ಉಡುಪಿ : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ – ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಹೆಬ್ರಿ, ಗ್ರಾಮ ಪಂಚಾಯತ್ ಹೆಬ್ರಿ ಹಾಗೂ ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಹೆಬ್ಬೇರಿ ಉತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಜೀವಿನಿ ಮಾರಾಟ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಬ್ರಿ ರಾಮ ಮಂದಿರದ ಮುಂಭಾಗದಲ್ಲಿ ಫೆಬ್ರವರಿ 13 ರಿಂದ 15 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಮಾರಾಟ ಮೇಳದಲ್ಲಿ ಮಹಿಳೆಯರು ತಯಾರಿಸಿದ ಗೃಹ ಉಪಯೋಗಿ ವಸ್ತುಗಳು, ಕರಕುಶಲ ವಸ್ತುಗಳು, ಟೆರೇಕೋಟಾ ವಸ್ತುಗಳು, ಕೃತಕ ಆಭರಣ, ಬಟ್ಟೆಬ್ಯಾಗ್, ಆಯುರ್ವೇದಿಕ್ ಉತ್ಪನ್ನಗಳು, ಹೆಬ್ರಿ ಹನಿ ಇತ್ಯಾದಿ ಉತ್ಪನ್ನಗಳು ಲಭ್ಯವಿರುತ್ತದೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೀವಿನಿ ಮಹಿಳೆಯರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹ ನೀಡುವಂತೆ ಹೆಬ್ರಿ ತಾಲೂಕು ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.
Cultural Events
ಜನವರಿ 11-12ರಂದು ಬೀಚ್ ಉತ್ಸವ; ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ : ಜಿಲ್ಲಾಧಿಕಾರಿ ಮುಲೈ ಮುಗಿಲನ್
ಮಂಗಳೂರು : ಕರಾವಳಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತವು ಮುಡಾ, ಎನ್ಎಂಪಿಟಿ ಹಾಗೂ ರೋಹನ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿರುವ ಬೀಚ್ ಉತ್ಸವ ತಣ್ಣೀರುಬಾವಿಯಲ್ಲಿ ಜ.11 ಮತ್ತು 12ರಂದು ಮರುನಿಗದಿಯಾಗಿದ್ದು ಸುರಕ್ಷತೆ-ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅವರು ಮಾತನಾಡಿ, ಬೀಚ್ನ ಶುಚಿತ್ವಕ್ಕೆ ಸಂಬಂಧಿಸಿ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಮೀನುಗಾರರ ಜೀವರಕ್ಷಕ ತಂಡ, ಕರಾವಳಿ ಪೊಲೀಸ್ ತಂಡ ರಚಿಸಲಾಗಿದೆ. ಅಗತ್ಯ ಲೈಟಿಂಗ್ ವ್ಯವಸ್ಥೆ ಜತೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುವುದು. ಬೀಚ್ನಲ್ಲಿ ಸಮುದ್ರದ ಬಳಿ ಜಲ ಸಾಹಸ ಕ್ರೀಡೆಗಳಿಗೆ ಸಂಜೆ 6.30ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಬೀಚ್ ಉತ್ಸವ ರಾತ್ರಿ 9.30ರ ವರೆಗೆ ಇರಲಿದೆ ಎಂದರು.
ಕರಾವಳಿ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕಳೆದ ರವಿವಾರ ಕರಾವಳಿ ಉತ್ಸವ ಮೈದಾನಕ್ಕೆ ಸುಮಾರು 12,000ಕ್ಕೂ ಅಧಿಕ ಮಂದಿ ಹಾಗೂ ಶ್ವಾನ ಪ್ರದರ್ಶನದಲ್ಲಿ 3,500ಕ್ಕೂ ಅಧಿಕ ಮಂದಿ ಸೇರಿದ್ದರು ಎಂದವರು ತಿಳಿಸಿದರು.
