ಉಳ್ಳಾಲ : ‘ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ’ದ ಎರಡನೇ ಸಮ್ಮಿಲನವು ಉಳ್ಳಾಲದ ಮದನಿ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಒರ್ಮೆಪ್ಪಾಡ್- 2 ಎಂಬ ಹೆಸರಲ್ಲಿ ನಡೆದ ಸಮ್ಮಿಲನದಲ್ಲಿ ಬ್ಯಾರಿ ಬರಹಗಾರ್ತಿಯರು ಒಟ್ಟು ಸೇರಿ ಸಾಹಿತ್ಯ, ಆಟ ಕೂಟ, ತಮಾಷೆ ಎಂಬ ಪರಿಕಲ್ಪನೆಯಲ್ಲಿ ಸಂಗಮಿಸಿದರು.
ಹಿರಿಯ ಲೇಖಕಿ ಝುಲೇಖ ಮುಮ್ತಾಜ್ ಪವಿತ್ರ ಖುರ್ಆನ್ ಪಠಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಆರಂಭಿಸಿದರು. ಶಮೀಮಾ ಕುತ್ತಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಮದನಿ ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷೆ ಝೊಹರಾ ಇಬ್ರಾಹಿಂ ಖಾಸಿಂ ಹಸೀನ ಮಲ್ನಾಡ್ರ ‘ಹನಿಗಡಲು’ ಹನಿಗವನ ಸಂಕಲನವನ್ನು ಬಿಡುಗಡೆ ಮಾಡಿದರು. ಕವಯತ್ರಿ ಮಿಸ್ರಿಯಾ ಐ ಪಜೀರ್ ಕೃತಿ ವಿಮರ್ಶೆ ನಡೆಸಿದರು.
‘ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ’ದ ಸದಸ್ಯೆಯರಿಗಾಗಿ ನಡೆಸಲಾಗಿದ್ದ ಅನುವಾದ ಸ್ಪರ್ಧೆಯಲ್ಲಿ ವಿಜೇತರಾದ ಮಿಸ್ರಿಯಾ ದೇರಳಕಟ್ಟೆ, ಮಿಸ್ರಿಯಾ ಐ ಪಜೀರ್ ಮತ್ತು ಶಾಕಿರಾ.ಯು.ಕೆ.ಯವರಿಗೆ ಝರೀನಾ.ಸಿ.ಕೆ ಬಹುಮಾನ ವಿತರಿಸಿದರು.
ಒರ್ಮೆಪ್ಪಾಡ್- 2 ಕಾರ್ಯಕ್ರಮಕ್ಕಾಗಿ ರೈಹಾನ್ ವಿ.ಕೆ ರಚಿಸಿದ ಹಾಡನ್ನು ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ಹಫ್ಸಾ ಬಾನು, ಬೆಂಗಳೂರು ಬಿಡುಗಡೆ ಮಾಡಿದರು. ಬಳಗದ ಸಂಚಾಲಕಿ ಆಯಿಶಾ ಯು.ಕೆ ಯವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು.
ಬಳಗದ ಸದಸ್ಯೆಯರ ಬಹುಭಾಷಾ ಕವಿಗೋಷ್ಟಿ ನಡೆಯಿತು. ಕವಿಗೋಷ್ಟಿಯಲ್ಲಿ ರೈಹಾನ ವಿ.ಕೆ, ರಹ್ಮತ್ ಪುತ್ತೂರು, ಫೌಝಿಯಾ ಹರ್ಶದ್, ನಸೀಮಾ ಸಿದ್ದಕಟ್ಟೆ, ಸಾರಾ ಅಲಿ ಪರ್ಲಡ್ಕ, ರಮೀಝ ಯಂ.ಬಿ, ಸಲ್ಮಾ ಮಂಗಳೂರು, ಶಾಹಿದ ಮಂಗಳೂರು, ಶಮೀಮ ಗುರುಪುರ, ಮುಝಾಹಿದ ಕಣ್ಣೂರು ಹಾಗೂ ಸಾರ ಮಸ್ಕುರುನ್ನಿಸ ಕವನಗಳನ್ನು ವಾಚಿಸಿದರು. ಹಫ್ಸಾ ಬಾನು ಬೆಂಗಳೂರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹಸೀನಾ ಮಲ್ನಾಡ್ ಕವಿಗೋಷ್ಟಿಯನ್ನು ನಿರೂಪಿಸಿದರು.
ಸದಸ್ಯೆಯರಿಗೆ ಹಾಗೂ ಮಕ್ಕಳಿಗೆ ಮನೋರಂಜನಾತ್ಮಕ ಸ್ಪರ್ಧೆಗಳನ್ನು ಮುನೀರ ತೊಕ್ಕೊಟ್ಟು, ಶಮೀಮ ಗುರುಪುರ ಹಾಗೂ ಡಾ.ಜುವೈರಿಯತುಲ್ ಮುಫೀದ ನಡೆಸಿ ಕೊಟ್ಟರು. ಕಲಂದರ್ ಬೀವಿ ಕಾರ್ಯಕ್ರಮವನ್ನು ನಿರೂಪಿಸಿದರು.