ಮಂಗಳೂರು : ಲೋಕಾಯುಕ್ತ ದಾಳಿಗೊಳಗಾದ ಮಂಗಳೂರು ಮನಪಾ ಆಯುಕ್ತ ಎಲ್.ಸಿ.ಆನಂದ್ರನ್ನು ತಕ್ಷಣ ವಜಾಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ ಕಾರ್ಯಕರ್ತರು ಮಂಗಳೂರು ಮನಪಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಎ.ಎಸ್ ಗ್ರೇಡ್ ಅಧಿಕಾರಿಯಾಗಿರುವ ಮನಪಾ ಕಮಿಷನರ್ ಎಲ್.ಸಿ.ಆನಂದ್ ಮನೆ ಹಾಗೂ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸಿಪಿಐಎಂ ಇಂದು ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಕಮಿಷನರ್ ಹಟಾವೋ ಎಂಸಿಸಿ ಬಚಾವೋ ಘೋಷಣೆ ಕೇಳಿ ಬಂತು. ಜನರ ತೆರಿಗೆ ಹಣದಿಂದ ಮನಪಾ ಕಮಿಷನರ್ ಅಕ್ರಮ ಆಸ್ತಿ ಸಂಪಾದಿಸಿರುವುದಾಗಿ ಪ್ರತಿಭಟನಾಕಾರರ ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮುಖಂಡ ಬಿ.ಕೆ.ಇಮ್ತಿಯಾಝ್ ಮಾತನಾಡಿ, ಲೋಕಾಯುಕ್ತ ದಾಳಿಗೊಳಗಾದ ಮನಪಾ ಆಯುಕ್ತ ಎಲ್.ಸಿ.ಆನಂದ್ ತಕ್ಷಣ ಕುರ್ಚಿ ಬಿಟ್ಟು ಇಳಿಯಬೇಕು. ಮಂಗಳೂರಿನ ನಾಗರಿಕರು ಈ ಮಹಾನಗರವನ್ನು, ಪಾಲಿಕೆಯನ್ನು ಖಂಡಿತಾ ಮುನ್ನಡೆಸುತ್ತಾರೆ. ಬೀದಿಬದಿ ವ್ಯಾಪಾರಿಗಳ ಪರ ಪ್ರತಿಭಟನೆ ಮಾಡಿದಾಗ ಒಬ್ಬೊಬ್ಬ ವ್ಯಾಪಾರಿಗಳಿಂದ ಲಕ್ಷಾಂತರ ರೂ. ಪಡೆದಿದ್ದೀರಾ ಎಂದು ಕೇಳಿದ್ದೀರಿ. ಲಕ್ಷಾಂತರ ಪಡೆದದ್ದು, ನಾವಲ್ಲ ನೀವು. ಅದು ನಿಮ್ಮ ಜೇಬಿನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಳಿಕ ಪಾಲಿಕೆ ಮುಂಭಾಗದ ರಸ್ತೆ ತಡೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ. ಈ ವೇಳೆ ಬರ್ಕೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.