Blessings
ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ನಟ ದುನಿಯಾ ವಿಜಯ್ ಭೇಟಿ; ಮಗಳಿಗಾಗಿ ಚಿತ್ರ ತೆಗೆಯುತ್ತಿದ್ದೇನೆ ಅಂದ ನಟ
ಉಳ್ಳಾಲ : ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಚಿತ್ರ ತೆಗೀತಾ ಇದ್ದೇನೆ, ಸಿಟಿ ಲೈಫ್ಸ್ ಅನ್ನುವ ಶೀರ್ಷಿಕೆಯಡಿ ನಡೆಸುವ ಚಿತ್ರವನ್ನು ತಾನೇ ನಿರ್ದೇಶಿಸಲಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು.
ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ರಾತ್ರಿ ಸಂದರ್ಶನಗೈದು ಮಾತನಾಡಿದರು.
ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ. ತಾನು ನಟಿಸುತ್ತಿರುವ 29ನೇ ಚಿತ್ರ, ಕಾಟೇರಾ ದ ಜಡೇಶ್ ಅವರು ನಿರ್ದೇಶಿಸುತ್ತಿದ್ದು, ಇನ್ನೂ ಚಿತ್ರದ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿದೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಮಂಗಳೂರು ಭೇಟಿ ನೀಡಿದ್ದು, ಕೊರಗಜ್ಜನ ಬಗ್ಗೆ ದಿನಾ ಕೇಳುತ್ತಲೇ ಇದ್ದೇನೆ. ಹಾಗಾಗಿ ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ತನ್ನ ಭೀಮ ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಇಟ್ಟು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಸಿನೆಮಾದ ಗೌರವ ಉಳಿಸಿದ್ದಾರೆ ಎಂದರು.
ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು. ಕದ್ರಿ ಈವೆಂಟ್ಸ್ನ ಸಂಚಾಲಕರಾದ ಜಗದೀಶ್ ಕದ್ರಿ, ದುನಿಯಾ ವಿಜಯ್ ಜತೆಯಲ್ಲಿದ್ದರು.
ಬುರ್ದುಗೋಳಿ ಕ್ಷೇತ್ರದ ಆಡಳಿತ ಸಮಿತಿಯ ಪುರುಷೋತ್ತಮ ಮೇಲಾಂಟ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಸಂಜಯ್, ಯೋಗಿಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು, ವನಿತ ಗಿರೀಶ್, ಗುರು ಪ್ರಸಾದ್ ಕೊಟ್ಟಾರಿ, ಪ್ರವೀಣ್ ಕೊಲ್ಯ, ಸದಾನಂದ , ರೇಣುಕ ಮೊದಲಾದವರು ಉಪಸ್ಥಿತರಿದ್ದರು.


ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಗತಕಾಲದ ಕ್ಷೇತ್ರ ಇತಿಹಾಸ ತಿಳಿಸುವಂತೆ ನಾಟ್ಯರಾಣಿ ಗಂಧರ್ವ ಕನ್ಯೆ ದೇವಿಯಿಂದ ಅನುಗ್ರಹಿತಳಾದ ತಾಣದಲ್ಲಿ ಕಲಾವಿದರಿಗೆ ವಿಶೇಷವಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನಲೆಯಲ್ಲಿ ಅನೇಕ ಕಲಾವಿದರು ತಮ್ಮ ಕಲಾ ಕಾಣಿಕೆಯನ್ನು ಪರ್ವಕಾಲದಲ್ಲಿ ಸಮರ್ಪಿಸಿ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಹಾಗಾಗಿ ಕ್ಷೇತ್ರ ಸಾಂಸ್ಕೃತಿಕ ವೈಭವವನ್ನು ಪಡೆದುಕೊಂಡಿದೆ.
ಗಾನ-ನಾಟ್ಯ-ನಾದ ಪ್ರಿಯಳೆಂದು ಪ್ರಖ್ಯಾತಿ ಹೊಂದಿರುವ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯಾರ್ಥಿಗಳು ತಮ್ಮ ನೃತ್ಯ ಸೇವೆಯನ್ನ ಸಮರ್ಪಿಸಿ ಕೃತಾರ್ಥರಾಗುತ್ತಿದ್ದಾರೆ.
ನಾದ ವಾದಕರು ನಾದ ಸೇವೆಯನ್ನು ನೀಡಿ, ಗಾಯಕರು ತಮ್ಮ ಗಾಯನ ಸೇವೆಯನ್ನು ನೀಡಿ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳುವುದು ಉಲ್ಲೇಖನೀಯ.
ಸೇವೆ ನೀಡಿದ ಕಲಾವಿದರನ್ನು ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸುತ್ತಿದ್ದಾರೆ.
