ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷಗಾನ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾವಂತರು ಯಕ್ಷಗಾನಕ್ಕೆ ಬರಬೇಕು ಎಂಬುದೇ ಇದರ ಉದ್ದೇಶ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಯಕ್ಷಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿರುವುದನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮಕ್ಕಳ ಮೇಳವನ್ನು ಕಟ್ಟಿ ದೇಶವಿದೇಶಗಳಲ್ಲಿ ಯಕ್ಷಗಾನ ಕಂಪನ್ನು ಹರಡಿದ ಶ್ರೀಧರ ಹಂದೆ ಅವರ ಕೊಡುಗೆಯನ್ನು ಯಕ್ಷಲೋಕ ಮರೆಯುವಂತಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇದರ ಸುವರ್ಣ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗoಗಾಧರ ರಾವ್ ಮಾತನಾಡಿ, ಮಕ್ಕಳ ಮೇಳಕ್ಕೆ 50 ವರ್ಷ ತುಂಬಿದ ಈ ಹಿನ್ನೆಲೆಯಲ್ಲಿ ಮೇಳವನ್ನು ಸ್ಥಾಪಿಸಿದ, ಬೆಳವಣಿಗೆಗೆ ಕಾರಣರಾದ ಎಲ್ಲರೂ ಅಭಿನಂದನೀಯರು. ಯಕ್ಷಗಾನ ಕಲಾರಂಗ ಮಕ್ಕಳಿಗೆ ಯಕ್ಷ ಶಿಕ್ಷಣ ಅಲ್ಲದೆ ಸನಿವಾಸ ಶಿಬಿರದ ಮೂಲಕ ಬಣ್ಣಗಾರಿಕೆ, ವೇಷಭೂಷಣ, ರಂಗನಡೆ ಬಗ್ಗೆ ತರಬೇತಿ ಕೂಡಾ ನೀಡಲಿದೆ. ಮಕ್ಕಳಿಗೆ ಬೇಕಾದ ಪಂಚತoತ್ರದoತಹ ಕಥೆಗಳನ್ನು ಯಕ್ಷಗಾನಕ್ಕೆ ತಂದು ಆಡಿಸುವುದು ಒಳ್ಳೆಯ ಸಲಹೆಯಾಗಿದೆ. ಶುದ್ಧ ಯಕ್ಷಗಾನವನ್ನು ಉಳಿಸುವುದು ಹೇಗೆ ? ಗೋಷ್ಠಿಗಳಿಂದ ಮಾತ್ರ ಸಾಧ್ಯವೇ ? ವೃತ್ತಿಮೇಳಗಳ ಕಲಾವಿದರು ಬರುತ್ತಾರಾ ? ಈ ಬಗ್ಗೆ ಹಿರಿಯರಿಂದ ಚಿಂತನೆ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೇಶವ ಬಡಾನಿಡಿಯೂರು ಅವರಿಗೆ ಸುವರ್ಣ ಪರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಗುರು ಗುಂಡ್ಮಿ ಸದಾನಂದ ಐತಾಳ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಯಕ್ಷಗಾನ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು. ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತೃ ಪ್ರೊ.ಶ್ರೀಧರ ಡಿ.ಎಸ್. ಅವರು ಪ್ರಸಂಗ ಸಾಹಿತ್ಯ ಕುರಿತು, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ತರಬೇತಿಯ ಸವಾಲುಗಳು ಕುರಿತು, ರಂಗಕರ್ಮಿ ಅಭಿಲಾಶ್ ಎಸ್. ಅವರು ರಂಗ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು.
ಲಯನ್ಸ್ ಮಾಜಿ ಗವರ್ನರ್ ಸುರೇಶ್ ಪ್ರಭು, ಕಲಾ ಪೋಷಕರಾದ ಭುವನಪ್ರಸಾದ್ ಹೆಗ್ಡೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ ಕೆ., ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ಉಪಸ್ಥಿತರಿದ್ದರು.