Condolences
ಉಡುಪಿ : 10ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿಯ ಪಳ್ಳಿ ದಾದಬೆಟ್ಟು ಎಂಬಲ್ಲಿ ಬುಧವಾರ ಸಂಭವಿಸಿದೆ.
ಪಳ್ಳಿ ದಾದಬೆಟ್ಟು ಜಯರಾಮ ಆಚಾರ್ಯ ಮತ್ತು ಚಂದ್ರಿಕಾ ಅವರ ಪುತ್ರಿ ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮೂಡುಬೆಳ್ಳೆ ಸಂತ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ.
ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತೆಂದು ತಿಳಿದುಬಂದಿದೆ. ಭಾಗ್ಯಶ್ರೀ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶಿಕ್ಷಕರು, ವಿದ್ಯಾರ್ಥಿ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತಳ ಗೌರವಾರ್ಥ ಶಾಲೆಗೆ ರಜೆ ನೀಡಲಾಗಿತ್ತು.
ಉಡುಪಿ : ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ|ವಲೇರಿಯನ್ ಮೆಂಡೋನ್ಸಾ ಅವರು ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

75ರ ವಯಸ್ಸಿನ ಇವರು ಅತ್ಯಂತ ಉತ್ಸಾಹಿ ಧರ್ಮ ಗುರುಗಳಾಗಿದ್ದರು. ಸದಾ ಹಸನ್ಮುಖಿಯಾಗಿದ್ದ ಇವರು ಕೇವಲ ಕ್ರೈಸ್ತರ ಮಾತ್ರವಲ್ಲದೆ ಎಲ್ಲಾ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಶಿರ್ವ ಸಮೀಪದ ಪಿಲಾರ್ ಚರ್ಚಿನಲ್ಲಿ 1949ರ ಡಿಸೆಂಬರ್ 9 ರಂದು ಜನಿಸಿದ್ದ ಅವರಿಗೆ 1976 ರ ಮೇ 7 ರಂದು ಗುರುದೀಕ್ಷೆ ಲಭಿಸಿತ್ತು. ಬಳಿಕ ವಿವಿಧ ಚರ್ಚುಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಧರ್ಮಗುರುಗಳಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಸಂಗೀತ ಪ್ರೇಮಿ ಆಗಿದ್ದ ಇವರ ಹಲವು ಧ್ವನಿ ಸುರುಳಿಗಳು ಬಿಡುಗಡೆಯಾಗಿದ್ದವು.
ಅವರು ರೋಮ್ನ ಅರ್ಬನ್ ಯೂನಿವರ್ಸಿಟಿಯಿಂದ B.Th ಜೊತೆಗೆ ಇಂಗ್ಲಿಷ್ನಲ್ಲಿ MA ಮತ್ತು ಮೀಡಿಯಾ ಸಂವಹನದಲ್ಲಿ ಡಿಪ್ಲೊಮಾವನ್ನು (ರೇಡಿಯೋ ಮತ್ತು AV ಏಡ್ಸ್) ಪಡೆದರು.
ವಂ|ವಲೇರಿಯನ್ ಮೆಂಡೋನ್ಸಾ ಅವರ ನಿಧನಕ್ಕೆ ಉಡುಪಿ ಧರ್ಮಾಧ್ಯಕ್ಷರಾದ ವಂ|ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಲಚ್ಚಿ ಪೂಜಾರ್ತಿ (97) ವಯೋಸಹಜ ಅನಾರೋಗ್ಯದಿಂದ ಜೂನ್ 30ರಂದು ನಿಧನರಾದರು.

ಕೋಟದ ಕೋಟತಟ್ಟು ನಿವಾಸಿಯಾಗಿದ್ದ ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರಿಗೆ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಸುನೀಲ್ ಕುಮಾರ್, ಉದ್ಯಮಿ ಆನಂದ ಸಿ.ಕುಂದರ್ ಸಹಿತ ಉಡುಪಿ, ದಕ್ಷಿಣ ಕನ್ನಡದ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರ ಎಂಬಲ್ಲಿ ಮನೆ ಕುಸಿದು ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ.

ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ, ಕುಸಿದ ಕಾರಣ ಈ ಘಟನೆ ಸಂಭವಿಸಿದೆ.
