ಉಡುಪಿ : ಯುವ ಯಕ್ಷಗಾನ ಕಲಾವಿದ, ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಬಳಿಯ ನೀರ್ಜೆಡ್ಡು ನಿವಾಸಿ ಗುರುಪ್ರಸಾದ್ ಕುಲಾಲ್ (25) ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಗುರುಪ್ರಸಾದ್ ಕುಲಾಲ್ ಹಲವು ವರ್ಷಗಳ ಕಾಲ ಮಂದಾರ್ತಿ, ಮಾರಣಕಟ್ಟೆ, ಹಾಲಾಡಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು.
ಉಡುಪಿ : ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರೂ ಪ್ರಸಂಗಕರ್ತರೂ ಆಗಿದ್ದ ಅಗರಿ ಶ್ರೀನಿವಾಸ ಭಾಗವತರ ನೆನಪಿನಲ್ಲಿ ನೀಡುವ ಅಗರಿ ಪ್ರಶಸ್ತಿ ಹಾಗೂ ಅವರ ಸುಪುತ್ರರೂ ಶ್ರೇಷ್ಠ ಭಾಗವತರೂ ಆಗಿದ್ದ ಅಗರಿ ರಘುರಾಮ ಭಾಗವತರ ನೆನಪಿನಲ್ಲಿ ನೀಡುವ ಅಗರಿ ಸಮ್ಮಾನ ಪ್ರದಾನ ಕಾರ್ಯಕ್ರಮ ಜರಗಿತು.
ಅಗರಿ ಪ್ರಶಸ್ತಿಯನ್ನು ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಸ್ವೀಕರಿಸಿದರು. ಉಡುಪಿಯ ಯಕ್ಷಗಾನ ಕಲಾರಂಗದ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯನ್ನು ಗುರುತಿಸಿ ನೀಡಲಾದ ಅಗರಿ ಸಮ್ಮಾನವನ್ನು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವೀಕರಿಸಿದರು. ಕಟೀಲು ಕ್ಷೇತ್ರದ ಹರಿನಾರಾಯಣ ದಾಸ ಅಸ್ರಣ್ಣರು, ಶ್ರೀಪತಿ ಭಟ್, ಅಗರಿ ರಾಘವೇಂದ್ರ ರಾವ್, ಸುಮಂಗಲ ರತ್ನಾಕರ್, ವಾದಿರಾಜ ಕಲ್ಲುರಾಯ, ಕೃಷ್ಣಪ್ರಕಾಶ್ ಉಳಿತ್ತಾಯ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿತು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್.ಎನ್. ಶೃಂಗೇಶ್ವರ ಉಪಸ್ಥಿತರಿದ್ದರು.
ಮಂಗಳೂರು : ನೇಪಾಳಕ್ಕೆ ಭೇಟಿ ನೀಡಿರುವ ತುಳುನಾಡಿನ ಬಂಟ್ವಾಳದ ಯುವಕರ ತಂಡವೊಂದು, ಅಲ್ಲಿನ ಪಶುಪತಿ ಮತ್ತು ಮುಕ್ತಿನಾಥ ದೇವಸ್ಥಾನದಲ್ಲಿ ತುಳು ಧ್ವಜ ಅರಳಿಸಿ ತುಳು ಪ್ರೇಮ ಮೆರೆದಿದ್ದಾರೆ.
ನೇಪಾಳದಲ್ಲಿರುವ ಚೀನಾ ಗಡಿ ಪ್ರದೇಶದ ಸಮುದ್ರ ಮಟ್ಟದಿಂದ 13000 ಅಡಿ ಎತ್ತರದಲ್ಲಿರುವ ಮುಕ್ತಿನಾಥ ದೇವಸ್ಥಾನದಲ್ಲಿ ತುಳುವ ಯುವಕರ ತಂಡ ತುಳು ಧ್ವಜ ಅರಳಿಸಿದೆ.
ತುಳು ಭಾಷೆಯನ್ನು ಕೇಂದ್ರ ಸರ್ಕಾರವು 8ನೇ ಪರಿಚ್ಚೇದಕ್ಕೆ ಮತ್ತು ಕರ್ನಾಟಕ ಸರ್ಕಾರವು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನು ಘೋಷಿಸವಂತಾಗಬೇಕು ಎಂದು ಈ ವೇಳೆ ಯುವಕರ ತಂಡ ಪ್ರಾರ್ಥಿಸಿದೆ.
ಬಂಟ್ವಾಳ ತಾಲೂಕಿನ ನರಿಕೊಂಬುವಿನ ಜಯಶ್ರೀ, ಜಯಕುಮಾರ್ ನೇತೃತ್ವದಲ್ಲಿ ತುಳುನಾಡ ಅಭಿಮಾನಿ ಸದಸ್ಯರು ನೇಪಾಳಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆಯೂ ತುಳು ಪ್ರೇಮವನ್ನು ಮೆರೆದುದಲ್ಲದೆ, ಜಾಗೃತಿಯನ್ನು ಮೂಡಿಸಿದರು.
