ಉಡುಪಿ : ಕೈಮಗ್ಗದ ನೇಕಾರಿಕೆಯ ಅದ್ಭುತ ಕಲಾಕೌಶಲ್ಯವನ್ನು ಪೋಷಿಸಿ ಬೆಳೆಸಲು ನಿರಂತರವಾಗಿ ಶ್ರಮಿಸುತ್ತ, ಪುತ್ತಿಗೆ ಮಠದ ಪರ್ಯಾಯ ಮತ್ತು ಶ್ರೀ ಕೃಷ್ಣ ಮಾಸೋತ್ಸವದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿ, ಕೈಮಗ್ಗದ ಉದ್ದಿಮೆಗೆ ಮತ್ತು ಶ್ರೀ ಕೃಷ್ಣ ಮಾಸೋತ್ಸವಕ್ಕೆ ವಿಶೇಷವಾದ ಮೆರುಗನ್ನು ನೀಡಿದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ಶ್ರೀಕೃಷ್ಣ ಜಯಂತಿಯ ಅಂಗವಾಗಿ ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Cultural Celebration
ಮಾಂಡ್ ಸೊಭಾಣ್ ಆಯೋಜಿಸಿದ ‘ಫಿಲ್ಮ್ ಸೊಭಾಣ್’ ಕೊಂಕಣಿ ಚಲನ ಚಿತ್ರೋತ್ಸವದಲ್ಲಿ ಕೊಂಕಣಿ ಮಕ್ಕಳಿಗಾಗಿ ಚಲನಚಿತ್ರ ಪ್ರದರ್ಶನ ಆಗಸ್ಟ್ 28ರಂದು ಭಾರತ್ ಸಿನೆಮಾಸ್ ಇಲ್ಲಿ ನಡೆಯಿತು.

ಡಾ ಕೆ. ರಮೇಶ್ ಕಾಮತ್ ನಿರ್ದೇಶನದ ಅಪ್ಸರಧಾರ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಿತ್ರದ ಕೆಲಭಾಗಗಳನ್ನು ಈಜಿಪ್ಟ್ನಲ್ಲಿ ಚಿತ್ರೀಕರಿಸಿದ್ದು, ತ್ರಿಡಿ ತಾಂತ್ರಿಕತೆ ಉಪಯೋಗಿಸಿದ ಮೊದಲ ಕೊಂಕಣಿ ಚಿತ್ರ ಇದಾಗಿದೆ. ಈ ಸಂದರ್ಭದಲ್ಲಿ ಡಾ ಕಾಮತ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ನವೀನ್ ಲೋಬೊ, ರೊನಿ ಅರುಣ್ ಹಾಗೂ ವಿಕಾಸ್ ಲಸ್ರಾದೊ ಉಪಸ್ಥಿತರಿದ್ದರು. ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾದ ಕುಲಶೇಖರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಚಲನಚಿತ್ರವನ್ನು ವೀಕ್ಷಿಸಿ ಸಂತಸಪಟ್ಟರು.
ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಈ ಚಿತ್ರೋತ್ಸವವು ಆಗಸ್ಟ್ 23 ರಿಂದ ಸೆಪ್ಟೆಂಬರ್ 14 ರವರೆಗೆ ನಡೆಯುತ್ತಿದ್ದು, ಕರ್ನಾಟಕ ಹಾಗೂ ಗೋವಾದ ಸುಮಾರು 25 ಚಲನಚಿತ್ರಗಳು, 5 ಕಿರುಚಿತ್ರಗಳು ಹಾಗೂ 2 ಮಕ್ಕಳ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಆ.31ರಂದು ಅಲೋಶಿಯನ್ ಫೆಸ್ಟ್ 2024 – ಪಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಉತ್ಸವ ಆಯೋಜನೆ
ಮಂಗಳೂರು : “ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿಯಸ್ ಫೆಸ್ಟ್ 2024 ಇದರ ಉದ್ಘಾಟನಾ ಸಮಾರಂಭವನ್ನು ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಶನಿವಾರ, ಆಗಸ್ಟ್ 31 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ“ ಎಂದು ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಸಹಆಯೋಜಕಿ ಭವ್ಯಾ ಶೆಟ್ಟಿ ”ಕಾಲೇಜಿನ ಹಳೆ ವಿದ್ಯಾರ್ಥಿ ಕೆಂಡಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಅವರು ಈ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಗೌರವ ಅತಿಥಿಯಾಗಿ ಲೇಖಕಿ ಸೆರಾ ಫೆಲೆಕ್ಸ್ ಆಗಮಿಸಲಿದ್ದು ಅವರು ಬರೆದಿರುವ ‘ಎ ಕ್ರೈ ಹರ್ಡ್ ಆಸ್ ಎ ಸಾಂಗ್’ ಎನ್ನುವ ಪುಸ್ತಕ ಈ ವೇಳೆ ಬಿಡುಗಡೆಗೊಳ್ಳಲಿದೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಮಾಧಿಕಾರಿ ವಂ.ಮೆಲ್ವಿನ್ ಜೋಸೆಫ್ ಪಿಂಟೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.