ಕ್ಷೇತ್ರ ರಚನೆಗೆ ಕಾರಣೀಭೂತರಾದ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿಯೂ ಕೂಡ ಕಲಾವಿದರು ತಮ್ಮ ಕಲಾ ಸೇವೆಯನ್ನು ಸಮರ್ಪಿಸಿ ಗುರುಗಳ ಅನುಗ್ರಹಕ್ಕೂ ಪಾತ್ರರಾಗುತ್ತಿದ್ದಾರೆ ಇದು ಈ ಬಾರಿಯ ನವರಾತ್ರಿಯ ವಿಶೇಷ ಎನ್ನುತ್ತಾರೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್.
ಕ್ಷೇತ್ರದಲ್ಲಿ ಪ್ರಾತಃಕಾಲದಿಂದಲೇ ಭಜನೆ ಸಂಕೀರ್ತನೆ ಲಕ್ಷ್ಮೀಶೋಭಾನೆ ಲಲಿತಾ ಸಹಸ್ರನಾಮ ಸುಗಮ ಸಂಗೀತ ನಿರಂತರವಾಗಿ ಕ್ಷೇತ್ರಕ್ಕೆ ಸಮರ್ಪಿತವಾಗುತ್ತಿವೆ.
ಷಷ್ಠಿ ತಿಥಿಯಿಂದ ಅಕ್ಷರಭ್ಯಾಸಕ್ಕೆ ಚಾಲನೆ
ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರುವ ಶ್ರೀ ಕ್ಷೇತ್ರದಲ್ಲಿ ತಾರೀಕು 9ರ ಬುಧವಾರ ಷಷ್ಟಿ ತಿಥಿಯಿಂದ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಚಾಲನೆ ದೊರೆಕಲಿದೆ. ಅಂದು ಬೆಳಿಗ್ಗೆ 11:00 ಯಿಂದ ಅಕ್ಷರಭ್ಯಾಸ ಆರಂಭವಾಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ


ಹೆಬ್ರಿ : ವಿಪ್ರ ಬಾಂಧವರಿಂದ ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಉಡುಪಿ ಶ್ರೀ ಕೃಷ್ಣಮಠಕ್ಕೆ 14ನೇ ಪಾದಯಾತ್ರೆ ಸೆಪ್ಟೆಂಬರ್ 22ರಂದು ಭಾನುವಾರ ನಡೆಯಿತು.

ಧರ್ಮ ಜಾಗೃತಿ, ದೇವರ ಅನುಗ್ರಹ, ಧರ್ಮ ಜಾಗೃತಿ ಮತ್ತು ಲೋಕಕ್ಕೆ ಸುಭಿಕ್ಷೆಯಾಗಲಿ ಎನ್ನುವ ಸದುದ್ದೇಶದಿಂದ
ಪಾದಯಾತ್ರೆಯ ಹಾದಿಯಲ್ಲಿ ದೇವರ ನಾಮಾವಳಿ, ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುತ್ತ ಭಕ್ತರು ತೆರಳಿದರು. ಪಾಡಿಗಾರ ವಡ್ಡಮೇಶ್ವರ ಮಠದ ಬೆಣ್ಣೆ ಕೃಷ್ಣ ದೇವರ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವರ ದರ್ಶನ ಮಾಡಿ ಹಿರಿಯಡ್ಕ ಪುತ್ತಿಗೆ ಮಠಕ್ಕೆ ತೆರಳಿ ಸುವರ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡಿ ಶ್ರೀ ವಿಠಲ ದೇವರ ದರ್ಶನ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಲ್ಲಿಂದ ಉಡುಪಿಗೆ ತೆರಳಿ ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣ ದೇವರ ದರ್ಶನ ಮಾಡಿ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಸ್ನಾನ ಮಾಡಿ ಪಾದಯಾತ್ರೆ ಸಮಾಪ್ತಿಗೊಳಿಸಿದರು. ಅನಂತರ ಶ್ರೀ ಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಸುದರ್ಶನ್ ಜೋಯಿಸ್ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುಬ್ರಮಣ್ಯ ಆಚಾರ್ಯ ಹೆಬ್ರಿ, ನಿತ್ಯಾನಂದ ಭಟ್ ಹೆಬ್ರಿ, ವೆಂಕಟರಮಣ ಕಲ್ಕೂರ್ ಉಪ್ಪಳ, ಗಿರೀಶ್ ಶಿವಪುರ, ರಾಘವೇಂದ್ರ ಭಟ್ ಉಪ್ಪಳ, ರಾಮಚಂದ್ರ ಭಟ್ ವರಂಗ, ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ್ ಭಟ್ ಮುದ್ರಾಡಿ, ಶಂಕರ್ ಭಟ್ ಹೆರ್ಮುಂಡೆ, ಶ್ರೀಕಾಂತ್ ಓಕುಡ ಕನ್ಯಾನ, ಗಣೇಶ್ ಉಳಿತಾಯ ಉಪ್ಪಳ, ಕೃಷ್ಣ ಉಳಿತಾಯ ಉಪ್ಪಳ, ವೀಣಾ ಭಟ್ ವರಂಗ, ರಮ್ಯಾ ಭಟ್ ಬಲ್ಲಾಡಿ, ಪ್ರಶಾಂತ್ ಭಟ್ ದೊಡ್ಡಬಳ್ಳಾಪುರ, ಶ್ವೇತಾ ಭಟ್ ದೊಡ್ಡಬಳ್ಳಾಪುರ, ಪ್ರಕಾಶ್ ಭಟ್ ಹೆಬ್ರಿ, ಶ್ರೀನಿವಾಸ ಭಟ್ ಎಣ್ಣೆಹೊಳೆ, ಶಿಶಿರ ಜೋಯಿಸ್ ಹೆಬ್ರಿ, ಜಾನಕಿ ಭಟ್ ಗಿಲ್ಲಾಳಿ, ರಾಘವೇಂದ್ರ ಕಲ್ಕೂರ್ ಉಪ್ಪಳ , ವಸುಪ್ರದಾ ಆಚಾರ್ಯ, ಬೆಂಗಳೂರು, ಶ್ರೀಶ ಭಟ್ ಬಲ್ಲಾಡಿ ಪಾಲ್ಗೊಂಡರು.