ಕಳೆದ ವಾರ ನೇಪಾಳಕ್ಕೆ ತೆರಳುವ 117 ಮಂದಿ ಪ್ರಾಕೃತಿಕ ವಿಕೋಪದಿಂದಾಗಿ ದಾರಿ ಮಧ್ಯೆ ಸಿಲುಕಿದ್ದರು. ಆದರೆ ಜಯಕುಮಾರ್ ಮತ್ತು ಚಾಲಕರ ಧೈರ್ಯ ಹಾಗೂ ಸಮಯಪ್ರಜ್ಞೆಯಿಂದ ದೇವರ ದರುಶನ ಭಾಗ್ಯ ಸಿಕ್ಕಿದೆ.
ಉಡುಪಿ : ಇಂದು ಆಧುನಿಕತೆಯನ್ನು ಮೇಳೈಸಿಕೊಂಡು ವಿಜೃಂಭಿಸುತ್ತಿರುವ ಯಕ್ಷಗಾನ ಪ್ರದರ್ಶನದ ಅಬ್ಬರದ ನಡುವೆ ಶಾಸ್ತ್ರೀಯ ರೀತಿಯಲ್ಲಿ ಯಕ್ಷಗಾನವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಮುಂದಾಗಿರುವ ವಿದ್ವಾಂಸ ಡಾ.ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅನುಕರಣೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ವನಸುಮ ಟ್ರಸ್ಟ್ ಕಟಪಾಡಿ ಸಹಭಾಗಿತ್ವದಲ್ಲಿ ಖ್ಯಾತ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಹುಟ್ಟುಹಾಕಿರುವ ಶಾಸ್ತ್ರೀಯ ಯಕ್ಷ ಮೇಳ ಉಡುಪಿ ವತಿಯಿಂದ ಯಕ್ಷಗಾನ ಕಲಾರಂಗದ ಐವೈಸಿ ಸಭಾ ಭವನದಲ್ಲಿ ಭಾನುವಾರ ನಡೆದ ಋತುಪರ್ಣ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನದ ಹಿಂದೆ ಹೇಗಿತ್ತು ಎಂಬುದರ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವಿಲ್ಲ. ಇಂದು ಆಧುನಿಕತೆಯ ಕಾಲಘಟ್ಟದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕಲಾವಿದರಿಗೆ ಉತ್ತಮ ಸಂಪಾದನೆಯ ದಾರಿ ನೀಡಿದೆ. ಹಿಂದಿನ ಯಕ್ಷಗಾನವನ್ನು ಕಂಡವರು, ಇಂದಿನ ಬದಲಾವಣೆಗಳನ್ನು ಕಂಡು ವ್ಯಥೆ ಪಟ್ಟಿರುವುದನ್ನು ಕಂಡಿದ್ದೇನೆ. ಈ ಸಂದರ್ಭದಲ್ಲಿ ಯಕ್ಷಗಾನದ ಶಾಸ್ತ್ರೀಯ ಮುಖ ಅಳಿದು ಹೋಗಬಾರದು ಎನ್ನುವ ತುಡಿತದೊಂದಿಗೆ ಎಲ್ಲಾ ವಿಭಾಗಗಳಲ್ಲಿ ವೃತ್ತಿಪರ ಪರಿಣತಿಯನ್ನು ಪಡೆದಿರುವ, ಪೂರ್ವ ತಯಾರಿಯಿಲ್ಲದ ಯಕ್ಷಗಾನಕ್ಕೆ ಸಮಯಾಧಾರಿತ ತಾಲೀಮು ಇದು ಶಾಸ್ತ್ರೀಯ ಯಕ್ಷಗಾನ ಮೇಳದ ವೈಶಿಷ್ಟö್ಯವಾಗಿರಬೇಕು ಎನ್ನುವ ತುಡಿತದೊಂದಿಗೆ ಅದನ್ನು ಕಾರ್ಯರೂಪಕ್ಕೆ ತಂದಿರುವ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ಪ್ರಯತ್ನ ಅಭಿನಂದನೀಯ. ಅವರೊಂದಿಗೆ ಪ್ರಸಿದ್ಧ ರಂಗನಿರ್ದೇಶಕ ಬಾಸುಮ ಕೊಡಗು ಅವರ ಚಿಂತನೆಗಳು ಮೇಳೈಸಿರುವುದು, ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರ ಕಲಾ ಪ್ರೋತ್ಸಾಹ ಇದೆಲ್ಲಾವನ್ನು ಕಂಡಾಗ ಕರಾವಳಿಯಲ್ಲಿ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎಂಬುದು ವೇದ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರ ರಂಗ ಪ್ರಯೋಗಗಳು ವಿಶಿಷ್ಟವಾಗಿರುವುದನ್ನು ಕಂಡಿದ್ದೇನೆ. ಶಾಸ್ತ್ರೀಯ ಯಕ್ಷಮೇಳವನ್ನು ಹುಟ್ಟುಹಾಕಿ ಆ ಮೂಲಕ ಯುವ ಪೀಳಿಗೆಗೆ ಶಾಸ್ತೀಯ ಯಕ್ಷಗಾನವನ್ನು ಪರಿಚಯ ಮಾಡಲು ಹೊರಟ ಅವರ ಪ್ರಯತ್ನ ಶ್ಲಾಘನೀಯ ಎಂದರು.