ಬೀಚ್ಗಳ ಮೂಲಕ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಬೀಚ್ ಉತ್ಸವ ಪ್ರಮುಖ ಪಾತ್ರ ವಹಿಸಲಿದೆ. ಕರಾವಳಿ ಉತ್ಸವ ಈಗಾಗಲೇ ಜನಾಕರ್ಷಣೆ ಪಡೆದಿದೆ ಎಂದರು. ಈ ಸಂದರ್ಭ ಬೀಚ್ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಜ.11ರಂದು ಸಂಜೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, 6 ಗಂಟೆಗೆ ನೃತ್ಯ ಉತ್ಸವ ಆಯೋಜಿಸಲಾಗಿದೆ. ಬಳಿಕ ಮಣಿಕಾಂತ್ ಕದ್ರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ.12ರಂದು ಬೆಳಗ್ಗೆ 5.30ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದಿಂದ ಕಾರ್ಯಕ್ರಮ, 6.30ಕ್ಕೆ ಉದಯರಾಗ, 9ರಿಂದ ಜಲಕ್ರೀಡೆ ನಡೆಯಲಿದೆ. 9.30ಕ್ಕೆ ಮರಳು ಶಿಲ್ಪ ಸ್ಪರ್ಧೆ ನಡೆಯಲಿದೆ. ಸಂಜೆ 5.30ಕ್ಕೆ ನೃತ್ಯೋತ್ಸವ, 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ರಘು ದೀಕ್ಷಿತ್ರವರಿಂದ ಲೈವ್ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ|ಅರುಣ್ ಕುಮಾರ್, ಮುಡಾ ಆಯುಕ್ತೆ ನೂರ್ ಜಹರಾ ಖಾನಂ, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
“ತಪಸ್ಯ ಫೌಂಡೇಶನ್ ಶ್ಲಾಘನೀಯ ಕಾರ್ಯಕ್ಕೆ ಎಲ್ಲರೂ ಬೆಂಬಲ ನೀಡಬೇಕು” – ದಿನೇಶ್ ಗುಂಡೂರಾವ್; ಮಂಗಳೂರು ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್ – 2025 ಉದ್ಘಾಟನೆ
ಮಂಗಳೂರು : ಮೂರನೇ ಆವೃತ್ತಿಯ ಮಂಗಳೂರು ಬೀಚ್ ಫೆಸ್ಟಿವಲ್, ಮಂಗಳೂರು ಟ್ರಯಾಥ್ಲನ್-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ನಗರದ ಓಷನ್ ಪರ್ಲ್ ಹೋಟೆಲ್ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, “ದಕ್ಷಿಣ ಕನ್ನಡ ಎಲ್ಲ ರೀತಿಯಲ್ಲಿ ಮುಂದೆ ಇರುವ ಜಿಲ್ಲೆ. ಇಲ್ಲಿ ಎಲ್ಲ ಜಾತಿ ಭಾಷೆ ಮತದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ಸಂಸ್ಕೃತಿ ಮತ್ತು ಕ್ರೀಡೆಯ ಬಗ್ಗೆ ಮಹತ್ವವನ್ನು ಸಾರುವ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಸಂತಸದ ವಿಚಾರ. ಒಂದು ಒಳ್ಳೆಯ ಕಾರ್ಯಕ್ಕಾಗಿ ಇಂತಹ ಕಾರ್ಯ ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ರಮ ಶ್ಲಾಘನೀಯವಾದುದು. ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಒಂದಾಗಿ ದುಡಿಯಬೇಕು. ಜಿಲ್ಲಾಡಳಿತ ಇಂತಹ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ” ಎಂದರು.
ಬಳಿಕ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಅವರು, “ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಡೆಸುತ್ತಿರುವ ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿ. ಇಂತಹ ಕಾರ್ಯಕ್ರಮದಲ್ಲಿ ನನ್ನ ಪಾಲ್ಗೊಳ್ಳುವಿಕೆ ಹೆಚ್ಚಿನ ರೀತಿಯಲ್ಲಿ ಇರಲಿದೆ. ನಿಮ್ಮ ತಪಸ್ಸಿಗೆ ಭಗವಂತ ಆಶೀರ್ವಾದ ಮಾಡುತ್ತಾನೆ“ ಎಂದರು.
ತಪಸ್ಯ ಫೌಂಡೇಶನ್ ಫೌಂಡರ್ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಕ್ಯಾನ್ಸರ್ ಪೀಡಿತ ರೋಗಿಗಳ ಕೊನೆಯ ಹಂತದಲ್ಲಿನ ಆರೈಕೆಗಾಗಿ ತಪಸ್ಯ ಫೌಂಡೇಶನ್ ಅನ್ನು 2019ರಲ್ಲಿ ಸ್ಥಾಪಿಸಿದ್ದೇವೆ. ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ರೋಗಿಗಳ ಆರೈಕೆ ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನ ರೋಗಿಗಳ ಆರೈಕೆಗಾಗಿ ಸುಸಜ್ಜಿತ ಕೇಂದ್ರ ಸ್ಥಾಪನೆಗಾಗಿ ಆರ್ಥಿಕ ಸಹಾಯದ ಉದ್ದೇಶದಿಂದ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ” ಎಂದು ಹೇಳಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಆನಂದ್ ಕೆ, ಎಸಿ ವಿನಯ್ ರಾಜ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ನವೀನ್ ಚಂದ್ರ ಹೆಗ್ಡೆ, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಪ್ರಧಾನ ಮಾರ್ಕೆಟಿಂಗ್ ಅಧಿಕಾರಿ ಟಿವಿ ನಾರಾಯಣ್, ಹರ್ಷ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಸಿಎ ಎನ್ಬಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ದಿವ್ಯ ವಸಂತ್ ಶೆಟ್ಟಿ ದೇವರನ್ನು ಸ್ತುತಿಸಿದರು.