ಮಣ್ಣಿನ ಪ್ರತಿಕೃತಿ ಹರಕೆಯ ಪ್ರಸಿದ್ಧ ಕ್ಷೇತ್ರ ಸುರ್ಯ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಹಿತ ಭೇಟಿ
ಬೆಳ್ತಂಗಡಿ : ಮಣ್ಣಿನ ಪ್ರತಿಕೃತಿ ಹರಕೆಗೆ ಪ್ರಸಿದ್ಧವೆನಿಸಿರುವ ಕರಾವಳಿಯ ಪುಣ್ಯಕ್ಷೇತ್ರ ಸುರ್ಯ ಶ್ರೀಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಕುಟುಂಬ ಸಹಿತ ಭೇಟಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ನಡ ಗ್ರಾಮದ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಯಶ್ ಅವರು ಪತ್ನಿ ನಟಿ ರಾಧಿಕಾ ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದಾರೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾ ನಿರ್ದೇಶಕ ವೆಂಕಟ್ ಜೊತೆಯಲ್ಲಿದ್ದರು. ಬಳಿಕ ಶ್ರೀ ಸದಾಶಿವ ರುದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್ ಕುಟುಂಬ ಸಿನಿಮಾದ ಯಶಸ್ಸಿಗೆ ಫಿಲ್ಮ್ ರೀಲ್ನ ಮಣ್ಣಿನ ಪ್ರತಿಕೃತಿ ಮತ್ತು ಆರೋಗ್ಯ ಸಮಸ್ಯೆಗೆ ಕುಟುಂಬದ ಮಣ್ಣಿನ ಪ್ರತಿಕೃತಿ ಹರಕೆ ತೀರಿಸಿದರು.
ಶ್ರೀ ಸದಾಶಿವ ರುದ್ರ ದೇವಾಲಯದಲ್ಲಿ ಮಣ್ಣಿನ ಹರಕೆಯೇ ವಿಶೇಷ. ಭಕ್ತರು ಸಂಕಲ್ಪಿಸಿರುವ ಬಯಕೆ ಈಡೇರಿದ್ದಲ್ಲಿ ಅದೇ ರೀತಿಯ ಮಣ್ಣಿನ ಪ್ರತಿಕೃತಿಯನ್ನು ಇಲ್ಲಿ ಹರಕೆಯಾಗಿ ಅರ್ಪಿಸಲಾಗುತ್ತದೆ. ಆದ್ದರಿಂದ ಯಶ್ ತಮ್ಮ ಮುಂದಿನ ಸಿನಿಮಾ ಯಶಸ್ಸಿಗೆ ಸಿನಿಮಾ ರೀಲ್ನ ಮಣ್ಣಿನ ಪ್ರತಿಕೃತಿ, ಆರೋಗ್ಯ ಸಮಸ್ಯೆ ನಿವಾರಣೆಗೆ ಕುಟುಂಬದ ಪ್ರತಿಕೃತಿಯನ್ನು ಅರ್ಪಿಸಿದರು ಎನ್ನಲಾಗುತ್ತಿದೆ.
ಹೊಸಲುಕ್ನಲ್ಲಿ ಮಿಂಚುತ್ತಿರುವ ನಟ ಯಶ್ ಕ್ರೀಂ ಕಲರ್ ಪಂಚೆ ಹಾಗೂ ಶರ್ಟ್ ಧರಿಸಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ನಟ ಯಶ್ರನ್ನು ಕಾಣುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಯಶ್ ಕುಟುಂಬ ಸಹಿತ ಭೇಟಿ ನೀಡಲಿದ್ದಾರೆ.
