ಉಡುಪಿ : ಉಡುಪಿ ಜಿಲ್ಲೆಯಲ್ಲಿ 156 ಬಿಎಸ್ಎನ್ಎಲ್ ಟವರ್ಗಳಿದ್ದು ನೆಟ್ವರ್ಕ್ ಪ್ರಮಾಣ ವಿಪರೀತ ಕಡಿಮೆಯಾದ ಕಾರಣ ಲಕ್ಷಾಂತರ ಗ್ರಾಹಕರು ಬಿಎಸ್ಎನ್ಎಲ್ನಿಂದ ಖಾಸಗಿ ಸಂಸ್ಥೆಯ ಸಿಮ್ಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಇದರಿಂದಾಗಿ ಬಿಎಸ್ಎನ್ಎಲ್ನ ಗೌರವ ಕಡಿಮೆಯಾಗುವುದಲ್ಲದೆ ದೇಶೀಯ ಮೊಬೈಲ್ ಸಂಸ್ಥೆಯೊಂದು ಖಾಸಗಿ ಸಂಸ್ಥೆಗಳಿಗೆ ಮೊರೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ನೆಟ್ವರ್ಕ್ ಪ್ರಮಾಣವನ್ನು ಹೆಚ್ಚು ಗೊಳಿಸುವುದು ಮತ್ತು ಯಾವ ಟವರ್ನಲ್ಲಿ ವಿದ್ಯುತ್ ಇಲ್ಲದಿದ್ದಾಗ ಮೊಬೈಲ್ ಸಂಪರ್ಕ ಕಡಿತವಾಗುತ್ತದೆ ಅಲ್ಲಿ ಬ್ಯಾಟರಿ ಅಳವಡಿಕೆ ಮಾಡುವುದು. ಯಾವ ಗ್ರಾಮದಲ್ಲಿ ಬಿಎಸ್ಎನ್ಎಲ್ಗೆ ಸಿಬ್ಬಂದಿಗಳ ಕೊರತೆ ಇದೆಯೋ ಅಲ್ಲಿ ವೆಚ್ಚವನ್ನು ಭರಿಸುವ ಭರವಸೆಯೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗೆ ನಿರ್ವಹಣೆ ಬಗ್ಗೆ ಜವಾಬ್ದಾರಿ ನೀಡುವ ಬಗ್ಗೆ ಪರಿಶೀಲಿಸಿ ಎಂದು ಸಂಸದ ಕೋಟ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಟವರ್ ನಿರ್ಮಾಣಕ್ಕೆ ಉದ್ದೇಶಿತ 41 ಟವರ್ಗಳ ಪೈಕಿ ನಾಲ್ಕು ಟವರ್ಗಳನ್ನು ನಿರ್ಮಿಸಲು ನಿವೇಶನವನ್ನು ಮುಂದಿನ ನಾಲ್ಕು ದಿವಸದಲ್ಲಿ ಒದಗಿಸುವುದಾಗಿ ಕುಂದಾಪುರದ ತಹಶಿಲ್ದಾರ್ ಶೋಭಾ ಹಾಗೂ ಬೈಂದೂರು ತಹಶೀಲ್ದಾರ್ ಪ್ರತಿಭಾ ಭರವಸೆ ನೀಡಿದರು. ಬಿಎಸ್ಎನ್ಎಲ್ನ ಬಹುಮಹಡಿ ಕಟ್ಟಡ ಉಪಯೋಗವಿಲ್ಲದೆ ಉಳಿದಿದ್ದು ಅದನ್ನು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳ ಬಳಕೆಗೆ ನೀಡುವಂತೆ ಕೋಟ ಸಲಹೆ ನೀಡಿದರು. ಸದ್ಯದಲ್ಲೇ ಬೆಂಗಳೂರಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸೇರಿದಂತೆ ಸಭೆ ನಡೆಸಲಾಗುವುದೆಂದು ಸಂಸದರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ವಿದ್ಯಾ ಕುಮಾರಿ, ತಹಶಿಲ್ದಾರರು ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.