City Development
ಉಡುಪಿ : ಅಂಬಾಗಿಲು ಗುಂಡಿಬೈಲು ಭಾಗದ ಜನರ ಬಸ್ಸಿನ ಸಮಸ್ಯೆ ಪರಿಹಾರಗೊಡಿದೆ.

ಅಂಬಾಗಿಲು ಗುಂಡಿ ಬೈಲ್ನಿಂದ ಉಡುಪಿಗೆ ಹೋಗುವ ಪರವಾನಿಗೆ ಇದ್ದರೂ ಬಸ್ಸುಗಳು ಅಂಬಾಗಿಲು ನಿಟ್ಟೂರು ಬನ್ನಂಜೆಯಿಂದ ಉಡುಪಿಗೆ ಹಾದು ಹೋಗುತ್ತಿದ್ದವು. ಆದ್ದರಿಂದ ಅಂಬಾಗಿಲು ಗುಂಡಿಬೈಲು ಭಾಗದ ಜನರಿಗೆ 15 ವರ್ಷಗಳಿಂದ ಬಸ್ಸಿನ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಗೆ ಈಗ ಮುಕ್ತಿ ಸಿಕ್ಕಿದೆ.
ಇಂದು ಬೆಳಿಗ್ಗೆ ಬಸ್ಸುಗಳನ್ನು ಅಂಬಾಗಿಲು ಜಂಕ್ಷನ್ನಲ್ಲಿ ನಿಲ್ಲಿಸಿ ಬಸ್ಸುಗಳಿಗೆ ನಾಮಫಲಕ ಅಳವಡಿಸಿ ಬಸ್ ಸಿಬ್ಬಂದಿಯೊಂದಿಗೆ ಇನ್ನು ಮುಂದೆ ಗುಂಡಿಬೈಲು ಕಲ್ಸಂಕದಿಂದ ಉಡುಪಿಗೆ ಹಾದು ಹೋಗಬೇಕಾಗಿ ವಿನಂತಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆರ್ಟಿಓ ಅಧಿಕಾರಿಗಳು, ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ ವಾರ್ಡ್ ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಗಳೂರು : ನಗರದ ವಿವಿಧೆಡೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಮಧ್ಯದಲ್ಲಿ ಡಿವೈಡರ್ ಇಲ್ಲದಿರುವ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್, ಟ್ರಾಫಿಕ್ ಕೋನ್ಗಳನ್ನು ತೆರವುಗೊಳಿಸಿ ಮತ್ತೆ ಶಾಶ್ವತ ಡಿವೈಡರ್ಗಳನ್ನು ನಿರ್ಮಿಸಲಾಗುತ್ತಿದೆ.
ನಗರದಲ್ಲಿ 18 ಸ್ಥಳಗಳನ್ನು ಗುರುತಿಸಿ ಪೊಲೀಸ್ ಇಲಾಖೆ ವತಿಯಿಂದ ಮಹಾನಗರ ಪಾಲಿಕೆಗೆ ಪಟ್ಟಿ ನೀಡಲಾಗಿದ್ದು, ಈ ಪೈಕಿ 8 ಸ್ಥಳಗಳಲ್ಲಿ ಈಗಾಗಲೇ ಡಿವೈಡರ್ಗಳನ್ನು ನಿರ್ಮಿಸಲಾಗಿದೆ.
ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವಾಗ ಕೆಲವು ಕಡೆಗಳಲ್ಲಿ ವಾಹನಗಳು ತಿರುವು ಪಡೆಯಲು ಅನುಕೂಲವಾಗುವಂತೆ ಡಿವೈಡರ್ ನಿರ್ಮಿಸದೆ ಹಾಗೇ ಬಿಡಲಾಗಿತ್ತು. ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ, ಅಂತಹ ಸ್ಥಳಗಳಲ್ಲಿ ವಾಹನಗಳು ತಿರುವು ಪಡೆದುಕೊಳ್ಳುವಾದ ದಟ್ಟಣೆ ಉಂಟಾಗುತ್ತದೆ ಎಂದು ಪೊಲೀಸ್ ಇಲಾಖೆ ಬ್ಯಾರಿಕೇಡ್, ಟ್ರಾಫಿಕ್ ಕೋನ್ಗಳನ್ನು ಅಳವಡಿಸಿತ್ತು. ಕೆಲವು ದ್ವಿಚಕ್ರವಾಹನ ಸವಾರರು ಇವುಗಳ ನಡುವೆಯೂ ವಾಹನ ನುಗ್ಗಿಸಿ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತಿರುವುದು ಪಡೆದುಕೊಳ್ಳುವುದು ಅಲ್ಲಲ್ಲಿ ಕಂಡು ಬರುತ್ತಿತ್ತು. ಆದ್ದರಿಂದ ಇಂತಹ ಸ್ಥಳಗಳಲ್ಲಿ ಶಾಶ್ವತ ಡಿವೈಡರ್ಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಸ್ಟೇಟ್ ಬ್ಯಾಂಕ್ ಬಳಿಯ ಹ್ಯಾಮಿಲ್ಟನ್ ವೃತ್ತ ಸಮರ್ಪಕವಾಗಿ ನಿರ್ಮಾಣವಾಗದಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್ಗಳನ್ನು ಇರಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಆ ಸ್ಥಳದಲ್ಲಿ ಮತ್ತೆ ಟ್ರಾಫಿಕ್ ಐಲ್ಯಾಂಡ್ಗಳನ್ನು ನಿರ್ಮಿಸಲು ಕಲ್ಲುಗಳನ್ನು ಇರಿಸಲಾಗಿದೆ. ಕೆ.ಎಸ್. ರಾವ್ ರಸ್ತೆಯ ಶರವು ಕ್ರಾಸ್, ಹೊಟೇಲ್ ಪೂಂಜಾ ಆರ್ಕೇಡ್ ಎದುರು ಬ್ಯಾರಿಕೇಡ್ಗಳನ್ನು ತೆಗೆದು ಡಿವೈಡರ್ ನಿರ್ಮಿಸಲಾಗಿದೆ.
ಲೇಡಿಗೋಶನ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಬ್ಯಾರಿಕೇಡ್ಗಳನ್ನು ಅಳವಡಿಸಿ ಸಿಟಿ ಮತ್ತು ಸರ್ವಿಸ್ ಬಸ್ಗಳನ್ನು ರಸ್ತೆಯ ಎಡಬದಿಯಲ್ಲಿ ಮತ್ತು ಎಕ್ಸ್ಪ್ರೆಸ್ ಹಾಗೂ ಇತರ ವಾಹನಗಳನ್ನು ಬ್ಯಾರಿಕೇಡ್ನ ಬಲಬದಿಯಲ್ಲಿ ಸಂಚರಿಸಲು ಕೆಲವು ತಿಂಗಳುಗಳಿಂದ ವ್ಯವಸ್ಥೆ ಮಾಡಲಾಗಿದೆ. ಹೊಸ ಬದಲಾವಣೆಯಂತೆ ರಾವ್ ಆ್ಯಂಡ್ ರಾವ್ ವೃತ್ತದಿಂದ ಟೌನ್ ಹಾಲ್ ಮುಂಭಾಗದ ವರೆಗೆ ಡಿವೈಡರ್ ನಿರ್ಮಿಸಿ ಎಲ್ಲ ಬಸ್ಗಳು ಡಿವೈಡರ್ನ ಬಲಬದಿಯಿಂದಲೇ ಸಂಚರಿಸುವಂತೆ ಮಾಡಲು ಉದ್ದೇಶಿಸಲಾಗಿದೆ. ಇತರ ವಾಹನಗಳು ಎಡಬದಿಯಲ್ಲಿ ಅವಕಾಶ ನೀಡಲಾಗುತ್ತದೆ.
