ಉಡುಪಿ : ಜಿಲ್ಲೆಯಲ್ಲಿ ರೇಶನ್ ಕಾರ್ಡ್ಗಳನ್ನು ರದ್ದು ಮಾಡಲು ರೇಶನ್ ಅಂಗಡಿಗಳ ಮುಂದೆ ನೋಟೀಸು ಹಾಕಿರುವುದಾಗಿ ಜನರಿಂದ ದೂರು ಬಂದಿದ್ದು, ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಕೂಡಲೇ ನಿಜ ಸಂಗತಿಯನ್ನು ಜನರಿಗೆ ವಿವರಿಸಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬಡ ಮತ್ತು ಕೆಳ ಮಧ್ಯಮ ವರ್ಗದ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿದ್ದೇ ಆದಲ್ಲಿ ಸಿಪಿಐಎಂ, ಇತರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸುವುದು ಅನಿವಾರ್ಯ ಆಗುತ್ತದೆ. 1.20ಲಕ್ಷ ರೂ. ಆದಾಯದ ಅರ್ಹತೆ ತೀರಾ ಹಿಂದೆ ನಿಗದಿಯಾಗಿದ್ದು ಈಗ ಅದನ್ನು ಹೆಚ್ಚಿಸುವ ಅಗತ್ಯ ಇದೆ.
ಕೆಲವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ಆದಾಯ ಹೆಚ್ಚು ತೋರಿಸುತ್ತಾರೆ. ಅದನ್ನು ಬಿಪಿಎಲ್ ಕಾರ್ಡ್ ವಿತರಣೆಗೆ ಪರಿಗಣಿಸಬಾರದು. ಯಾವುದೇ ಕಾರಣಕ್ಕೂ ಅರ್ಹ ಜನರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಬಾರದು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
			        


 
			         
                        
 
                        