ವನಸುಮ ಟ್ರಸ್ಟ್ನ ಮುಖ್ಯಸ್ಥ, ರಂಗ ನಿರ್ದೇಶಕ ಬಾಸುಮ ಕೊಡಗು ಅವರು ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ರೂವಾರಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ, ಕಾರ್ಯದರ್ಶಿ ವಿನಯ ಆಚಾರ್ಯ ಮುಂಡ್ಕೂರು, ಗಣೇಶ್ ರಾವ್ ಎಲ್ಲೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಪ್ರದರ್ಶನಗೊಂಡ ಋತುಪರ್ಣ ಯಕ್ಷಗಾನ ಪ್ರದರ್ಶನದಲ್ಲಿ ವಿದ್ವಾಂಸ ಗುರುರಾಜ ಮಾರ್ಪಳ್ಳಿ ಅವರು ಋತುಪರ್ಣನಾಗಿ ಪಾತ್ರ ವಹಿಸಿದರು. ಬಾಹುಕನಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ, ಶನಿ ಪಾತ್ರದಲ್ಲಿ ಶ್ರೀನಿವಾಸ ತಂತ್ರಿ ಪಾದೂರು ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಕಿರಣ ಮಣಿಪಾಲ, ಮದ್ದಳೆ ಕೆ.ಜೆ.ಸುಧೀಂದ್ರ ಹಾಗೂ ಚೆಂಡೆಯಲ್ಲಿ ಕೆ.ಜೆ.ಕೃಷ್ಣ ಸಹಕರಿಸಿದರು.
ಪಾರಂಪರಿಕ ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ಗೆ ಅಭಿನಂದನೆಗಳು. ಓರ್ವ ವೃತ್ತಿ ಕಲಾವಿದನಾಗಿ ನನಗೆ ತುಂಬಾ ಸಂತೋಷವನ್ನು ಕೊಟ್ಟ ಯೋಜನೆಯಿದು. ಯಶಸ್ವಿಯಾಗಲೆಂದು ಖ್ಯಾತ ಯಕ್ಷಗಾನ ಕಲಾವಿದ ಕೋಟ ಸುರೇಶ್ರವರು ಜುಲೈ 27ರಂದು ವಿವೇಕ ವಿದ್ಯಾ ಸಂಸ್ಥೆಗಳ ಯಕ್ಷಶಿಕ್ಷಣವನ್ನು ಉದ್ಘಾಟಿಸಿ ನುಡಿದರು.
ಈ ಬಾರಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯ 24 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ಆರಂಭಗೊಂಡಿದ್ದು,ಇದಕ್ಕೆ ಕಾರಣೀಕರ್ತರಾದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಅಭಿನಂದನೀಯರು. ರಾಜ್ಯಕ್ಕೆ ಮಾದರಿಯಾದ ವಿವೇಕ ವಿದ್ಯಾಸಂಸ್ಥೆಯ ಆವರಣದಲ್ಲಿ ಹುಡುಗರ ಮತ್ತು ಹುಡುಗಿಯರ ಎರಡು ತಂಡಗಳಿಗೆ ಯಕ್ಷಶಿಕ್ಷಣ ನೀಡುತ್ತಿರುವುದು ಟ್ರಸ್ಟಿಗೆ ಅಭಿಮಾನದ ವಿಚಾರವಾಗಿದೆ, ಎಂಬುದಾಗಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು. ಈ ಎರಡೂ ಪ್ರೌಢಶಾಲೆಗಳಿಗೆ ಗುರುಗಳಾಗಿ ಕಾರ್ಯ ನಿರ್ವಹಿಸುವ ನರಸಿಂಹ ತುಂಗರು ಮಾತನಾಡುತ್ತಾ, ತಾನು ವಿದ್ಯಾರ್ಜನೆಗೈದ ಶಾಲೆಯಲ್ಲಿ ಯಕ್ಷಗಾನ ಕಲಿಸಲು ಅವಕಾಶ ದೊರೆತಿರುವುದು ತನಗೆ ಸಂತಸದ ವಿಚಾರವೆಂದು ನುಡಿದರು.
ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವುಡರು ಸ್ವಾಗತಿಸಿದರು. ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಹೊಳ್ಳರು ಧನ್ಯವಾದ ಸಲ್ಲಿಸಿದರು. ಉಪಪ್ರಾಂಶುಪಾಲರಾದ ವೆಂಕಟೇಶ ಉಡುಪ, ಯಕ್ಷಗಾನ ಉಸ್ತುವಾರಿ ಶಿಕ್ಷಕರಾದ ಮಹಾಲಕ್ಷ್ಮಿ ಸೋಮಯಾಜಿ ಹಾಗೂ ಬಾಲಕೃಷ್ಣ ನಕ್ಷತ್ರಿ ಉಪಸ್ಥಿತರಿದ್ದರು. ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆಯುವ ಶ್ರೀಕೃಷ್ಣ ಮಾಸೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡುತ್ತಾ, ಈ ಬಾರಿ ಉಡುಪಿಯ ಪ್ರಸಿದ್ಧ ಹಬ್ಬವಾದ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಮಾಸೋತ್ಸವ, ಡೋಲೋತ್ಸವ, ಲಡ್ಡೂತ್ಸವ ಎಂಬಿತ್ಯಾದಿಯಾಗಿ ಹಲವು ವಿಧದಲ್ಲಿ ಆಚರಿಸಲು ಸಂಕಲ್ಪಿಸಲಾಗಿದೆ ಎಂದರು.
ವಿದ್ವಾಂಸರ ಸಭೆಯಲ್ಲಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಈ ಶ್ರೀಕೃಷ್ಣ ಮಾಸೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಪುತ್ತಿಗೆ ಕಿರಿಯ ಶ್ರೀಪಾದರು, ಮಠದ ಆಡಳಿತ ವರ್ಗದವರು, ವಿದ್ವಾಂಸರು ಉಪಸ್ಥಿತರಿದ್ದರು.
ಮಂಗಳೂರು: ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ 11ನೇ ವರ್ಷದ ಸಂಭ್ರಮದಲ್ಲಿದ್ದು ವಿಶೇಷ ಸಂಚಿಕೆಯನ್ನು ಬಂಟ್ವಾಳ ಎಸ್ವಿಎಸ್ ದೇವಳ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ್ ಆಳ್ವ ಬಿಡುಗಡೆಗೊಳಿಸಿದರು.
ಬಳಿಕ ಮಾತಾಡಿದ ಅವರು, “ನಮ್ಮ ಸಂಸ್ಥೆಯ ವಿದ್ಯಾರ್ಥಿ ಆಗಿದ್ದಾಗಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡಿದ್ದ ಮಾಲತಿ ಶೆಟ್ಟಿ ಅವರು ಜಾಗತೀಕರಣದ ಈ ವೇಳೆಯಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ. ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಪ್ರಯತ್ನ ಪಟ್ಟಾಗ ಮಾತ್ರ ಕನ್ನಡಕ್ಕೆ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಕಳೆದ 10 ವರ್ಷಗಳಲ್ಲಿ 40 ಪುಸ್ತಕ ಬಿಡುಗಡೆ, 101 ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರು ಕನ್ನಡ ಭಾಷೆ ಉಳಿವಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದರು.
ಭುವನಾಭಿರಾಮ ಉಡುಪ ಮಾತನಾಡಿ, “ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಮಾಲತಿ ಶೆಟ್ಟಿ ಮತ್ತವರ ತಂಡಕ್ಕೆ ಅಭಿನಂದನೆಗಳು” ಎಂದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, “ಕನ್ನಡವನ್ನು ನಾವೇ ಉಳಿಸಬೇಕು. ಯಾಕೆಂದರೆ ಎಷ್ಟೋ ಶಾಲೆಗಳು ಮುಚ್ಚುವ ಹಂತದಲ್ಲಿವೆ, ಶಿಕ್ಷಕರಿಗೆ ಸಂಬಳ ಸಿಗುತ್ತಿಲ್ಲ. ನಾವು ಭಾಷೆಯನ್ನು ಉಳಿಸಿ ಬೆಳೆಸಲು ನಿರಂತರ ದುಡಿಯಬೇಕು” ಎಂದರು.