ಬ್ರಹ್ಮಾವರ ಗಾಂಧಿ ಮೈದಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಯಶ್ಪಾಲ್ ಸುವರ್ಣ
ಉಡುಪಿ : ಬ್ರಹ್ಮಾವರ ಗಾಂಧಿ ಮೈದಾನದ ಅವ್ಯವಸ್ಥೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತೊಂದರೆ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬ್ರಹ್ಮಾವರ ಭಾಗದ ಕೇಂದ್ರ ಭಾಗದಲ್ಲಿರುವ ಗಾಂಧಿ ಮೈದಾನವನ್ನು ಸಾರ್ವಜನಿಕರ ಹಾಗೂ ಕ್ರೀಡಾಪ್ರೇಮಿಗಳ ಬೇಡಿಕೆಯಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರುವ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಹಂತ ಹಂತವಾಗಿ ಮೈದಾನ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ವಾಕಿಂಗ್ ಟ್ರ್ಯಾಕ್, ವಾಲಿಬಾಲ್ ಮೈದಾನ, ಕಬಡ್ಡಿ ಮೈದಾನ, ಶೌಚಾಲಯ, ಬಯಲು ರಂಗ ಮಂದಿರ, ಕ್ರಿಕೆಟ್ ಮೈದಾನ ಸಹಿತ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ಬಳಸಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ಈಗಾಗಲೇ ಗಾಂಧಿ ಮೈದಾನದಲ್ಲಿ ಈ ಹಿಂದೆ ನಡೆದಿರುವ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ಇಂಜಿನಿಯರ್ರಿಂದ ಮಾಹಿತಿ ಪಡೆದ ಶಾಸಕರು, ಸ್ಥಳೀಯರ ಅಭಿಪ್ರಾಯದಂತೆ ಮಾಸ್ಟರ್ ಪ್ಲ್ಯಾನ್ ಮಾಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತ್ಯಾನಂದ, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭಾ, ಚಾಂತಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ, ಸ್ಥಳೀಯ ಮುಖಂಡರಾದ ಶ್ರೀ ರಾಜೇಶ್ ಶೆಟ್ಟಿ ಬಿರ್ತಿ, ಶ್ರೀ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀ ನಿಶಾನ್ ರೈ, ಶ್ರೀ ಸತ್ಯರಾಜ್, ಶ್ರೀ ಎಸ್. ನಾರಾಯಣ, ಅರ್ಜುನ್ ಪ್ರಭು, ಭರತ್ ಶೆಟ್ಟಿ, ದೇವಾನಂದ, ಸಚಿನ್ ಪೂಜಾರಿ, ದಿನೇಶ್, ಸಂತೋಷ್ ಜತ್ತನ್ ಹೇರೂರು, ವಸಂತ ಗಿಳಿಯಾರ್, ಚಂದ್ರಶೇಖರ್ ಶೆಟ್ಟಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಕೋಟ : ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನಾಲ್ಕನೆ ದಿನದ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು. ದೇಗುಲದ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಜರಗಿತು.

ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಲಕ್ಷ್ಮೀ ನರಸಿಂಹ ಪೂಜಾರಿ ಹಾಡಿಕೆರೆ ಕುಟುಂಬಿಕರಿಗೆ ಪ್ರಸಾದ ವಿತರಿಸಿ ಗೌರವಿಸಿದರು. ದೇಗುಲದಲ್ಲಿ ದೇವಿಯ ನಾಲ್ಕನೆ ದಿನದ ಕುಷ್ಮಾಂಡ ಅವತಾರದಲ್ಲಿ ಅಮೃತೇಶ್ವರೀ ಪುಷ್ಭಾಂಲಕಾರ ಭಕ್ತರ ಗಮನ ಸೆಳೆದಳು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಮಾಜಿ ಟ್ರಸ್ಟಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿವರ್ಗ, ದೇಗುಲ ಅರ್ಚಕ ವೃಂದ ಉಪಸ್ಥಿತರಿದ್ದರು. ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗಿಯಾದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಕೋಟ : ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ, ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಜಂಟಿ ಆಶ್ರಯದಲ್ಲಿ ಚೇಂಪಿಯ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಕಾರ್ಯಕ್ರಮ ಸೋಮವಾರ ಜರಗಿತು.