ಈ ಉತ್ಸವವು ‘ಹಬ್ಬಗಳ ಹಬ್ಬ’ ಹಾಗೂ ‘ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುವುದು, ‘ಹಬ್ಬಗಳ ಹಬ್ಬ’ದಲ್ಲಿ ಒಟ್ಟು 31 ಶೈಕ್ಷಣಿಕ ಸ್ಪರ್ಧೆಗಳನ್ನು ಕಲಾ, ವಾಣಿಜ್ಯ, ವಿಜ್ಞಾನ, ಬಿಸಿಎ, ಬಿಬಿಎ, ಬಿವೋಕ್ ಹಾಗೂ ವಿಜ್ಞಾನ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಶಾಸ್ತ್ರೀಯ ನೃತ್ಯ, ಫೇಸ್ ಪೈಂಟಿಂಗ್, ಮೆಹೆಂದಿ, ಕಸದಿಂದ ರಸ್ತೆ ಹಾಗೂ ವೈವಿದ್ಯಮ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ“ ಎಂದರು.
ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಅದ್ವಿಕಾ ಶೆಟ್ಟಿ ಮಾತನಾಡಿ ”ಸಮಾರೋಪ ಸಮಾರಂಭವು ಅಪರಾಹ್ನ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರು ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರವೀಣ್ ಮಾರ್ಟಿಸ್, ಎಸ್.ಜೆ, ಅವರು ವಹಿಸಲಿದ್ದಾರೆ. ವಿವಿಧ ಕಾಲೇಜುಗಳ 1000 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 37 ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಉಪಕುಲಪತಿ ಡಾ. ರೇಜಿ ಜಾನ್, ವ್ಯಾನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲ : ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ವಿಭಾಗವು ಆಗಸ್ಟ್ 22ರ ಗುರುವಾರ ಸಂಜೆ 06.30ಕ್ಕೆ ಸರಿಯಾಗಿ ಟಿ.ಎಂ.ಎ ಪೈ ಸಭಾಂಗಣದಲ್ಲಿ ಹಿರಿಯ ನೃತ್ಯಕಲಾವಿದೆ, ಗುರು ಡಾ. ವಸುಂಧರಾ ದೊರೆಸ್ವಾಮಿಯವರ ‘ಕಿತ್ತೂರು ರಾಣಿ ಚೆನ್ನಮ್ಮ’ಎಂಬ ಏಕವ್ಯಕ್ತಿ ನೃತ್ಯನಾಟಕ ಪ್ರದರ್ಶನವನ್ನು ವಿದ್ಯಾರ್ಥಿಗಳಿಗೆ ಹಾಗೂ ಊರಿನ ಕಲಾಸಕ್ತರಿಗಾಗಿ ಆಯೋಜಿಸಿದೆ.

ಪ್ರೊ. ಜ್ಯೋತಿ ಶಂಕರ್ ಅವರು ರಚಿಸಿ, ವಿದ್ವಾನ್ ಡಿ.ಎಸ್ ಶ್ರೀವತ್ಸ ಅವರ ಸಂಗೀತ ಸಂಯೋಜನೆಯ ಈ ನೃತ್ಯನಾಟಕದಲ್ಲಿ ಡಾ. ವಸುಂಧರಾ ಅವರ ನೃತ್ಯ-ನಾಟಕ-ಸಮರಕಲೆಗಳ ಸಿದ್ಧಿಯ ಸಮನ್ವಯವನ್ನು ಕಾಣಲಿದ್ದೀರಿ.
ಶಾಸ್ತ್ರೀಯ ಭರತನಾಟ್ಯ ಹಾಗೂ ಸೃಜನಶೀಲ ಪ್ರಸ್ತುತಿಗಳಿಗೆ ಹೆಸರಾಗಿರುವವರು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿಯವರು. ತನ್ನ 75ರ ಇಳಿವಯಸ್ಸಿನಲ್ಲಿಯೂ ನಿರಂತರ ಪ್ರದರ್ಶನ, ಕಲಾಸಂಯೋಜನೆ, ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಕೊಂಡಿರುವ ಬದ್ಧತೆಯ ಕಲಾವಿದೆ ಇವರು. ದಕ್ಷಿಣಕನ್ನಡದ ಮೂಡಬಿದರೆಯ ಮಗಳು. ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆಯ ಸೊಸೆ. ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರವನ್ನು ಸ್ಥಾಪಿಸಿ ಕಳೆದ 40 ವರುಷಗಳಿಂದ ನಿರಂತರ ಕಲಾ ಉತ್ಸವಗಳನ್ನು ಆಯೋಜಿಸಿ ಹಿರಿಯ ಕಿರಿಯ ಕಲಾವಿದರಿಗೆ ವೇದಿಕೆಯನ್ನೊದಗಿಸಿದ್ದಾರೆ.
ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಲ್ಲದೆ, ಹಲವಾರು ನೃತ್ಯನಾಟಕಗಳು, ಏಕವ್ಯಕ್ತಿ ನೃತ್ಯನಾಟಕಗಳನ್ನು ಇಂದಿಗೂ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕದ ಪ್ರತಿಷ್ಥಿತ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾತಿಲಕ ಬಿರುದು, ನಾಟ್ಯರಾಣಿ ಶಾಂತಲಾ ಬಿರುದು ಸೇರಿ ಗೌರವಾನ್ವಿತ ಕೇಂದ್ರ ಸಂಗೀತನಾಟಕ ಅಕಾಡೆಮಿಯ ಪ್ರಶಸ್ತಿಯೊಂದಿಗೆ, ಅಮೇರಿಕ, ಆಸ್ಟ್ತೇಲಿಯ, ಯುರೊಪ್ ಹಾಗೂ ಯುನೈಟೆಡ್ ಕಿಂಗ್ ಡಮ್ ದೇಶಗಳ ಪ್ರಶಸ್ತಿಗಳನ್ನೂ ಪಡೆದಿರುತ್ತಾರೆ.
ಮಾಗಿದ ಕಲಾತಪಸ್ವಿಯ ಪ್ರಸ್ತುತಿಯನ್ನು ಆಸ್ವಾದಿಸಲು ಕಲಾಸಕ್ತರಿಗೆ ಮುಕ್ತ ಪ್ರವೇಶ. ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಹದಿನೈದು ನಿಮಿಷ ಮುಂಚಿತವಾಗಿ ಪ್ರೇಕ್ಷಕರು ಆಸನ ಸ್ವೀಕರಿಸಬೇಕೆಂಬುದು ಆಯೋಜಕರ ವಿನಂತಿ.
ಶಿರ್ವ : ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 16ನೇ ವರ್ಷದ ಭೂಮಿ ಹಬ್ಬವು ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲ ನಾಡ ಅವರ ಅಧ್ಯಕ್ಷತೆಯಲ್ಲಿ ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ಹಬ್ಬದ ಪೂರ್ವಭಾವಿಯಾಗಿ ಶಿರ್ವ ಕೆನರಾ ಬ್ಯಾಂಕ್ ವೃತ್ತದಿಂದ ಪೇಟೆಯ ಮೂಲಕ ಪೆರ್ನಾಲ್ನವರೆಗೆ ನಡೆದ ಕಾಲ್ನಡಿಗೆ ಜಾಥಾಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದರಂಗಡಿ ಗ್ರಾ.ಪಂ. ಅಧ್ಯಕ್ಷೆ ನಮಿತಾ ಭೂಮಿ ಹಬ್ಬವನ್ನು ಉದ್ಘಾಟಿಸಿದರು. ಕೊರಗ ಅಭಿವೃದ್ಧಿಸಂಘಗಳ ಒಕ್ಕೂಟದ ನ್ಯಾಯಾಧೀಶ ಬಾಲರಾಜ್ ಕೋಡಿಕಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭೂಮಿ ಹಬ್ಬದ ಸವಿನೆನಪಿಗಾಗಿ ತೆಂಗಿನ ಸಸಿಯನ್ನು ನೆಡಲಾಯಿತು. ಬೇಬಿ ಮಧುವನ ಮತ್ತು ಪ್ರತೀಕ್ಷಾ ಶಂಕರನಾರಾಯಣ ಹಬ್ಬದ ದೀಪ ಬೆಳಗಿಸಿದರು.


ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ [ಎಂಐಟಿ] ಯು ರಾಷ್ಟ್ರದ 78ನೆಯ ಸ್ವಾತಂತ್ರ್ಯೋತ್ಸವವನ್ನು ಬೇಸಿಕ್ ಸಾಯನ್ಸ್ ಕಟ್ಟಡ [ಹಿಂದಿನ ಎಂಎಂಎಂಸಿ, ಮಣಿಪಾಲ] ದ ಮುಂಭಾಗದಲ್ಲಿ ಆಚರಿಸಿತು.