ಇದರಿಂದ ಯಾಸಿರ್ ಎಂಬವರ ಮನೆಯ ಗೋಡೆಗೆ ಬಿದ್ದು, ಮನೆಯ ಗೋಡೆ ಕುಸಿತ ಆಗಿದೆ. ಮನೆಯೊಳಗೆ ವಾಸ್ತವ್ಯ ವಿದ್ದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಮೃತಪಟ್ಟಿದ್ದಾರೆ.
ಮೂವರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಬಾಲಕಿ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಕಾಪು : ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಾಪು ಶೇಖರ ಆಚಾರ್ಯ (74) ಅವರು ಜೂ.21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಸಹೋದರರು, ಸಹೋದರಿಯನ್ನು ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಮನೆಗೆ ವಾಪಸ್ಸಾಗಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಶುಕ್ರವಾರ ಬೆಳಗ್ಗಿನ ಜಾವ ತೀವ್ರ ಅಸ್ವಸ್ಥತಗೊಂಡು ನಿಧನ ಹೊಂದಿದ್ದಾರೆ.
ಸಾಮಾಜಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ಅವರು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದರು.
ಕಾಪು ಸಿಎ ಬ್ಯಾಂಕ್ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದು ಬಳಿಕ ವಿಕಾಸ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿ, ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಶ್ವಕರ್ಮ ಸಮಾಜದ ಮುಂಚೂಣಿಯ ನಾಯಕರಾಗಿದ್ದ ಅವರು ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರ ಸಮಿತಿಯಲ್ಲಿ ವಿಶ್ವಕರ್ಮ ಸಮಾಜವನ್ನು ಪ್ರತಿನಿಧಿಸುತ್ತಿದ್ದರು. ಕಾಪು ಪರಿಸರದ ದೇವಸ್ಥಾನ, ದೈವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲೂ ಪೂರ್ಣ ಸಹಕಾರ ನೀಡುತ್ತಾ ಬಂದಿದ್ದರು.
ಕಾಪು ಶೇಖರ ಆಚಾರ್ಯ ಅವರ ನಿಧನಕ್ಕೆ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು, ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಗಣ್ಯರಾದ ಕೆ.ಪಿ. ಆಚಾರ್ಯ, ಕೆ. ವಾಸುದೇವ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಧರ ಆಚಾರ್ಯ ವಡೇರಹೋಬಳಿ, ಮಾಧವ ಆರ್. ಪಾಲನ್, ವಿಕ್ರಂ ಕಾಪು, ಶೇಖರ್ ಸಾಲ್ಯಾನ್, ರಮೇಶ್ ಹೆಗ್ಡೆ, ಮೋಹನ್ ಬಂಗೇರ, ಪ್ರಸಾದ್ ಶೆಣೈ ಹಾಗೂ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ, ಕಾಪು, ಕಟಪಾಡಿ ಸೇರಿದಂತೆ ವಿವಿಧ ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
ಹಿರಿಯ ನ್ಯಾಯವಾದಿ, ಉಡುಪಿ ನಗರಪ್ರಾಧಿಕಾರದ ಮಾಜಿ ಅಧ್ಯಕ್ಷ ಚೇರ್ಕಾಡಿ ವಿಜಯ ಹೆಗ್ಡೆ ನಿಧನ
ಉಡುಪಿ : ಉಡುಪಿಯ ಹಿರಿಯ ನ್ಯಾಯವಾದಿˌ ಉಡುಪಿ ನಗರಪ್ರಾಧಿಕಾರದ ಮಾಜಿ ಅಧ್ಯಕ್ಷರು ಚೇರ್ಕಾಡಿ ವಿಜಯ ಹೆಗ್ಡೆಯವರು ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಲೋಕಸಭೆ ಚುನಾವಣೆ ಸಂದರ್ಭ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಉಡುಪಿ ವಕೀಲರ ಸಂಘ, ಜಿಲ್ಲಾ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಉಡುಪಿ/ಶಿವಮೊಗ್ಗ : ಬಿಜೆಪಿಯ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಸೋಮವಾರ ಹೃದಯಾಘಾತದಿಂದ ನಿಧನರಾದರು.
ರಾಜ್ಯ ಸರಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಭಾನುಪ್ರಕಾಶ್ ಭಾಷಣ ಮಾಡಿದ ಬಳಿಕ ಅಲ್ಲೇ ಕುಸಿದು ಬಿದ್ದರು.
ತಕ್ಷಣ ಅವರನ್ನು ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ- ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಕ್ಲಷ್ಟರ್ ಉಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದರು.