ಪೂರ್ವಾಹ್ನ ಲಕ್ಷ್ಮೀಕಾಂತ್ ಶರ್ಮ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಪೂಜಾ ಕಾರ್ಯದಲ್ಲಿ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ ದಂಪತಿಗಳು ಭಾಗಿಯಾದರು.
ಪೂಜಾ ವಿಧಿ ವಿಧಾನ ಕಾರ್ಯದಲ್ಲಿ ಕೋಟದ ಶ್ರೀ ಗುರುಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ಆಚಾರ್ ಭಾಗಿಯಾದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿಶ್ವಜ್ಯೋತಿ ಮಹಿಳಾ ಬಳಗದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ, ಕಲಾ ವೇದಿಕೆ ತಂಡದಿಂದ ನೃತ್ಯ ಗಾನ ವೈಭವ, ಸುವಿನ್ಯ ಆಚಾರ್ ಮಂಗಳೂರು ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರಗಿದವು.
ಈ ಸಂದರ್ಭದಲ್ಲಿ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿ ಕೇಶವ ಆಚಾರ್, ಕೋಶಾಧಿಕಾರಿ ರಮೇಶ್ ಆಚಾರ್ ಚೇಂಪಿ, ವಿಶ್ಚಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್ ಸಾಲಿಗ್ರಾಮ, ಕಾರ್ಯದರ್ಶಿ ನಿತ್ಯಾನಂದ ಆಚಾರ್ ಕೋಟ, ಕೋಶಾಧಿಕಾರಿ ರಾಘವೇಂದ್ರ ಆಚಾರ್ ಚೇಂಪಿ, ವಿಶ್ವಜ್ಯೋತಿ ಬಳಗದ ಅಧ್ಯಕ್ಷೆ ಸವಿತಾ ಚಂದ್ರಶೇಖರ್ ಆಚಾರ್, ಕಾರ್ಯದರ್ಶಿ ವಾಣಿ ಸುರೇಶ್ ಆಚಾರ್, ಕೋಶಾಧಿಕಾರಿ ಸುಶೀಲ ಸತೀಶ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯ : ಡಾ.ಎಚ್.ಎಸ್.ಬಲ್ಲಾಳ್
ಉಡುಪಿ : ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಳ್ಳುತ್ತಿರುವ ಪೂರಕ ಕಾರ್ಯಕ್ರಮಗಳು ಪ್ರಶಂಸನೀಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅಭಿಪ್ರಾಯ ಪಟ್ಟರು.
ಅವರು ಶನಿವಾರ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮoಟಪದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ ಗುಂಡ್ಮಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ 2 ದಿನಗಳ ನಡೆಯುವ ‘ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಕಾರ್ಯಾಗಾರ’ವನ್ನು ಉದ್ಘಾಟಿಸಿ, ಮಾತನಾಡಿದರು.
ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಯಕ್ಷಗಾನ ಕಲೆ ಹಾಗೂ ಕಲಾವಿದರ ಮೇಲಿನ ಪ್ರೀತಿಯನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಅವರ ಸಮರ್ಥ ಮಾರ್ಗದರ್ಶನದಲ್ಲಿ ಅಕಾಡೆಮಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಸಂಶಯವಿಲ್ಲ. ನಾನು, ನನ್ನ ತಂದೆ ಯಕ್ಷಗಾನದ ದೊಡ್ಡ ಅಭಿಮಾನಿಗಳು. ಯಕ್ಷಗಾನದಂತಹ ಶ್ರೀಮಂತ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಉದ್ದೇಶದಿಂದ ಮಾಹೆ ವತಿಯಿಂದ ಯಕ್ಷಗಾನ ಕೇಂದ್ರವನ್ನು ನಡೆಸಲಾಗುತ್ತಿದೆ. ಸುಮಾರು 3೦೦೦೦ಕ್ಕೂ ಅಧಿಕ ದೇಶ ವಿದೇಶಗಳ ಯಕ್ಷಗಾನ ಆಸಕ್ತರು ಇಲ್ಲಿಗೆ ಬಂದು ಯಕ್ಷಗಾನವನ್ನು ಕಲಿತಿದ್ದಾರೆ. ಅಲ್ಲದೆ ಆಸಕ್ತ ಮಕ್ಕಳಿಗೆ ಹಾಸ್ಟೆಲ್ನ್ನು ಒದಗಿಸಿ ಅವರ ವಿದ್ಯಾರ್ಜನೆ ಜೊತೆಗೆ ಯಕ್ಷ ಶಿಕ್ಷಣವನ್ನು ಕಲಿಯುವಂತೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಭವಿಷ್ಯದ ಕಲಾವಿದರು ಹಾಗೂ ಕಲಾಪ್ರೇಮಿಗಳನ್ನು ರೂಪುಗೊಳಿಸಬೇಕು ಎನ್ನುವುದೇ ಅಕಾಡೆಮಿಯ ಮಹಾತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಯಕ್ಷಗಾನದ ವೇಷಭೂಷಣಗಳು, ಬಣ್ಣಗಾರಿಕೆ ಬಗ್ಗೆ ಮಕ್ಕಳಿಗೆ, ಕಲಾಸಕ್ತರಿಗೆ ಅರಿವು ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಪ್ರಾಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾಲ, ಕಲಾವಿದರು ಬದಲಾಗಬಹುದು. ಆದರೆ ಕಲೆಯ ಮೂಲ ಬದಲಾವಣೆಯಾಗಬಾರದು. ಅದು ಮೂಲ ಸಂಪ್ರದಾಯದಲ್ಲೇ ಉಳಿದು ಬೆಳೆಯಬೇಕು. ಇಂದಿನ ಯುವ ಪೀಳಿಗೆ ಯಕ್ಷಗಾನ, ಭಜನೆಯಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಅಕಾಡೆಮಿಯ ಅಧ್ಯಕ್ಷನಾಗಿದ್ದುಕೊಂಡು ಯಕ್ಷಗಾನ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಬೇಕಾದ ಎಲ್ಲಾ ಕಾರ್ಯಗಳನ್ನು ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ನಮ್ಮಲ್ಲಿ ಯಕ್ಷಗಾನ, ತಾಳಮದ್ದಲೆ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿರುತ್ತವೆ. ಆದರೆ ಇಂತಹ ವೇಷ ಮತ್ತು ಬಣ್ಣಗಾರಿಕೆ ಬಗ್ಗೆ ಕಮ್ಮಟ ನಡೆಯುತ್ತಿರುವುದು ಬಹಳ ವಿರಳ. ಇದಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅವರನ್ನು ಅಭಿನಂದಿಸಲೇ ಬೇಕು. ಅವರ ಉದ್ಯಮಿಯಾಗಿದ್ದರೂ, ಕಲೆ, ಸಂಸ್ಕೃತಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಅಭಿನಂದನೀಯ ಎಂದ ಅವರು, ಪೋಷಕರು ತಮ್ಮ ಮಕ್ಕಳಿಗೆ ಯಕ್ಷಗಾನ, ನೃತ್ಯ, ಸಂಗೀತ ಮೊದಲಾದ ಕಲೆಗಳನ್ನು ಸರಿಯಾಗಿ ಕಲಿಸಿದ ಮೇಲೆಯೇ ಅವರಿಗೆ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಪ್ರಸ್ತುತ ಯಕ್ಷಗಾನ ಅಕಾಡೆಮಿಗೆ ತಮ್ಮ ಜಿಲ್ಲೆಯವರೇ ಅಧ್ಯಕ್ಷರಾಗಿರುವುದು ಕಲೆಯ ಉಳಿವು ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಮಣಿಪಾಲದ ಮಾಹೆ ಕೂಡಾ ಡಾ.ಎಚ್.ಎಸ್.ಬಲ್ಲಾಳ್ ಅವರ ಮುತುವರ್ಜಿಯಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಯಕ್ಷಗಾನವನ್ನು ತಲುಪಿಸುವ ಕಾರ್ಯ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಮೇಳ, ಮಹಿಳಾ ಯಕ್ಷಗಾನ ಆಯೋಜನೆ, ಪುಸ್ತಕ ಪ್ರಕಟನೆ, ಸಾಕ್ಷ್ಯ ಚಿತ್ರಗಳ ನಿರ್ಮಾಣ ಕಾರ್ಯವನ್ನು ಅಕಾಡೆಮಿ ವತಿಯಿಂದ ಸರಕಾರ ನೀಡುವ ಅನುದಾನವನ್ನು ಬಳಸಿಕೊಂಡು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಮತ್ತು ವೇಷಗಾರಿಕೆಯನ್ನು ಹೇಳಿಕೊಡಲು ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಚೇರ್ಕಾಡಿ, ಗಣೇಶ್ ಜನ್ನಾಡಿ, ಮಿಥುನ್ ಬ್ರಹ್ಮಾವರ, ವೈಕುಂಠ ಹೇರ್ಳೆ, ಅಶೋಕ್ ಆಚಾರ್, ಕೂರಾಡಿ ರಾಮ ಬಾಯರಿ, ಶ್ರೀಕಾಂತ ವಡ್ಡರ್ಸೆ, ಸೀತಾರಾಮ ಸೋಮಯಾಜಿ ಹಾಗೂ ವಿಭವನ್ ಗುಂಡ್ಮಿ ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿದರು.