ಡಾ. ಎಚ್. ಎಸ್. ಬಲ್ಲಾಳ್ ಸಹ-ಕುಲಾಧಿಪತಿಗಳು, ಮಾಹೆ ಇವರು ಪ್ರಧಾನ ಅಭ್ಯಾಗತರಾಗಿ ಮತ್ತು ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ಉಪಕುಲಪತಿಗಳು, ಮಾಹೆ, ಮಣಿಪಾಲ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪಿ. ಗಿರಿಧರ ಕಿಣಿ, ಕುಲಸಚಿವರು, ಮಾಹೆ, ಮಣಿಪಾಲ ಮತ್ತು ಡಾ. ಸೋಮಶೇಖರ ಭಟ್, ಜಂಟಿ ನಿರ್ದೇಶಕರು, ಎಂಐಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.
ಬೆಳಗ್ಗೆ 8.50ಕ್ಕೆ ಬೇಸಿಕ್ ಸಾಯನ್ಸ್ ಬಿಲ್ಡಿಂಗ್ನ ಮುಂಭಾಗದಲ್ಲಿ ಆರಂಭವಾದ ಕಾರ್ಯಕ್ರಮದ ಆರಂಭದಲ್ಲಿ ಎಂಐಟಿಯ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್ ಅವರು ಸ್ವಾಗತ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ಸಮಾವೇಶ, ಪಥಸಂಚಲನದೊಂದಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಬಳಿಕ, ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿ, ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಡಾ. ಎಚ್. ಎಸ್. ಬಲ್ಲಾಳ್ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು: ನಾವು ಇವತ್ತು ರಾಷ್ಟ್ರದ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದರ ಜೊತೆಗೆ ಸೌಹಾರ್ದತೆ, ಉದಾರತೆ ಮತ್ತು ಮಾನವೀಯತೆಯ ಗುಣಗಳನ್ನು ಸಂಭ್ರಮಿಸುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಕ್ಕಾಗಿ ಬಲಿದಾನ ಮಾಡಿದ ಗತಕಾಲದ ಮಹಾತ್ಮರನ್ನು ಗೌರವಿಸಬೇಕು. ಜೊತೆಗೆಯೇ ಸಾಕಲ್ಯ, ನಾವೀನ್ಯ ಮತ್ತು ಶಿಕ್ಷಣವನ್ನು ಹೊಂದಿರುವ ಭವಿಷ್ಯದ ಜನಾಂಗವನ್ನು ರೂಪಿಸುವುದರ ಕಡೆಗೆ ನಾವು ಪ್ರಯತ್ನಶೀಲರಾಗಬೇಕು. ನಮ್ಮ ಒಗ್ಗಟ್ಟಿನ ಕೆಲಸದಿಂದ ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರಬಹುದು ಮತ್ತು ಈ ದೇಶದ ಅದ್ಭುತ ಪರಂಪರೆಯನ್ನು ಎತ್ತಿಹಿಡಿದು ಹೆಮ್ಮೆ ಪಡಬೇಕು.
ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಹೀಗೆ ಹೇಳಿದರು :
ಸ್ವಾತಂತ್ರ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಶ್ರಮಿಸಿದವರನ್ನು ಮತ್ತು ಸಮಗ್ರತೆ, ದೃಢತೆ, ಅಭಿವೃದ್ಧಿಯ ಅವಿಚ್ಛಿನ್ನ ಸಂಕಲ್ಪಗಳೊಂದಿಗೆ ಭವ್ಯ ರಾಷ್ಟ್ರವನ್ನು ರೂಪಿಸಿದವರನ್ನು ಸ್ಮರಿಸಬೇಕಾಗಿದೆ. ಶೈಕ್ಷಣಿಕ ಆವರಣದ ಒಳಗೆ ಮತ್ತು ಹೊರಗೆ ರಾಷ್ಟ್ರಪರವಾದ ಗುಣಗಳನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ಹೊಂದಬೇಕು. ನಾವೀನ್ಯ, ಸಾಕಲ್ಯ ಮತ್ತು ಶ್ರೇಷ್ಠತೆಯನ್ನು ಬೆಂಬಲಿಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಮ್ಮತದಿಂದ ಸಹಕಾರ ನೀಡಬೇಕಾಗಿದೆ. ಎಲ್ಲರಿಗೂ 78ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.