ವೇದಿಕೆಯಲ್ಲಿ ಮಾಲತಿ ಶೆಟ್ಟಿ ಮಾಣೂರು, ಸತ್ಯಪ್ರಕಾಶ್ ಶೆಟ್ಟಿ, ಸಾಹಿತಿ ಡಾ.ಅರುಣಾ ನಾಗರಾಜ್, ಸುರೇಖಾ ಯಳವಾರ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ : ಅರಮನೆ ವೆಲ್ಫೇರ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಡುಪಣಂಬೂರು ಮುಲ್ಕಿ ಸೀಮೆ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಏಷ್ಯಾ ನೆಟ್ ಸುವರ್ಣ ನ್ಯೂಸ್ನ ಮುಖ್ಯ ನಿರೂಪಕಿ ಭಾವನಾ ನಾಗಯ್ಯ ಮಾತನಾಡಿ ಮುಲ್ಕಿ ಸೀಮೆಯ ಅರಸು ಮನೆತನ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು ಇದರಿಂದಾಗಿ ಸೀಮೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳಗಿದೆ. ಸಂಸ್ಥಾನಗಳು ಬೆಳಗಿದ ದಾರಿಯಿಂದ ಪ್ರಾಂತ್ಯಗಳ ಬೆಳವಣಿಗೆಗೆ ದಾರಿದೀಪವಾಗಿದೆ ಎಂದರು. ವೇದಿಕೆಯಲ್ಲಿ ಏಷ್ಯಾ ನೆಟ್ ಸುವರ್ಣ ಸಂಸ್ಥೆಯ ಹಿರಿಯ ನಿರೂಪಕಿ ಶ್ವೇತಾ ಆಚಾರ್ಯ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಪಾರಂಪರಿಕ ವೈದ್ಯರಾದ ಜ್ಯೋತಿಶ್ಚಂದ್ರ ಭಟ್ ಹಾಗೂ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ನೇಮಕಗೊಂಡ ಗುರುರಾಜ್ ಎಸ್. ಪೂಜಾರಿರವರನ್ನು ಗೌರವಿಸಲಾಯಿತು. ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು ಸುಬ್ರಹ್ಮಣ್ಯ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ನೇಮಕಗೊಂಡ ಗುರುರಾಜ್ ಎಸ್. ಪೂಜಾರಿಯವರನ್ನು ಗೌರವಿಸಲಾಯಿತು. ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು
ಶ್ರೀ ಅಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಬಳಗದ ಪ್ರಯೋಜಕತ್ವದಿಂದ ಇತ್ತೀಚಿಗೆ ಅಗಲಿದ ಇರ್ವರು ಪ್ರಸಿದ್ಧ ಕಲಾವಿದರಾದ ಕೀರ್ತಿಶೇಷ ಸುಬ್ರಹ್ಮಣ್ಯ ದಾರೇಶ್ವರರ ಅನುಸ್ಮೃತಿ ಹಾಗೂ ಶ್ರೀಧರ ರಾವ್ ಕುಂಬ್ಳೆಯವರ ನುಡಿನಮನ ಯಕ್ಷಗಾನ ತಾಳಮದ್ದಳೆ ಶೇಣಿ ಗೋಪಾಲ ಕೃಷ್ಣ ಭಟ್ ವಿರಚಿತ ಕವಿರತ್ನ ಕಾಳಿದಾಸ ಮೂಡಬಿದರೆ ಸಮೀಪ ಸಂಪಿಗೆ ದುರ್ಗಾಜ್ಯೋತಿಷ್ಯಾಲಯದ ಡಾ. ಯೋಗಿ ಸುಧಾಕರ ತಂತ್ರಿಯವರ ಮನೆಯಂಗಳದಲ್ಲಿ ನಡೆಯಿತು.
ಕಾರ್ಯಕ್ರಮದ ಸನ್ಮಾನ ಹಾಗೂ ಪುಷ್ಪನಮನ ಸ್ವೀಕರಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಧಾರೇಶ್ವರರು ಸುಮಾರು ಹತ್ತು ವರ್ಷಗಳ ಕಾಲ ಉಡುಪಿ ರಾಜ್ಯಾಂಗಣದಲ್ಲಿ ಹಳೆಯ ಪೌರಾಣಿಕ ಪ್ರಸಂಗ ಯಕ್ಷಗಾನ ಅಷ್ಟಾಹ, ಸಪ್ತಾಹ ಮಾಡುತ್ತಿದ್ದೆವು. ಹಾಗೂ ಈ ವರ್ಷದ ಜಾನಪದ ಪ್ರಶಸ್ತಿಯನ್ನು ದಾರೇಶ್ವರರಿಗೆ ಕೊಡಬೇಕೆಂದು ಕೇಳಿದಾಗ ಈ ರೀತಿ ಕನಸಾಗಿ ಹೋಯಿತು ಎಂದು ನುಡಿದರು. ಅಲ್ಲದೇ ಮುಂದೆ ನನಗೆ ಒಂದು ಸರಕಾರದ ದೊಡ್ಡ ಜವಾಬ್ದಾರಿ ಎಂದರೇ ಈ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ “ಶ್ರೀದೇವಿ ಭುವನೇಶ್ವರೀ” ಎಂಬ ಯಕ್ಷಗಾನ ಪ್ರಸಂಗ ರಚನೆ ಮಾಡಿ ಯಕ್ಷಗಾನ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಮಂತ್ರಿಗಳು ಹೇಳಿದರು. ಅದಕ್ಕೆ ಹಲವಾರು ಯಕ್ಷಗಾನ ಕವಿಗಳನ್ನು ಸಂಪರ್ಕಿಸಿದಾಗ ಸಾಧ್ಯವಾಗದೇ ಇದ್ದಾಗ ಅದರ ಕಥೆ ಹಾಗೂ ಪ್ರಸಂಗ ರಚನೆಯನ್ನು ಕವಿ ಚಾರ ಪ್ರದೀಪ ಹೆಬ್ಬಾರ್ರಿಗೆ ಒಪ್ಪಿಕೊಂಡು ಪ್ರಾಥಕ್ಷತೆಗೆ ಮೊನ್ನೆ ಕೇವಲ ಎರಡು ದಿನದಲ್ಲಿ ಕರ್ನಾಟಕದ ಇತಿಹಾಸವನ್ನು ಬರೆದು ಕೊಟ್ಟರು. ಸೆಪ್ಟೆಂಬರ್ನಲ್ಲಿ ಮಂಗಳೂರು ಪುರಭವನದಲ್ಲಿ ಪ್ರಥಮ ಪ್ರದರ್ಶನ ನಡೆಯಲಿದೆ ಪ್ರದರ್ಶನಕ್ಕೆ ತಾವೆಲ್ಲರೂ ಬನ್ನಿ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರ ಶಿವರಾಮ ಶೆಟ್ಟರು ಮುಂಗಡವಾಗಿ ಹೇಳಿದರು.
ಡಾ. ಜ್ಯೋಶಿಯವರು ಗಾನ ದಾರೆ ದಾರೇಶ್ವರ ಎಂದು ಸುಬ್ರಮಣ್ಯ ಧಾರೇಶ್ವರರು ಸಂಗೀತ, ಹಾಗೂ ಜಾನಪದ, ಹಾಗೂ ಪೌರಾಣಿಕ ಹಿಡಿತಗಳಿಂದ ಪ್ರಸಂಗದ ಯಶಸ್ಸಿಗೆ ಕಾರಣನಾಗುತ್ತಿದ್ದರು. ನಾನು ಕಿರಿಮಂಜೇಶ್ವರ ಕಡೆಗೆ ಹೋದರೆ ಅವರ ಮನೆಯೇ ನನಗೆ ವಾಸವಾಗಿತ್ತು ಎಂದು ಧಾರೇಶ್ವರರ ಬಗ್ಗೆ ಹಾಗೂ ಕುಂಬ್ಳೆಯವರು ಸರಳ ಸಜ್ಜನ ವ್ಯಕ್ತಿ ಎಂದು ಅನುಸ್ಮೃತಿ ಮಾಡಿದರು.
ಡಾ. ಗಾಳಿಮನೆಯವರು ಕುಂಬ್ಳೆಯವರು ತಮ್ಮ ಊರಿನ ತಾಳಮದ್ದಳೆ ನನ್ನ ಕರೆದುಕೊಂಡು ಹೋಗಿ ಆದರ ಆತಿಥ್ಯ ನೀಡರು. ತುಂಬಿದ ಕೊಡ ತುಳುಕುದಿಲ್ಲ ಎಂಬ ಮಾತಿನಂತೆ ಹಲವಾರು ಸಂದರ್ಭದಲ್ಲಿ ನನ್ನಲ್ಲಿ ಆ ಪಾತ್ರ ಮಾಡುವುದು ಹೇಗೆ ಎಂದು ಕೇಳುವಂತಹ ಮುಗ್ಧತೆ ಮಗುವಿನ ಮನಸ್ಸು ಶ್ರೀಧರರಾಯರ ಪ್ರೀತಿಗೆ ಶಿರಬಾಗುವೇ ಎಂದು ಹೇಳಿದರು. ಎರಡು ಅನರ್ಘ್ಯ ಯಕ್ಷಗಾನ ಕ್ಷೇತ್ರದ ಮಹಾನ್ ಚೇತನಗಳ ಅನುಸ್ಮೃತಿ ಮಾಡಲು ಚಾರ ಪ್ರದೀಪ ಹೆಬ್ಬಾರ್ ಹಾಗೂ ಡಾ. ಗಾಳಿಮನೆಯವರು ಕೇಳಿದಾಗ ಆಯಿತು ಒಪ್ಪಿಗೆ ಕೊಟ್ಟೆ, ಆದರೇ ನನ್ನ ಮನೆಯಂಗಳದಲ್ಲಿ ಮಾಡಲು ನಾನು ಸರಕಾರಕ್ಕೆ ತೆರಿಗೆ ವಿಧಿಸಬೇಕಾಯಿತು. ಯಾವುದೋ ತೆರಿಗೆ ಇಲಾಖೆಗೆ ದೂರು ನೀಡದ ಕಾರಣ ಈ ರೀತಿ ಡಾ. ಯೋಗಿ ತಂತ್ರಿಗಳು ಏನೆಯಾಗಲಿ ಈ ಕಾರ್ಯಕ್ರಮ ಮಾಡಲು ಒಪ್ಪಿದೆ. ಹಾಗೂ ನಾನು ಈ ಕಾರ್ಯಕ್ರಮದ ಸ್ಥಳ ಬಾಡಿಗೆ ಇಲ್ಲ. ಹಾಗೂ ಉಚಿತವಾಗಿ ಬಡವರಿಗೆ ಮದುವೆ, ಮುಂಜಿ ಸಣ್ಣ ಸಣ್ಣ ಕಾರ್ಯಕ್ರಮ ಮಾಡಲು ಅವಕಾಶವಿದೆ ಎಂದು ಡಾ. ಯೋಗಿ ಸುಧಾಕರ ತಂತ್ರಿಯವರು ಹೇಳಿದರು.
