ಮಂಗಳೂರು : ಸ್ವಚ್ಛತೆ ತೋರಿಕೆಗೆ ಸೀಮಿತವಾಗದೆ ನಮ್ಮ ಬದುಕಿನಲ್ಲಿ ಸ್ವಭಾವ ಮತ್ತು ಸಂಸ್ಕಾರವಾದಲ್ಲಿ ಮಾತ್ರ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬಹುದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ದ.ಕ ಜಿಲ್ಲಾಡಳಿತ, ಜಿಪಂ, ಮಂಗಳೂರು ಮನಪಾ ವತಿಯಿಂದ ನಗರದ ತೋಟ ಬೆಂಗರೆಯಲ್ಲಿ ಮಂಗಳವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನ “ಸ್ವಚ್ಛತೆಯೇ ಸೇವೆ-2024” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆಯನ್ನು ಪಾಲಿಸಲು ಅಭಿಯಾನ ನಡೆಸಬೇಕಾಗಿದೆ. ಸ್ವಚ್ಛತೆ ನಮ್ಮ ದೈನಂದಿನ ಭಾಗವಾಗಬೇಕೆ ಹೊರತು ಅಭಿಯಾನ ರೂಪದಲ್ಲಿ ನಡೆಸುವಂತದ್ದಲ್ಲ. ವೈಯಕ್ತಿಕವಾಗಿ ಸ್ವಚ್ಛತೆ ಕಾಪಾಡುವ ನಾಗರಿಕರು ಸಮಾಜಮುಖಿಯಾಗಿ ಚಿಂತಿಸದಿರುವುದು ದುರಂತ ಎಂದು ಸಂಸದರು ಕಳವಳ ವ್ಯಕ್ತಪಡಿಸಿದರು.
ಸೆ.17ರಿಂದ ಅ.2ರವರೆಗೆ ನಡೆಯುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಸಂಸದರು ಹೇಳಿದರು.
ಈ ಸಂದರ್ಭ ಜಿಪಂ ಸಿಇಒ ಡಾ. ಆನಂದ್ ಕೆ, ಮಂಗಳೂರು ಮನಪಾ ಆಯುಕ್ತ ಸಿ.ಎಲ್.ಆನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ರೋಷನ್ ನಾಣಯ್ಯ, ಹಿರಿಯ ಪರಿಸರ ಅಧಿಕಾರಿ ಲಕ್ಷ್ಮಿಕಾಂತ್, ಸುರತ್ಕಲ್ ವಲಯ ಆಯುಕ್ತೆ ವಾಣಿ, ಬೆಂಗರೆ ಮಹಾಜನ ಸಭಾ ಅಧ್ಯಕ್ಷ ಚೇತನ್ ಬೆಂಗ್ರೆ ಉಪಸ್ಥಿತರಿದ್ದರು.