ಎಂಐಟಿಯ ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ [ಹಿರಿಯ ಶ್ರೇಣಿ] ಪ್ರೊ ಸುಹಾಸ್ ಕೌಶಿಕ್ ಮತ್ತು ಮೆಕ್ಯಾಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ, ಎಂಐಟಿ, ಮಣಿಪಾಲ ಇದರ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿಲ್ಪಾ ಸುರೇಶ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಡಾ. ಶ್ರೀರಾಮ ಕೆ. ವಿ., ಎಮ್ಐಟಿ ಯ ಸಹ-ನಿರ್ದೇಶಕರು ಹಾಗು ಇಂಡಸ್ಟ್ರಿ ಸಂಪರ್ಕ, ಪ್ಲೇಸ್ಮೆಂಟ್ ಮತ್ತು ಪ್ರಾಕ್ಟೀಸ್ ಅವರು ಧನ್ಯವಾದ ಸಮರ್ಪಿಸುತ್ತ, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ತಂಡ [ಕಂಟಿನ್ಜೆಂಟ್] ಪ್ರಶಸ್ತಿ ಪುರಸ್ಕೃತರು:
ಎಂಐಟಿಯು ಕೌಶಲ, ಬದ್ಧತೆ ಮತ್ತು ಒಗ್ಗಟ್ಟಿನಿಂದ ಪ್ರಯತ್ನದಿಂದ ಪ್ರತಿಷ್ಠಿತ ಪ್ರಥಮ ತಂಡ ಪ್ರಶಸ್ತಿಯನ್ನು ಗಳಿಸಿದೆ. ಕೆಎಂಸಿಯು ಎರಡನೆಯ ಸ್ಥಾನವನ್ನು ಪಡೆದರೆ, ಮೂರನೆಯ ಸ್ಥಾನವನ್ನು ಮಣಿಪಾಲ್ ಕಾಲೇಜು ಆಫ್ ಹೆಲ್ತ್ ಪ್ರೊಫೆಶನಲ್ಸ್ ಗಿಟ್ಟಿಸಿಕೊಂಡಿದೆ.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿದ ಮಾಹೆ ಮಣಿಪಾಲದ “ಆಟಿದ ತುಳು ಪರ್ಬ” ಆಚರಣೆಯ ಉದ್ಘಾಟನೆ
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಮಣಿಪಾಲವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ರೋಮಾಂಚಕ ಆಚರಣೆಯಾದ “ಆಟಿದ ತುಳು ಪರ್ಬ”ವನ್ನು ಹೆಮ್ಮೆಯಿಂದ ಉದ್ಘಾಟಿಸಿತು. ಕೆಎಂಸಿ ಮಣಿಪಾಲದ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಮುದಾಯದ ಬಾಂಧವರು ತುಳುನಾಡಿನ ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳಲ್ಲಿ ದಿನವಿಡೀ ತಲ್ಲೀನರಾಗಿದ್ದರು.
ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಅವರು ಉದ್ಘಾಟನೆಯನ್ನು ನೆರವೇರಿಸಿ, ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವ ಮತ್ತು ಪ್ರಚಾರ ಮಾಡುವಲ್ಲಿ ತುಳು ಪರ್ಬದ ಮಹತ್ವವನ್ನು ಒತ್ತಿ ಹೇಳಿದರು. ಡಾ. ಬಲ್ಲಾಳ್ ತಮ್ಮ ಭಾಷಣದಲ್ಲಿ, “ತುಳುನಾಡು ಅದರ ಭೌಗೋಳಿಕ ಮತ್ತು ಭಾಷಾ ಗುರುತುಗಳಿಗಿಂತ ಮಿಗಿಲಾದದ್ದು. ಇದು ಒಂದು ಜೀವಂತ, ಉಸಿರಾಟದ ಸಾಂಸ್ಕೃತಿಕ ರಚನೆಯಾಗಿದ್ದು ಅದು ತನ್ನ ಜನರನ್ನು ತನ್ನದೇ ಆದ ಸಂಪ್ರದಾಯಗಳು, ಆಚರಣೆಗಳು ಮತ್ತು ಸಂಸ್ಕೃತಿಯ ಮೂಲಕ ಬಂಧಿಸುತ್ತದೆ. ಈ ಆಚರಣೆಯು ತುಳುನಾಡಿನ ಅಸ್ಮಿತೆಯನ್ನು ವ್ಯಾಖ್ಯಾನಿಸುವ ಆಳವಾದ ಬೇರೂರಿರುವ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ” ಎಂದರು.

