ಉಡುಪಿ : ಕಮಿಷನ್ ವ್ಯವಹಾರದ ಮೀನು ವ್ಯಾಪಾರ ನಡೆಸಿದ ಗ್ರಾಹಕರಿಂದ ಹಣ ಸಂಗ್ರಹಿಸಿ ಸಂಸ್ಥೆಗೆ ಸರಿಯಾಗಿ ನೀಡದೇ ಸುಮಾರು 90ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಅಬ್ದುಲ್ ರೆಹಮಾನ್ ಎನ್ನುವವರು ಶರ್ಫುನ್ನೀಸ ಫಿಶ್ ಅಸೋಸಿಯೇಟ್ಸ್ ಯಾಂತ್ರಿಕ ಭವನ ಹಾರ್ಬರ್ ಮಲ್ಪೆಯಲ್ಲಿ ಹೋಲ್ ಸೇಲ್ ಮೀನು ಮಾರಾಟ ನಡೆಸಿಕೊಂಡಿದ್ದು, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದ ಕಡೆಗಳಿಗೆ ಹೋಲ್ಸೇಲ್ ಮೀನು ಮಾರಾಟ ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ರೆಹಮಾನ್ ಅವರನ್ನು ಸಂಪರ್ಕಿಸಿದ ಪ್ರಶಾಂತ್ ಎಂಬಾತ ಮಾರ್ಕೆಟಿಂಗ್ ಮಾಡುವುದಾಗಿ ಹೇಳಿ ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿದ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುವ ಕೆಲಸ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೆಹಮಾನ್ ಅವರು ವ್ಯವಹಾರವನ್ನು ಪರಿಶೀಲಿಸಿದಾಗ ವ್ಯವಹಾರದಿಂದ ಬಂದ ಹಣವು ಸರಿಯಾಗಿ ಸಂಸ್ಥೆಗೆ ಜಮಾ ಆಗದೇ ಇರುವುದು ಗಮನಕ್ಕೆ ಬಂದಿದೆ. ಸುಮಾರು 90ಲಕ್ಷ ರೂ.ಹಣ ಸಂಸ್ಥೆಗೆ ಜಮಾ ಆಗದೇ ಪ್ರಶಾಂತ್ ಎಂಬಾತ ತನ್ನ ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.