿದೆ ಎಂಬುದೇ ಅರ್ಥ ಆಗುತ್ತಿಲ್ಲ. ಪರೀಕ್ಷಾ ಸಂದರ್ಭದಲ್ಲಿ ಕಿವಿಓಲೆ ತೆಗೆಯಲು ಒತ್ತಾಯಿಸುತ್ತಾರೆ ಎಂದು ಮಹಿಳಾ ಅಭ್ಯರ್ಥಿಗಳು ಕಣ್ಣೀರಿಟ್ಟಿದ್ದಾರೆ. ಮಾಂಗಲ್ಯ ತೆಗೆಯಬೇಕು ಎಂದಾಗ ಒಂದಿಷ್ಟು ಗಲಾಟೆ, ವಿವಾದ ಆಗಿತ್ತು. ಇದೀಗ ಜನಿವಾರ ತೆಗೆಯಲು ಆರಂಭಿಸಿದ್ದಾರೆ. ಜನಿವಾರದಿಂದ ನೇಣು ಹಾಕಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾರೆಂತೆ? ಸರಕಾರ, ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮಾಹಿತಿ ಇಲ್ಲದೇ ಪರೀಕ್ಷ ಕೇಂದ್ರದಲ್ಲಿನ ಸಾಮಾನ್ಯ ಸಿಬಂದಿ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಹಾಗಿದ್ದರೆ ಜನಿವಾರ ಹಾಕುವುದು ಬ್ರಾಹ್ಮಣರು ಮಾತ್ರವಲ್ಲ, ಗೌಡಸಾರಸ್ವತರು, ವಿಶ್ವಕರ್ಮ ಸಹಿತ ಹಲವು ಸಮುದಾಯಗಳು ಜನಿವಾರ ಪವಿತ್ರ ಎಂದು ಭಾವಿಸಿವೆ. ಈ ರೀತಿ ಜನಿವಾರ, ಮಾಂಗಲ್ಯ, ಕಿವಿಓಲೆ ತೆಗೆಯುವುದು ಯಾವ ಸರಕಾರಕ್ಕೂ ಶೋಭೆ ತರುವುದಿಲ್ಲ.
ಒಂದೊಮ್ಮೆ ಪರೀಕ್ಷಾ ಕೇಂದ್ರದ ಸಿಬಂದಿಯೇ ಈ ರೀತಿ ತಪ್ಪು ಮಾಡಿದ್ದರೆ ಮುಂದೆಂದೂ ಇಂತಹ ಘಟನೆ ನಡೆಯದ ಮಾದರಿಯಲ್ಲಿ ನ್ಯಾಯ ಸಮ್ಮತವಾಗಿ ಸಿಬಂದಿಗೆ ಶಿಕ್ಷೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.