ಉದ್ಘಾಟನೆಯ ನಂತರ ಮಣಿಪಾಲದ ಮಾಧವ ಕೃಪಾ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೃತಿ ಶೆಟ್ಟಿ ತುಳು ಭಾಷೆಯಲ್ಲಿ ಮನಮುಟ್ಟುವ ಭಾಷಣ ಮಾಡಿ, ತುಳುನಾಡಿನ ರೋಮಾಂಚಕ ಸಾಂಸ್ಕೃತಿಕ ಆಚರಣೆಗಳನ್ನು ಎತ್ತಿ ತೋರಿಸಿದರು. ಅವರ ಭಾಷಣವು ತುಳುನಾಡನ್ನು ಅನನ್ಯವಾಗಿಸುವ ಸಂಪ್ರದಾಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿತು, ಈ ಪ್ರದೇಶದ ಅಸ್ಮಿತೆಗೆ ಅವಿಭಾಜ್ಯವಾಗಿರುವ ಪ್ರಕೃತಿ ಮತ್ತು ಕೃಷಿಯೊಂದಿಗಿನ ಸಮುದಾಯದ ಸಂಬಂಧದ ಬಗ್ಗೆ ಉತ್ಕಟಭಾವದಿಂದ ಮಾತನಾಡಿದರು.
ಡಾ. ರವಿರಾಜ ಎನ್.ಎಸ್., ಸಿಒಒ ಮಾಹೆ, ಮಣಿಪಾಲ ಇವರು ಗೌರವ ಅಥಿತಿಯಾಗಿದ್ದರು . ಅವರು ಮಾತನಾಡುತ್ತಾ , ಪ್ರಾದೇಶಿಕ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಮಾಹೆಯ ಪಾತ್ರವನ್ನು ಎತ್ತಿ ತೋರಿಸುತ್ತಾ, “ನಮ್ಮ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ. ಯಕ್ಷಗಾನ ಕೇಂದ್ರ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಂತಹ ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳ ಉಪಕ್ರಮಗಳ ಮೂಲಕವು ತುಳುನಾಡಿನ ಸಂಪ್ರದಾಯಗಳ ಶ್ರೀಮಂತಿಕೆಯನ್ನು ದಾಖಲಿಸಲು ಮತ್ತು ಪ್ರಸಾರ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
ಗೌರವ ಅಥಿತಿಯಾಗಿದ್ದ ಮಾಹೆ ಮಣಿಪಾಲದ ಅಂತರಾಷ್ಟ್ರೀಯ ಸಹಯೋಗದ ನಿರ್ದೇಶಕ ಡಾ.ಕರುಣಾಕರ ಕೋಟೆಗಾರ್ ಎ ಅವರು, “ತುಳು ಪರ್ಬ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ತುಳುನಾಡನ್ನು ವ್ಯಾಖ್ಯಾನಿಸುವ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯ ಆಚರಣೆಯಾಗಿದೆ. ವಿದ್ಯಾರ್ಥಿಗಳು ಮತ್ತು ವಿಶಾಲ ಸಮುದಾಯವು ನಮ್ಮ ಪ್ರದೇಶವನ್ನು ಅನನ್ಯವಾಗಿಸುವ ರೋಮಾಂಚಕ ಸಂಪ್ರದಾಯಗಳಲ್ಲಿ ಮುಳುಗಲು ಒಂದು ಅಪರೂಪದ ಸಮಯವಾಗಿದೆ ಎಂದರು”.
ಆಟಿದ ತುಳು ಪರ್ಬವು ತುಳುನಾಡಿನ ಶ್ರೀಮಂತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನ್ಯಾಸಗೊಳಿಸಿ ಇಡೀ ದಿನದ ರೋಮಾಂಚಕಾರಿ ಚಟುವಟಿಕೆಗಳನ್ನು ನೀಡಿತು. “ತುಳು ರಂಗ್” ಎಂಬ ಚಿತ್ರಕಲೆ ಸ್ಪರ್ಧೆಯೊಂದಿಗೆ ಚಟುವಟಿಕೆ ಪ್ರಾರಂಭವಾಯಿತು, ಇದರಲ್ಲಿ ಸ್ಪರ್ದಿಗಳು ತುಳುನಾಡಿನ ಸಾಂಸ್ಕೃತಿಕ ಲಕ್ಷಣಗಳನ್ನು ಪ್ರತಿಬಿಂಬಿಸುವ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಇದಾದ ನಂತರ ತುಳು ಜಾನಪದ ಸಮೂಹ ನೃತ್ಯ ಸ್ಪರ್ಧೆ “ತುಳು ನಲಿಕೆ” ತುಳು ಸಂಸ್ಕೃತಿಯ ರೋಮಾಂಚಕ ಲಯ ಮತ್ತು ಚಲನೆಗಳಿಗೆ ಜೀವ ತುಂಬಿತು.