ಧನಲಕ್ಷ್ಮೀ ಗೇರು ಉದ್ಯಮದ ಮಾಲಕರು ಹಾಗೂ ಅಮ್ಹಾಯಃ ಯಕ್ಷ ಸಂಸ್ಕೃತಿ ಬಳಗದ ಗೌರವ ಸಲಹೆಗಾರರಾದ ಶ್ರೀಪತಿ ಭಟ್ರು ಇಂತಹ ಕಾರ್ಯಕ್ರಮ ಮಾಡಲು ನಮ್ಮಂತವರ ಪ್ರೋತ್ಸಹ ಇದ್ದೇ ಇದೆ. ಹಾಗೂ ಕಾಳಿದಾಸನ ಮಾಸವಾದ ಈ ಸಂದರ್ಭದೋಚಿತ ಯಕ್ಷಗಾನ ಪ್ರಸಂಗದ ಆಯ್ಕೆ ಕಲಾವಿದರ ಸಮಾಗಮ ಅನುಪಮ ಎಂದು ಅಧ್ಯಕ್ಷೀಯ ನುಡಿ ಹೇಳಿದರು. ಸಭೆಯಲ್ಲಿ ಕೆ. ರಮಾನಂದ ಪಂಡಿತರು ಹಿರಿಯ ವಕೀಲರು ಹಾಗೂ ಮೂಡಬಿದರೆ ಎಂಸಿಎಸ್ ಬ್ಯಾಂಕಿನ ವಿಶೇಷ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ ಎಂ ಉಪಸ್ಥಿತರಿದ್ದರು.
ಯುವ ಕವಿ ಚಾರ ಪ್ರದೀಪ ಹೆಬ್ಬಾರ್ ಪ್ರಸ್ತಾವನೆಗೈದರೆ, ಕೃಷ್ಣಮೂರ್ತಿ ಮಾಯಣ ಸ್ವಾಗತಿಸಿದರು. ತಮ್ಮ ಸೊಗಸಾದ ನುಡಿಮುತ್ತುಗಳಿಂದ ನೆಲ್ಲಿಮಾರ್ ಸದಾಶಿವ ರಾವ್ ನಿರೂಪಣೆಗೈದರು. ಬಡಗಿನ ಹಿಮ್ಮೇಳ ಮಲೆನಾಡಿನ ಕೋಗಿಲೆ ಶಿವಶಂಕರ ಭಟ್ ಹರಿಹರಪುರದ ಭಾಗವತಿಗೆಗೆ ಕೋಟ ಶಿವಾನಂದರ ಹಾಗೂ ರಾಘವೇಂದ್ರ ಹೆಗಡೆ ಯಲ್ಲಾಪುರರ ಚಂಡೆ-ಮದ್ದಲೆಯ ಸಾಥ್ ನೀಡಿದರು. ಡಾ. ಜ್ಯೋಶಿ ಭೋಜರಾಜನ ಪಾತ್ರವಾದರೆ, ಕಾಳಿದಾಸನ ಪಾತ್ರದಲ್ಲಿ ಡಾ. ಗಾಳಿಮನೆಯವರು ಸಂಸ್ಕೃತ ಮಿಶ್ರಣ ಮಾತುಗಳು, ವಿಧ್ಯಾದರೆಯಾಗಿ ಕೆರೆಗದ್ದೆಯವರ ಲಾವಣ್ಯ, ನೆಲ್ಲಿಮರ್ ರ ಗಣಿಕಾಂಗನೆ ರತ್ನಕಲೆ ಹಾಗೂ ಪಂಡಿತ ಕವಿ ಡಿಂಡಿಮ ಮತ್ತು ಸುಭಾಹು ಮಹಾರಾಜನಾಗಿ, ಚಾರರ ಮೊದಲಾರ್ಧ ಕಾಳನ ಪಾತ್ರದಲ್ಲಿ ಕವಿರತ್ನ ಕಾಳಿದಾಸ ಯಕ್ಷಗಾನ ನಡೆಯಿತು.