ಉಡುಪಿ : ಪ್ರಸಿದ್ಧ ನರರೋಗ ತಜ್ಞ ಹಾಗೂ ಆದರ್ಶ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ ಡಾ. ರಾಜಾ(73) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಬೆಳಿಗ್ಗೆ ಮಣಿಪಾಲದ ರಾಜೀವ್ ನಗರದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಗಲುವಿಕೆ ಸಮಾಜಕ್ಕೆ ಹಾಗೂ ವೈದ್ಯಕೀಯ ಲೋಕಕ್ಕೆ ತೀವ್ರ ನಷ್ಟವಾಗಿದೆ.
ಆಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಉಡುಪಿ : ನಿನ್ನೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀ ಭಂಡಾರಕೇರಿ ಮಠಾಧೀಶರ ದಿವ್ಯಾನುಗ್ರಹದೊಂದಿಗೆ ನಡೆಯುತ್ತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಣದ ವಿಷಯದಲ್ಲಿ ಪ್ರವಚನಗೈದ ಬಳಿಕ ಅಲ್ಲೇ ಕುಸಿದು ಅಸ್ವಸ್ಥಗೊಂಡಿದ್ದ ದ್ವೈತ ಸಿದ್ಧಾಂತ ಮೇರು ವಿದ್ವಾಂಸರೂ, ಪ್ರಚನಕಾರರೂ ಲೇಖಕರೂ ಕೃಷ್ಣ ಮಠ ಅಷ್ಟಮಠಗಳ ಆಸ್ಥಾನ ವಿದ್ವಾಂಸರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಇಂದು ಶನಿವಾರ ಬೆಳಿಗ್ಗೆ ನಿಧನಹೊಂದಿದ್ದಾರೆ. ಅವರಿಗೆ 72 ವರ್ಷ ಪ್ರಾಯವಾಗಿತ್ತು
ವಿದ್ವಾಂಸರ ಮನೆತನದಲ್ಲೇ ಜನಿಸಿದ್ದ ಉಪಾಧ್ಯಾಯರು ಸಂಪ್ರದಾಯ ನಿಷ್ಠೆ ಹಾಗೂ ವಿಪ್ರವಿಹಿತ ಕರ್ಮಾನುಷ್ಠಾನಗಳಲ್ಲಿ ಅಪಾರ ಶ್ರದ್ಧೆ ಹೊಂದಿದ್ದು ಜೀವನಪರ್ಯಂತ ಅವುಗಳನ್ನು ಪಾಲಿಸಿಕೊಂಡು ಬಂದಿದ್ದರು.
ಉಡುಪಿಯ ಪ್ರಸಿದ್ಧ ಶ್ರೀ ಮನ್ಮಧ್ವ ಸಿದ್ಧಾಂತ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಅವಧಿ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಅನೇಕ ಮಠಗಳಿಂದ ಪ್ರಕಟವಾಗುತ್ತಿದ್ದ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಅನೇಕ ಮಾಸಪತ್ರಿಕೆಗಳಲ್ಲಿ ನಿರಂತರ ಅಧ್ಯಾತ್ಮಿಕ ಚಿಂತನ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದರು. ಪ್ರವಚನಕುಶಲಿಗಳೂ ಆಗಿದ್ಸು ದ್ವೈತ ವೇದಾಂತ ಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರ ಮಹತ್ವದ ಕೊಂಡಿಯಾಗಿದ್ದರು.
ಶ್ರೀಯುತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರು ಅಭಿಮಾನಿಗಳನ್ನು ಅಗಲಿದ್ದಾರೆ.
ಶ್ರೀಯುತ ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಶ್ರೀ ಪುತ್ತಿಗೆ, ಶ್ರೀ ಪಲಿಮಾರು ಮತ್ತು ಅದಮಾರು ಉಭಯ ಶ್ರೀಗಳು, ಪೇಜಾವರ ಕಾಣಿಯೂರು ಸೋದೆ ಶೀರೂರು ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರ ಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳುಶಿವಳ್ಳಿಬ್ರಾಹಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗ, ಮಾಜಿ ಶಾಸಕ ಕೆ ರಘುಪತಿ ಭಟ್, ಶಾಸಕ ಯಶ್ಪಾಲ್ ಸುವರ್ಣ ಹೀಗೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.