ಬಂಟ್ವಾಳ ಬೋಳಂತೂರು ಗಣೇಶೋತ್ಸವ ಮೆರವಣಿಗೆ – ಮಸೀದಿಯಿಂದ ತಂಪು ಪಾನೀಯ, ಸಿಹಿತಿಂಡಿ ಹಂಚದಂತೆ ಪತ್ರ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಕಳೆದ ವರ್ಷ ಮೆರವಣಿಗೆ ಸಂದರ್ಭ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ನೀಡಿದ್ದರು. ಈ ರೀತಿಯ ಸೌಹಾರ್ದತೆ ಮೆರೆದಿರುವ ಸುದ್ದಿ ಕಳೆದ ವರ್ಷ ಆಗಿತ್ತು. ಆದರೆ ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿರುವ ಕುರಿತು ವರದಿಯಾಗಿದೆ.

ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ನೀಡಿದ ಸಿಹಿ ತಿಂಡಿ ತಿಂದು ನಮ್ಮ ಮಕ್ಕಳು ಅಸ್ವಸ್ಥರಾಗಿದ್ದು, ಹಾಗಾಗಿ ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ವೈರಲ್ ಪತ್ರದಲ್ಲಿರುವುದಾದರೂ ಏನು?
“ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ” ಎಂದು ಬರೆಯಲಾಗಿದೆ.
ಕೃಷ್ಣಮಾಸೋತ್ಸವ ಸಮಾರೋಪ ಅಂಗವಾಗಿ ಸೆ.1ರಂದು ನಾದಲೋಲನಿಗೆ ಗಾನ ನೃತ್ಯದೊಂದಿಗೆ ಉದಯಾಸ್ತಮಾನ ಸೇವೆ
ಉಡುಪಿ : ಪರ್ಯಾಯ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಗಸ್ಟ್ 1ರಿಂದ ಆರಂಭಗೊಂಡ ವೈಭವದ ಶ್ರೀಕೃಷ್ಣ ಮಾಸೋತ್ಸವ ಸೆಪ್ಟೆಂಬರ್ 1ರಂದು ಸಮಾಪನಗೊಳ್ಳಲಿದೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ನಡೆದ ಈ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ಸಮಾರೋಪ ಸಮಾರಂಭ ಅಂಗವಾಗಿ ಶ್ರೀಕೃಷ್ಣನಿಗೆ ಸೆ.1ರಂದು ಉದಯಾಸ್ತಮಾನ ಸೇವೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ಉಡುಪಿ ವಲಯ ಹಾಗೂ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ ವತಿಯಿಂದ ಲಕ್ಷ ತುಳಸಿ ಅರ್ಚನೆ ಹಾಗೂ ಶ್ರೀ ವಿಷ್ಣು ಸಹಸ್ರ ನಾಮಾವಳಿ ಪಠಣ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಾರೆಗಮಪ ಸೀಸನ್ 15ರ ರನ್ನರ್ ಅಪ್ ಕಲಾವಿದೆ ವಿದುಷಿ ಸಾಧ್ವಿನಿ ಕೊಪ್ಪ ಅವರಿಂದ ಬೆಳಿಗ್ಗೆ 10ರಿಂದ 12ರವರೆಗೆ ಶಾಸ್ತ್ರೀಯ ಸಂಗೀತ ಕಛೇರಿ ಆಯೋಜಿಸಲಾಗಿದೆ. ಅಪರಾಹ್ನ 3ರಿಂದ 5ರ ವರೆಗೆ ಸಂಯುಕ್ತ ಸಂಸ್ಥಾನ (ಯು.ಕೆ) ನೃತ್ಯ ನಿರ್ದೇಶಕಿ ದಿವ್ಯಾ ಭಟ್ ಅವರಿಂದ ಕಥಕ್ ನೃತ್ಯ ಹಾಗೂ ರಾತ್ರಿ 7ರಿಂದ 9ರವರೆಗೆ ಸ್ವೀಡನ್ ನ ವಿದುಷಿ ದಿವ್ಯಾ ಸುರೇಶ್ ಅವರಿಂದ ಭರತ ನಾಟ್ಯ ಪ್ರದರ್ಶನವಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.