ಉಡುಪಿ : ಯಕ್ಷಗಾನ ಕಲೆ ಇಂದು ಬದಲಾವಣೆಯ ಕಾಲಘಟ್ಟದಲ್ಲಿದೆ. ಆಧುನಿಕತೆ, ಹೊಸ ಪ್ರಸಂಗಗಳ ಪ್ರದರ್ಶನ ಯಕ್ಷಗಾನ ಕಲೆಯ ಪರಂಪರೆಗೆ ಧಕ್ಕೆ ತರಬಾರದು. ಈ ನಿಟ್ಟಿನಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹೊಸ ಕಲಾವಿದರಿಗೆ ಮಾದರಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಚಾವಡಿಯಲ್ಲಿ ಅಜಪುರ ಯಕ್ಷಗಾನ ಸಂಘದ ವತಿಯಿಂದ ನಡೆದ ಹಂದಾಡಿ ಸುಬ್ಬಣ್ಣ ಭಟ್ಟರ ಸಂಸ್ಮರಣೆ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರೂ, ತಮ್ಮ ಪಾಂಡಿತ್ಯ, ನಿರರ್ಗಳ ಮಾತುಗಳಿಂದ ಮಹಾನ್ ಕಲಾವಿದರುಗಳಾಗಿ ರಾಷ್ಟ್ರ ಪ್ರಶಸ್ತಿಗೂ ಭಾಜನರಾಗಿರುವುದನ್ನು ಕಂಡಿದ್ದೇವೆ. ಈಗಿನಂತೆ ಆಧುನಿಕತೆಯ ಸೋಂಕಿಲ್ಲದ ಆ ಕಾಲದಲ್ಲಿ ಯಕ್ಷಗಾನ ಕಲಾವಿದರು ಕಲೆಯ ಉಳಿವು ಬೆಳವಣಿಗೆಗೆ ಕಾರಣರಾದರು ಎಂಬುದನ್ನು ಇಂದಿನ ಯುವ ಕಲಾವಿದರು ಚಿಂತನೆ ನಡೆಸಬೇಕು. ಕಲೆಯ ಮೇಲಿನ ಪ್ರೀತಿ, ಅದರ ಮೂಲಕವೇ ಬದುಕನ್ನು ಕಂಡುಕೊoಡ ಹಿರಿಯ ಕಲಾವಿದರನೇಕರು ಯಕ್ಷಗಾನಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಆದರೆ ಇಂದು ಯಕ್ಷಗಾನ ಕವಲು ದಾರಿಯಲ್ಲಿದೆ. ಹಳೆಯ ಸಂಪ್ರದಾಯವನ್ನು ಬಿಡಲಾಗದೆ ಹೊಸತನದ ಆಕರ್ಷಣೆಯನ್ನು ಅಪ್ಪಿಕೊಳ್ಳಲಾಗದೆ ಕಲಾವಿದರು ತೊಳಲಾಟದಲ್ಲಿದ್ದಾರೆ. ಕಾಲಮಿತಿ ಯಕ್ಷಗಾನಗಳು ಜನಪ್ರಿಯತೆ ಪಡೆಯುತ್ತಿರುವ ಈ ಸಮಯದಲ್ಲಿ ಕಲಾವಿದರು ಕಲೆಯ ಚೌಕಟ್ಟಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ಕಲಾವಿದರು ಅವರಿಗೆ ಮಾದರಿಯಾಗಬೇಕು ಎಂದು ಡಾ.ತಲ್ಲೂರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಡಗುತ್ತಿಟ್ಟಿನ ಪರಂಪರೆಯ ಹಿರಿಯ ಯಕ್ಷಗಾನ ಕಲಾವಿದ ಬೇಲೂರು ರಮೇಶ್ ನಾಯ್ಕ್ ಅವರಿಗೆ ಹಂದಾಡಿ ಸುಬ್ಬಣ್ಣ ಭಟ್ಟ ದತ್ತಿನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಎಂ.ಪದ್ಮನಾಭ ಗಾಣಿಗ ವಹಿಸಿದ್ದರು. ನಡೂರು ರಜತಾದ್ರಿ ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಮಾರ್ಗದರ್ಶಕ ಪ್ರೊ,ಸಖಾರಾಮ ಸೋಮಯಾಜಿ ಸಂಸ್ಮರಣಾ ಭಾಷಣ ಮಾಡಿದರು. ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ.ಪ್ರವೀಣ್ ಕುಮಾರ್, ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ.ಉದಯ ಪ್ರಸನ್ನ ಭಟ್ ಹಂದಾಡಿ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.