ಮಧ್ಯಾಹ್ನದ ನಂತರ ತುಳುನಾಡಿನ ಸಂಸ್ಕೃತಿ ಕುರಿತು ನಡೆದ – “ತುಳು ಬದ್ಕ್ ” ಪ್ರಸ್ತುತಿಯನ್ನು ಆನಂದಿಸಿದರು, ಇದು ತುಳು ನಾಡನ್ನು ವ್ಯಾಖ್ಯಾನಿಸುವ ಇತಿಹಾಸ, ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ವಿವರವಾದ ಒಳನೋಟಗಳನ್ನು ಒದಗಿಸಿತು. “ಭೂತ” ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಪ್ರದರ್ಶನವು ದಿನದ ವಿಶೇಷವಾಗಿತ್ತು, ನಂತರ ಭೂತಾರಾಧನೆ, ಕಂಬಳ, ಯಕ್ಷಗಾನ ಮತ್ತು ಕರಕುಶಲತೆ ಸೇರಿದಂತೆ ತುಳು ಸಾಂಸ್ಕೃತಿಕ ಆಚರಣೆಗಳಲ್ಲಿ ಪರಿಣಿತರನ್ನು ಒಳಗೊಂಡ ಸಂವಾದವು ನಡೆಯಿತು.
ಪಾಲ್ಗೊಂಡವರು ದಿನವಿಡೀ, ಸ್ಥಳೀಯ ಕುಶಲಕರ್ಮಿಗಳನ್ನು ಒಳಗೊಂಡ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ಪ್ರದರ್ಶನ ನಡೆಯಿತು, ತುಳುನಾಡು ಪಾಕಪದ್ಧತಿಯೊಂದಿಗೆ ಪಾಕಶಾಲೆಯ ಆನಂದವನ್ನು ಆನಂದಿಸಿದರು ಮತ್ತು ಪ್ರದೇಶದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳನ್ನು ಅನ್ವೇಷಿಸುವ ಮಾರ್ಗದರ್ಶಿ ಪರಂಪರೆಯ ನಡಿಗೆಗಳಲ್ಲಿ ಭಾಗವಹಿಸಿದರು.
ಡಾ. ಪ್ರವೀಣ್ ಶೆಟ್ಟಿ, ಸಂಯೋಜಕರು, ಎಂಯು ಕೇಂದ್ರ – ಮಾನವಿಕ ಮತ್ತು ನಿರ್ವಹಣೆ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶ್ರೀಮತಿ ಶೃತಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ವತಿಯಿಂದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಡೆಯಿತು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಂಐಟಿ ನಿವೃತ್ತ ಪ್ರಾಧ್ಯಾಪಕ ನಾರಾಯಣ ಶೆಣೈ, ವೈದ್ಯ ಡಾ| ವಿಜಯೇಂದ್ರ ಅವರು ಕೈಮಗ್ಗ ಮತ್ತು ಗುಡಿಕೈಗಾರಿಕೆಯ ಮಹತ್ವದ ಬಗ್ಗೆ ಪದ್ಮಶಾಲಿ ಸಮುದಾಯದ ಕೊಡುಗೆ ಬಗ್ಗೆ ಮಾತನಾಡಿದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭೆ ಸದಸ್ಯರಾದ ಪ್ರಭಾಕರ್ ಪೂಜಾರಿ, ಕೃಷ್ಣರಾವ್ ಕೊಡಂಚ, ರಜನಿ ಹೆಬ್ಟಾರ್, ವಿಜಯ ಕೊಡವೂರು, ಆಯೋಜನ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್, ಪದ್ಮಶಾಲಿ ಸಮಾಜದ ದೇವಸ್ಥಾನಗಳ ಪ್ರಮುಖರಾದ ಜ್ಯೋತಿ ಪ್ರಸಾದ್ ಶೆಟ್ಟಿಗಾರ್ ಕಿನ್ನಿಮೂಲ್ಕಿ, ಸುರೇಶ್ ಶೆಟ್ಟಿಗಾರ್ ಸಾಲಿಕೇರಿ, ಗಣೇಶ್ ಶೆಟ್ಟಿಗಾರ್ ಗೋಳಂಗಡಿ, ಓಂಪ್ರಕಾಶ್ ಶೆಟ್ಟಿಗಾರ್, ಪ್ರಭಾಶಂಕರ್ ಪದ್ಮಶಾಲಿ, ಜಯಕರ್ ಶೆಟ್ಟಿಗಾರ್, ವಿವೇಕ್ ಪಿ. ಎಸ್. , ಸುಂದರ್ ಶೆಟ್ಟಿಗಾರ್, ಹರೀಶ್ಚಂದ್ರ ಶೆಟ್ಟಿಗಾರ್, ಮನೋಹರ್ ಶೆಟ್ಟಿಗಾರ್, ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಯಶವಂತ್, ಪ್ರಮುಖರಾದ ನರೇಂದ್ರ ಶೆಟ್ಟಿಗಾರ್ ಹೆರ್ಗ, ಶ್ರೀನಿವಾಸ್ ಶೆಟ್ಟಿಗಾರ್, ಅನುರಾಧಾ ಶೆಟ್ಟಿಗಾರ್, ಶೋಭಾ ಜ್ಯೋತಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಮಠದಲ್ಲಿ ಪ್ರಥಮ ಜಿಲ್ಲಾ ಕನ್ನಡ ಜಾನಪದ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ : ಕನ್ನಡ ಜಾನಪದ ಪರಿಷತ್, ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 27ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿರುವ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಇದರ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೀoದ್ರ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು
ಈ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿ, ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲಿ. ಜನಪದ ನಮ್ಮ ನಾಡಿನ ಅದ್ಭುತವಾದ ಆಸ್ತಿ ಎಂದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ ಕಾರ್ಯಾಧ್ಯಕ್ಷ ಉದಯಕುಮಾರ್ ಬಿ ಹೈಕಾಡಿ, ಕೋಶಾಧಿಕಾರಿ ಚಂದ್ರ ಹಂಗಾರಕಟೈ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪ್ರಕಾಶ್ ಸುವರ್ಣ ಕಟಪಾಡಿ, ಸಂ.ಕಾರ್ಯದರ್ಶಿ ರಾಘವೇಂದ್ರ ಪ್ರಭು, ಕರ್ವಾಲು, ತಾಲೂಕು ಅಧ್ಯಕ್ಷ ಮಾಯಾ ಕಾಮತ್, ತಾಲೂಕು ಪ್ರಧಾನ ಕಾರ್ಯದರ್ಶಿ ಕುಸುಮ ಕಾಮತ್, ಪ್ರಭಾ ರಾವ್ ಮಠದ ರಮೇಶ್ ಭಟ್ ಮುಂತಾದವರಿದ್ದರು.
ಭಾರತೀಯ ಕಲಾಪ್ರಕಾರಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವು ಭಗವಂತನ ಜೊತೆ ಅನುಸಂಧಾನ ಮಾಡುವ ಮಾಧ್ಯಮವೂ ಹೌದು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಉಡುಪಿ : ಭಾರತೀಯ ಕಲಾಪ್ರಕಾರಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವು ಭಗವಂತನ ಜೊತೆ ಅನುಸಂಧಾನ ಮಾಡುವ ಮಾಧ್ಯಮವೂ ಹೌದು ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಉಡುಪಿಯ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ರಜತ ಸಂಭ್ರಮ’ ಮಹೋತ್ಸವದ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಭಾರತದ ತಾಯಿ ಬೇರು ನಮ್ಮ ಕಲೆ, ಸಂಸ್ಕೃತಿಯ ಪರಂಪರೆಯಲ್ಲಿ ಭದ್ರವಾಗಿ ಅಡಗಿದೆ, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇಂತಹ ಸಂಸ್ಥೆಗಳಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆ ಬೇಕು ಎಂಬ ಪ್ರಜ್ಞೆ ಸಮಾಜದಲ್ಲಿ ಮೂಡುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.
ಉಡುಪಿಯ ಯಕ್ಷಗಾನ ಕಲಾರಂಗ-ಇನ್ಫೋಸಿಸ್ ಫೌಂಡೇಶನ್ (ಐವೈಸಿ) ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಆರ್. ರಾಘವೇಂದ್ರ ಆಚಾರ್ಯ ಮಣಿಪಾಲ ಅವರು ಪ್ರಾರ್ಥನ ಸ್ತುತಿಯೊಂದಿಗೆ ಆರಂಭಿಸಿದರು. ಈ ವೇಳೆ ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ| ಕೆ. ಸದಾಶಿವ ರಾವ್ ಅವರಿಗೆ ‘ಕಲಾಪೋಷಕ’ ಗೌರವಾರ್ಪಣೆಯನ್ನು ನೀಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಳಿಕ ಕೆ.ಎಸ್. ವಿಷ್ಣುದೇವ್ ಅವರಿಂದ ರಾಗಂ..ತಾನಂ…ಪಲ್ಲವಿ ಸಹಿತ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಅವರಿಗೆ ವಯೊಲಿನ್ನಲ್ಲಿ ವಿ.ಎಸ್. ಗೋಕುಲ್ ಆಲಂಗೋಡೆ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಹಾಗೂ ಘಟಂನಲ್ಲಿ ಶ್ರೀಜಿತ್ ವೆಲ್ಲತ್ತಂಜೂರ್ ಸಹಕರಿಸಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಡಾ| ಉದಯಶಂಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಲಯದ ಗುರು ಉಮಾಶಂಕರಿ ವಂದನಾರ್ಪಣೆಗೈದರು.