ಕಾಸರಗೋಡು : ಯಕ್ಷಗಾನ ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಬೇಕು. ಅವರಲ್ಲಿ ಭವಿಷ್ಯದ ಕಲಾವಿದರನ್ನು ರೂಪಿಸಬೇಕು ಎಂಬ ಉದ್ದೇಶವನ್ನು ಯಕ್ಷಗಾನ ಅಕಾಡೆಮಿ ಹೊಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ‘ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮಾಯಣ, ಮಹಾಭಾರತದಂತರ ಪುಣ್ಯ ಕಥಾನಕಗಳನ್ನು ಯಕ್ಷಗಾನ ರೂಪದಲ್ಲಿ ಮಕ್ಕಳಿಗೆ ತಿಳಿಯಪಡಿಸಿದಾಗ ಅವರಲ್ಲಿ ನೈತಿಕ ಮೌಲ್ಯಗಳು ಜಾಗೃತವಾಗುತ್ತವೆ. ತಂದೆ ತಾಯಿ, ಗುರುಹಿರಿಯರಿಗೆ ಗೌರವ ಕೊಡುವುದಲ್ಲದೆ, ಸಮಾಜದ ಒಬ್ಬ ನಾಗರಿಕನಾಗಿಯೂ ರೂಪುಗೊಳ್ಳುತ್ತಾರೆ. ಭವಿಷ್ಯದಲ್ಲಿ ಉತ್ತಮ ಕಲಾವಿದನಾಗದಿದ್ದರೂ, ಒಬ್ಬ ಉತ್ತಮ ಯಕ್ಷಗಾನ ಪ್ರೇಕ್ಷಕನಾಗುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು ಈ ಸರಣಿಯಲ್ಲಿ ಎರಡನೇಯದ್ದಾಗಿದೆ ಎಂದು ಅವರು ತಿಳಿಸಿದರು.
ಇಂದಿನ ಮಕ್ಕಳಿಗೆ ಸುಖ ದು:ಖಗಳ ಅರಿವೇ ಬಾರದಂತೆ ತಂದೆ ತಾಯಿ ಸಾಕುತ್ತಿದ್ದಾರೆ. ಮಕ್ಕಳಲ್ಲಿ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸದಿದ್ದರೆ ಮುಂದೆ ಅವರು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ, ಅವರನ್ನು ದೂರಿ ಪ್ರಯೋಜನವಿಲ್ಲ. ಹೀಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಯಕ್ಷಗಾನ ಒಂದು ಪರಿಪೂರ್ಣ ಕಲೆಯಾಗಿದೆ. ಇಲ್ಲಿ ಬಣ್ಣ, ನಾಟ್ಯ, ವೇಷ, ಕುಣಿತ, ಹಾಡು, ಅರ್ಥ ಹೀಗೆ ನವರಸ ಭಾವಗಳನ್ನು ತುಂಬಿಕೊoಡ ಏಕೈಕ ಪ್ರದರ್ಶನ ಕಲೆಯಾಗಿದೆ. ಇದರ ಇನ್ನೊಂದು ವಿಶೇಷವೆಂದರೆ ಕಲಾವಿದ ಯಾವುದೇ ಜಿಲ್ಲೆಯವನಾಗಿರಲಿ, ಆತನ ಆಡು ಭಾಷೆ ಯಾವುದೇ ಆಗಿರಲಿ, ಆದರೆ ಆತ ರಂಗಸ್ಥಳಕ್ಕೆ ಬಂದಾಗ ‘ಶುದ್ಧ ಕನ್ನಡ’ವನ್ನೇ ಮಾತನಾಡುವುದು ಈ ಕಲೆಯ ಹಿರಿಮೆಗೆ ಸಾಕ್ಷಿ. ಯಕ್ಷಗಾನದಿಂದಲೇ ಕನ್ನಡದ ಉಳಿವು ಕೂಡಾ ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತç ಅವರು ಮಾತನಾಡಿ, ಯಕ್ಷಗಾನ ಕಲೆಗೆ ಯಕ್ಷಗಾನ ಅಕಾಡೆಮಿ ನೀಡುತ್ತಿರುವ ಪ್ರೋತ್ಸಾಹ ಪ್ರಶಂಸನೀಯ. ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಕಲೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಯಕ್ಷಗಾನದಿಂದ ಹಿಂದು – ಮುಸ್ಲಿಂ ಸಾಮರಸ್ಯ
