ಕಾರ್ಕಳ : ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾಮಗಾರಿಗೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳ ರಾಜ್ಯಕ್ಕೆ ವಿದ್ಯುತ್ ಸರಬರಾಜಿಗಾಗಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಇನ್ನಾ ಗ್ರಾಮದ ಫಲವತ್ತಾದ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹಾದು ಹೋಗಲಿದೆ. ಇದರಿಂದ ಇನ್ನಾ ಗ್ರಾಮದ ನೂರಾರು ಕೃಷಿಕರು ಸಂತ್ರಸ್ತರಾಗುವ ಅಪಾಯವಿದೆ ಎಂಬುದು ಸ್ಥಳೀಯರು ಮತ್ತು ಕಾಂಗ್ರೆಸ್ ಮುಖಂಡರ ವಾದವಾಗಿದೆ. ಈ ಹಿಂದೆ ಕೂಡ ಅಧಿಕಾರಿಗಳನ್ನು ಸ್ಥಳೀಯರು ಮತ್ತು ಹೋರಾಟಗಾರರು ಸೇರಿ ಕಾಮಗಾರಿ ನಡೆಸದಂತೆ ಹಿಂದಕ್ಕೆ ಕಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.