ಮಂಗಳೂರು : ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಭೌಗೋಳಿಕ ಆಕರ್ಷಣೆ, ಅತ್ಯುತ್ತಮ ಬಂದರು ಸಂಪರ್ಕ, ಬಲಿಷ್ಠ ಮೂಲ ಸೌಕರ್ಯ ಹೊಂದಿರುವ ಕಾರಣ ಈ ಭಾಗದಲ್ಲಿ ಸಂಶೋಧನೆ, ಅಭಿವೃದ್ಧಿ (ಆರ್ ಡಿ), ಮಾಹಿತಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಸಾಗರ ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಕರಾವಳಿ ಭಾಗದಲ್ಲಿ ಎನ್ಐಟಿಕೆ, ಮಣಿಪಾಲ್ನಂತಹ ಸಂಸ್ಥೆಗಳು ಮಾನವ ಸಂಪತ್ತನ್ನು ರೂಪಿಸುತ್ತಿದ್ದು, ಆರ್ ಡಿ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಬಹುದು. ತಂತ್ರಜ್ಞಾನ ನಾವೀನ್ಯತೆಯ ಪಾರ್ಕ್ ಸ್ಥಾಪಿಸಬೇಕು. ಜತೆಗೆ ನವ ಮಂಗಳೂರು ಬಂದರಿನ ಅಭಿವೃದ್ಧಿ ಹಾಗೂ ಜಾಗತಿಕ ವ್ಯಾಪಾರ ಮತ್ತು ಉತ್ಪಾದನ ಕೈಗಾರಿಕೆಗಳನ್ನು ಆಕರ್ಷಿಸಲು ಸಮಗ್ರ ಕರಾವಳಿ ಆರ್ಥಿಕ ವಲಯವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಕಡಲತೀರದಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಜೈವಿಕ ತಂತ್ರಜ್ಞಾನಗಳ ಉತ್ತೇಜನಕ್ಕೆ ಕರಾವಳಿಯ ಸಮು ದಾಯಗಳಿಗೆ ದೀರ್ಘಾವಧಿಯ ಉದ್ಯೋಗ ಒದಗಿಸುವುದು, ಸಮುದ್ರ ಸಂಶೋಧನೆ-ಸಾಗರ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದ್ದಾರೆ.