ಮಂಜೇಶ್ವರದ ಶಾಸಕ ಎ.ಕೆ.ಅಶ್ರಫ್ ಅವರು ಮಾತನಾಡಿ, ಈ ಪುಣ್ಯಭೂಮಿ ಭಾರತದಲ್ಲಿ 1956ರಲ್ಲಿ ಕಾಸರಗೋಡು ಅನಿರೀಕ್ಷಿತವಾಗಿ ಕೇರಳಕ್ಕೆ ಸೇರಿದರೂ, ಕನ್ನಡ ಸಾಂಸ್ಕೃತಿಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದೆ. ಮಂಜೇಶ್ವರ ಗೋವಿಂದ ಪೈ, ಪಾರ್ತಿಸುಬ್ಬ ಅವರಂತಹ ಮಹಾನ್ ಕವಿಗಳು, ಎಡನೀರು ಮಠ ಯಕ್ಷಗಾನಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಯಕ್ಷಗಾನಕ್ಕೆ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಕೇರಳದ ಪ್ರಾಂತೀಯ ಮಟ್ಟದಲ್ಲಿ ಯಕ್ಷಗಾನ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಕಾಸರಗೋಡೇ ಪ್ರಥಮ ಸ್ಥಾನ ಪಡೆಯುತ್ತಿದ್ದು, ಇದೀಗ ಇನ್ನಿತರ ಪ್ರಾಂತ್ಯಗಳು ಕೂಡಾ ಸ್ಪರ್ಧೆಯನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು. ಯಕ್ಷಗಾನದಂತಹ ಉನ್ನತ ಕಲೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಇಂತಹ ಪ್ರಯತ್ನ ಅತ್ಯವಶ್ಯಕವಾಗಿದೆ. ಕಲೆ ವಿನಾಶದಂಚಿಗೆ ಹೋಗಬಾರದು. ಯಕ್ಷಗಾನದಲ್ಲಿ ಬಪ್ಪನಾಡು ಬ್ಯಾರಿಯ ಪಾತ್ರದ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಸಾರುವ ಜಗತ್ತಿನ ಏಕೈಕ ಕಲೆ ಎಂದರೆ ಅದು ಯಕ್ಷಗಾನ. ಮೊಹಮ್ಮದ್ ಜಬ್ಬಾರ್ ಅವರಂತಹ ಖ್ಯಾತ ಯಕ್ಷಗಾನವನ್ನು ಕಂಡು ಭೇಟಿಯಾಗಬೇಕು ಎನ್ನುವ ತುಡಿತ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಮಾತನಾಡಿ, ಅಕಾಡೆಮಿಯ ಸಹಕಾರದಲ್ಲಿ ಹಿಂದೆಯೂ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದೇವೆ. ಕಲೆಯ ಬೆಳವಣಿಗೆ ಹಾಗೂ ಕಲಾವಿದರಿಗೆ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಇಂತಹ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಜೇಶ್ವರದ ಶಾಸಕ ಎ.ಕೆ.ಅಶ್ರಫ್ ಅವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯದ ಪ್ರಾಥಮಿಕ ಹಂತದ ದಾಖಲೀಕರಣ, ಪ್ರಾತ್ಯಕ್ಷಿಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ರವಿಶಂಕರ ವಳಕ್ಕುಂಜ, ಲಕ್ಷ್ಮಣ ಕುಮಾರ್ ಮರಕಡ, ಡಾ.ಶ್ರುತಕೀರ್ತಿ ರಾಜ್ ಉಜಿರೆ, ಗಣೇಶ್ ಪಾಲೆಚ್ಚಾರು, ಶ್ರೀಕೃಷ್ಣ ದೇವಕಾನ, ರಾಮಮೂರ್ತಿ ಕುದ್ರೆಕ್ಕೂಡ್ಲು, ಗಣೇಶ್ ಭಟ್ ಬೆಳಾಲು, ರವಿ ಮುಂಡಾಜೆ, ರಂಜಿತ್ ಗೋಳಿಯಡ್ಕ, ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ವಸಂತ ಗೌಡ ಕಾಯರ್ತಡ್ಕ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಜಿ.ವಿ.ಎಸ್.ಉಲ್ಲಾಳ್ ಹಾಗೂ ಪ್ರಥ್ವಿರಾಜ್ ಕವತ್ತಾರು ಉಪಸ್ಥಿತರಿದ್ದರು.
ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರಿತಾ ಎನ್. ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಗುರುರಾಜ್ ಭಟ್ ವಂದಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕರಾದ ಸತೀಶ್ ಅಡಪ್ಪ ಸಂಕಬೈಲು ಕಾರ್ಯಕ್ರಮ ನಿರೂಪಿಸಿದರು.
