ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಹಲವಾರು ಅವಕಾಶಗಳಿವೆ. ದೇಶಿಯ ಸಂಘಸoಸ್ಥೆಗಳಲ್ಲದೆ ವಿದೇಶಿ ಅನುದಾನಗಳ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಚಿಂತನೆ ನಡೆಸಬೇಕು ಎಂದು ಡಾ.ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್ ಪೈ ಹೇಳಿದರು.

ಅವರು ಭಾನುವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ನಡೆದ ‘ರಂಗಭೂಮಿ ಆನಂದೋತ್ಸವ’ ಕಾರ್ಯಕ್ರಮದಲ್ಲಿ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ‘ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ ಯನ್ನು ಸ್ವೀಕರಿಸಿ ಮಾತನಾಡಿದರು.
ಡಾ.ಟಿಎಂಎ ಪೈ ಅವರಿಗೆ ಕಲೆ ಹಾಗೂ ಸಂಸ್ಕೃತಿಯಲ್ಲಿ ಅಪಾರವಾದ ಆಸಕ್ತಿಯಿತ್ತು. ಯಕ್ಷಗಾನದಲ್ಲಿಯೂ ಅವರಿಗೆ ಅಪಾರವಾದ ಆಸಕ್ತಿ ಇದ್ದ ಕಾರಣ ಎಂಜಿಎoನಲ್ಲಿ ಯಕ್ಷಗಾನ ಕೇಂದ್ರ ಆರಂಭಿಸಿದ್ದರು. ಪ್ರಸ್ತುತ ರಂಗಭೂಮಿ ಉಡುಪಿ ನಡೆಸುತ್ತಿರುವ ಚಟುವಟಿಕೆಗಳು ಸಂತೋಷ ತಂದಿವೆ. ಮಾಹೆ ಹಿಂದೆಯೂ ರಂಗಭೂಮಿ ಸಂಸ್ಥೆಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದೆ. ಮುಂದೆಯೂ ಈ ಸಹಕಾರವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಮಾತನಾಡಿ, ನಮ್ಮ ಸಂಸ್ಕೃತಿ ಹಾಗೂ ಕಲೆಗೆ ಉಡುಪಿ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಒಂದು ರೀತಿಯಲ್ಲಿ ಉಡುಪಿ, ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ಉಡುಪಿ ಜಿಲ್ಲೆ ಕಲೆ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಅದಕ್ಕೆ ಮಣಿಪಾಲ ಸಮೂಹ ಸಂಸ್ಥೆಗಳು ನೀಡಿರುವ ಕೊಡುಗೆ ಅಪಾರ. ಆಸ್ಪತ್ರೆ, ಬ್ಯಾಂಕಿoಗ್, ಶಿಕ್ಷಣ ಹೀಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಡಾ. ಟಿಎಂಎ ಪೈ ಹಾಗೂ ಪ್ರಸ್ತುತ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಟಿ.ಅಶೋಕ್ ಪೈ ಅವರ ದೂರದೃಷ್ಟಿತ್ವ, ಮಾರ್ಗದರ್ಶನ ಶ್ಲಾಘನೀಯ. ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ಸಂದಿರುವುದು ಅರ್ಹವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕರು ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ನಾಡು, ಸಂಸ್ಕೃತಿ, ಕಲೆ, ಜಾನಪದ ಮೊದಲಾದ ಕ್ಷೇತ್ರಗಳಿಗೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ನೀಡುವ ಕಾರ್ಯ ಮಾಡುತ್ತಿದೆ. ಇದರ ಉದ್ದೇಶ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಜನ ಎಂದೂ ಮರೆಯಬಾರದು. ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ರಂಗಭೂಮಿ ಕಳೆದ ಶೈಕ್ಷಣಿಕ ಸಾಲಿನಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಂಗಶಿಕ್ಷಣ ನೀಡುವ ಮಹಾನ್ ಕಾರ್ಯಕ್ಕೆ ಮುಂದಾಗಿದೆ. ಈ ಬಾರಿ ರಂಗಶಿಕ್ಷಣವನ್ನು ಕನಿಷ್ಟ 25 ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ. ಈ ಎಲ್ಲಾ ಕಾರ್ಯಗಳಿಗೆ ಸಂಘಸoಸ್ಥೆಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್ ಪೈ ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್ ಕೆ., ಉದ್ಯಮಿ ಪುರುಷೋತ್ತಮ ಶೆಟ್ಟಿ, ಎಂಜಿಎo ಕಾಲೇಜಿನ ಪ್ರಾಶುಪಾಲ ಪ್ರೊ.ಲಕ್ಶ್ಮಿ ನಾರಾಯಣ ಕಾರಂತ, ರಂಗಭೂಮಿ ಉಡುಪಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.
ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ವಿದ್ಯಾವಂತ ಆಚಾರ್ಯ ಅಭಿನಂದನಾ ಮಾತುಗಳನ್ನಾಡಿದರು. ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ. ವಿಷ್ಣುಮೂರ್ತಿ ಪ್ರಭು ವಂದಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಯನ ನಾಟಕ ಮನೆ ಮಂಗಳೂರು ವತಿಯಿಂದ ‘ಅಶ್ವತ್ಥಾಮ ನಾಟ್ ಔಟ್’ ನಾಟಕ ಪ್ರದರ್ಶನಗೊಂಡಿತು.