ಉಡುಪಿ : ಇಲ್ಲಿನ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು ತಮ್ಮ ವಕಾಲತ್ತನ್ನು ವಾಪಾಸ್ಸು ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿಗದಿಯಾಗಿದ್ದ ಸಾಕ್ಷಿಗಳ ವಿಚಾರಣೆಯು ಇಂದು (ಗುರುವಾರಕ್ಕೆ) ಮುಂದೂಡಲಾಗಿದೆ.
ಅಕ್ಟೋಬರ್ 24 ರಂದು ನ್ಯಾಯಾಲಯವು ನವೆಂಬರ್ 20ರಂದು 1 ಹಾಗೂ 2 ಹಾಗೂ ನವೆಂಬರ್ 21ರಂದು 3 ಹಾಗೂ 4 ನೇ ಸಾಕ್ಷಿಗಳು ವಿಚಾರಣೆಗೆ ದಿನಾಂಕ ನಿಗದಿ ಪಡಿಸಿತ್ತು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿ ಕೋರ್ಟ್ಗೆ ಕರೆದುಕೊಂಡು ಬರಲಾಗಿತ್ತು. ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು, ಇನ್ನು ಮುಂದೆ ನಾವು ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಮತ್ತು ನಮ್ಮ ವಕಾಲತ್ತನ್ನು ವಾಪಾಸ್ಸು ಪಡೆದುಕೊಳ್ಳುತ್ತೇವೆ ಎಂದು ಕೋರ್ಟಿಗೆ ತಿಳಿಸಿದರು.
ಅದಕ್ಕೆ ಆರೋಪಿ ಚೌಗುಲೆ, ಈ ಹಿನ್ನೆಲೆಯಲ್ಲಿ ನನ್ನ ಪತ್ನಿ ಹೊಸ ವಕೀಲರನ್ನು ನೇಮಕ ಮಾಡಲಿದ್ದಾರೆ ಎಂದರು. ‘ಆಕೆಯನ್ನು ವಿಚಾರಿಸಿ ಕೂಡಲೇ ವಕೀಲರನ್ನು ನೇಮಕ ಮಾಡುವಂತೆ ನ್ಯಾಯಾಧೀಶ ಎ.ಸಮೀವುಲ್ಲಾ ಆರೋಪಿಗೆ ಸೂಚಿಸಿದರು. ವಿಚಾರಣೆ ಇಡೀ ನ್ಯಾಯಾಲಯವೇ ಸಿದ್ಧವಾಗಿರುವಾಗ ಕೊನೆ ಕ್ಷಣದಲ್ಲಿ ಆರೋಪಿ ವಕೀಲರು ವಕಾಲತ್ತು ವಾಪಾಸ್ಸು ಪಡೆದಿರುವುದಕ್ಕೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಆಕ್ಷೇಪ ಸಲ್ಲಿಸಿದರು.