ಲೇಡಿಗೋಶನ್ ಬಳಿ ಯಾವುದೇ ಬಸ್ಗಳಿಗೆ ನಿಲುಗಡೆ ಇಲ್ಲ. ನಿಲ್ದಾಣದಿಂದ ಹೊರಡುವ ಬಸ್ಗಳಿಗೆ ಹಂಪನಕಟ್ಟೆವರೆಗೆ ಯಾವುದೇ ನಿಲುಗಡೆ ಇರುವುದಿಲ್ಲ. ಸ್ಟೇಟ್ಬ್ಯಾಂಕ್ ಭಾಗದ ಪ್ರಯಾಣಿಕರು ತಂಗುದಾಣಕ್ಕೆ ಬಂದೇ ಬಸ್ಗಳನ್ನು ಹಿಡಿಯಬೇಕು ಎನ್ನುವುದು ಪೊಲೀಸರ ಚಿಂತನೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಅನುಷ್ಠಾನಕ್ಕೆ ಬಂದ ಬಳಿಕವಷ್ಟೇ ತಿಳಿಯಲಿದೆ.
ನಗರದ ವಿವಿಧೆಡೆ ಸುಗಮ ವಾಹನ ಸಂಚಾರ ಉದ್ದೇಶದಿಂದ ಒಂದಷ್ಟು ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಡಿವೈಡರ್ಗಳ ಬದಲಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಮತ್ತೆ ಡಿವೈಡರ್ಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಬದಲಾವಣೆಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದು ಬಿ.ಪಿ. ದಿನೇಶ್ ಕುಮಾರ್, ಡಿಸಿಸಿ, ಅಪರಾಧ, ಸಂಚಾರ ವಿಭಾಗ ತಿಳಿಸಿದ್ದಾರೆ.
ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಕಡೆಗೆ ಸಾಗುವ ರಸ್ತೆಯಲ್ಲಿ ಸೋಮಯಾಜಿ ಬಿಲ್ಡಿಂಗ್ ಎದುರು ಮತ್ತು ಮಹಾರಾಜ ಹೊಟೇಲ್ ಎದುರು ಕೋನ್ಗಳನ್ನು ತೆಗೆದು ಡಿವೈಡರ್ ನಿರ್ಮಾಣ ಮಾಡಲಾಗಿದೆ. ಲೇಡಿಗೋಶನ್ ಆಸ್ಪತ್ರೆ ಎದುರು, ಕರಂಗಲಪಾಡಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಭಾರತ್ ಬೀಡಿ ಜಂಕ್ಷನ್, ಸೈಂಟ್ ಆ್ಯಗ್ನೇಸ್ ಕಾಲೇಜು ಮುಂಭಾಗದಲ್ಲಿ, ಬೆಂದೂರುವೆಲ್ ಜಂಕ್ಷನ್, ಕರಾವಳಿ ಜಂಕ್ಷನ್, ಕಂಕನಾಡಿ ಜಂಕ್ಷನ್ 1 ಮತ್ತು 2ರಲ್ಲಿರುವ ಬ್ಯಾರಿಕೇಡ್ಗಳನ್ನು ತೆರವು ಗೊಳಿಸಿ ಡಿವೈಡರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಪ್ರಾಕೃತಿಕ ವಿಕೋಪ ಹಾನಿ ಕಾಮಗಾರಿಗಳ ಬಗ್ಗೆ ತಕ್ಷಣ ಕ್ರಮ ವಹಿಸಿ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ನಗರಸಭಾ ವ್ಯಾಪ್ತಿಯ ಹಲವೆಡೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ಚರಂಡಿ ವ್ಯವಸ್ಥೆ ಸಹಿತ ವಿವಿಧ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಗಳನ್ನು ನಡೆಸುವಂತೆ ನಗರಸಭೆ ಅಧಿಕಾರಿಗಳಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಉಡುಪಿ ನಗರ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ನಗರದ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಕ್ರಮ ವಹಿಸಿ, ಮುಂಬರುವ ಹಬ್ಬಗಳ ಮೆರವಣಿಗೆ ಸಾಗುವ ರಸ್ತೆ ಬದಿಯ ಕಳೆ ತೆರವು, ಇತ್ತೀಚೆಗೆ ಕೃತಕ ನೆರೆ ಉಂಟಾದ ಪ್ರದೇಶಗಳಲ್ಲಿ ಕಾಲುವೆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಲು ಕ್ರಮ ಹಾಗೂ ಬಾಕಿ ಉಳಿದಿರುವ ಅಪಾಯಕಾರಿ ಮರಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿ ಬುಧವಾರ ನಗರಸಭೆಯಲ್ಲಿ ಹಿರಿಯ ನಾಗರಿಕರ ಭೇಟಿ ಸಮಯ ಮೀಸಲು, ಹಳೆಯ ವಿಶ್ವೇಶ್ವರ ಮಾರುಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ, ಪಾರ್ಕಿಂಗ್ ಸೌಲಭ್ಯದೊಂದಿಗೆ ವ್ಯವಸ್ಥಿತ ನೂತನ ಬಸ್ ನಿಲ್ದಾಣದ ನೀಲ ನಕಾಶೆ ತಯಾರಿಸಲು ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕಾಮಗಾರಿಗಳ ತಕ್ಷಣ ಆರಂಭ, ಸಮರ್ಪಕ ದಾರಿ ದೀಪ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಸಾರ್ವಜನಿಕ ಆಸ್ತಿ ಪಾಸ್ತಿಯ ಸುಮಾರು 25 ಕೋಟಿ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿ, ಉಡುಪಿ ವಿಧಾನ ಸಭಾ ಕ್ಷೇತ್ರದ ಉಡುಪಿ ಮತ್ತು ಬ್ರಹ್ಮಾವರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 55 ಮನೆಗಳು ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿದ್ದು, ಕಂದಾಯ ಇಲಾಖೆಯಿಂದ ಪರಿಹಾರ ಧನವಾಗಿ ಕೇವಲ ರೂ. 10,03,500 ಮಾತ್ರ ಮಂಜೂರುಗೊಂಡಿದ್ದು, ಸರ್ಕಾರ ಕೂಡಲೇ ಪೂರ್ಣ ಹಾನಿಗೀಡಾದ ಮನೆಗಳಿಗೆ 5 ಲಕ್ಷ, ಭಾಗಶಃ ಹಾನಿಯಾದ ಮನೆಗಳಿಗೆ 3 ಲಕ್ಷವನ್ನು ಈ ಹಿಂದಿನಂತೆ ಮಂಜೂರು ಮಾಡುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸುವುದಾಗಿ ಹೇಳಿದರು.
ಸಭೆಯಲ್ಲಿ ನಗರಸಭೆ ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ನಗರಾಭಿವೃದ್ದಿ ಪ್ರಾಧಿಕಾರ ಅರ್ಜಿಗಳ ಬಗ್ಗೆ ಶಾಸಕ ಯಶ್ಪಾಲ್ ಸುವರ್ಣ ಅಹವಾಲು ಸ್ವೀಕಾರ
ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣರವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅರ್ಜಿಗಳ ಬಗ್ಗೆ ಜುಲೈ 20 ಶನಿವಾರ ಪೂರ್ವಾಹ್ನ 11.30 ಕ್ಕೆ ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಸಾರ್ವಜನಿಕರು ಪ್ರಾಧಿಕಾರದಲ್ಲಿ ಬಾಕಿ ಉಳಿದಿರುವ ಅರ್ಜಿಗಳು, ಸಮಸ್ಯೆಗಳ ಬಗ್ಗೆ ಶಾಸಕರಿಗೆ ಅಹವಾಲು ನೀಡಬಹುದಾಗಿದ್ದು, ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.