ಪುತ್ತೂರು : ಕಳೆದ ಎರಡು ವರ್ಷದ ಹಿಂದೆ ನಗರದ ಬೀಡಿ ಬ್ರಾಂಚ್ವೊಂದರಿಂದ ಸಾವಿರಾರು ರೂ ಮೌಲ್ಯದ ಬೀಡಿ ಕಳವು ಮಾಡಿದ ಪ್ರಕರಣದ ಆರೋಪಿಯಾಗಿದ್ದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಉಳ್ಳಾಲದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮ ನಿವಾಸಿ ಮಹಮ್ಮದ್ ಬಂಧಿತ ಆರೋಪಿ. ಈತ 2022ರಲ್ಲಿ ಕೂರ್ನಡ್ಕದ ಬೀಡಿ ಬ್ರಾಂಚ್ವೊಂದರಿಂದ ಸುಮಾರು 22 ಸಾವಿರ ರೂ ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿದ್ದು, ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಹಾಗೂ ಡಿವೈಎಸ್ಪಿ ಅರುಣ್ ನಾಗೇಗೌಡರ ನಿರ್ದೇಶನ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜರ ಮಾರ್ಗದರ್ಶನದಂತೆ ಸಿಬ್ಬಂದಿಗಳಾದ ವಸಂತ ಗೌಡ ಮತ್ತು ಬಸವರಾಜು ಅವರು ಆರೋಪಿಯನ್ನು ಉಳ್ಳಾಲದ ಕೆ.ಸಿ ರೋಡ್ ಎಂಬಲ್ಲಿ ಅಕ್ಟೋಬರ್ 26ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.