ಮಂಗಳೂರು : ನಾಲ್ಕು ವರ್ಷಗಳ ಬಳಿಕ ಕರಾವಳಿಯ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಯು ಮಂಗಳವಾರ ರಾತ್ರಿ ಸಂಗಮವಾಗಿದೆ.
ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪವಿತ್ರ ನದಿಗಳು ಸಂಗಮವಾಯಿತು. ನದಿಗಳೆರಡರ ಸಂಗಮವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತ ಸಂದೋಹ ಕಾದು ಕುಳಿತಿತ್ತು. ರಾತ್ರಿಯಾಗುತ್ತಿದ್ದಂತೆ ಎರಡೂ ನದಿಗಳು ಅಪಾಯದ ಮಟ್ಟ ಮೀರಿ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರವೇಶಿಸಿತು. ಎರಡೂ ನದಿಗಳು ಸಂಗಮವಾಗುತ್ತಿದ್ದಂತೆ ಜನರಲ್ಲಿ ಭಕ್ತಿಯ ಹರ್ಷೋದ್ಘಾರ ಮುಗಿಲು ಮುಟ್ಟಿತು.
ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿಗಳು ಸಂಗಮವಾಗುತ್ತಿದ್ದಂತೆ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಧ್ವಜಸ್ತಂಭದ ಬಳಿ ವಿಶೇಷ ಪೂಜೆ ನಡೆಯಿತು. ಈ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಬಾಗಿನ ಅರ್ಪಿಸಿದರು. ಈ ವೇಳೆ ಪೂಜೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಎಸಿ ಜುಬಿನ್ ಮೊಹಪತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಭಾಗಿಯಾದರು.
ಉಡುಪಿ : ಪರ್ಯಾಯ ಪೀಠಾಧೀಶ ಸುಗುಣೇಂದ್ರ ತೀರ್ಥರು ತಮ್ಮ ಐತಿಹಾಸಿಕ 4ನೇ ಅವಧಿಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮುಂಬರುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಆಗಸ್ಟ್ 1ರಿಂದ 24ರ ವರೆಗೆ ಅದ್ಧೂರಿಯಾಗಿ ಆಯೋಜಿಸಲು ಯೋಜಿಸಿದ್ದಾರೆ.
ಆ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ, “ಮಾಸೋತ್ಸವ”ದ ಸೌಹಾರ್ದಯುತ ಆಹ್ವಾನವನ್ನು ಕರ್ನಾಟಕದ ರಾಜ್ಯಪಾಲ ಘನತೆವೆತ್ತ ತಾವರಚಂದ್ ಗೆಹ್ಲೋಟ್ ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ನೀಡಿ ಉಡುಪಿಗೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಅವರಿಗೆ ಸ್ವಾಮಿಗಳ ಶ್ರೀ ಕೃಷ್ಣ ಪ್ರಸಾದ ಮತ್ತು ಅನುಗ್ರಹ ಮಂತ್ರಾಕ್ಷತೆ ನೀಡಲಾಯಿತು.
ಮಂಗಳೂರು : ಬಾಲಿವುಡ್ ನಿರ್ದೇಶಕಿ ಕಮ್ ನಿರ್ಮಾಪಕಿ ಏಕ್ತಾ ಕಪೂರ್ ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕುಟುಂಬದ ಜೊತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಏಕ್ತಾ ಕಪೂರ್, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೆಲ ಸಮಯ ದೇವಸ್ಥಾನದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಅವರಿಗೆ ದೇವರ ವಿಶೇಷ ವಸ್ತ್ರ ನೀಡಿ ಗೌರವಿದ್ದಾರೆ.
ಬಳಿಕ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಏಕ್ತಾ ಕಪೂರ್ ಕುಟುಂಬ ಭೇಟಿ ಕೊಟ್ಟಿದ್ದಾರೆ.
ಏಕ್ತ ಕಪೂರ್ ಹಿಂದಿ ಸಿನಿಮಾರಂಗದಲ್ಲಿ ಸೀರಿಯಲ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಏಕ್ ವಿಲನ್, ಬಿಗ್ ಬಿ ಮತ್ತು ರಶ್ಮಿಕಾ ನಟನೆಯ ‘ಗುಡ್ ಬೈ’ ಸಿನಿಮಾ, ಯೂ ಟರ್ನ್ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ, ಪರೀಕ ಸಂಸ್ಥೆಗೆ ಒಳಪಟ್ಟ ಶ್ರೀ ಶ್ರೀನಿವಾಸ ದೇವರ ಒಂದು ಎಕರೆ ಗದ್ದೆಯನ್ನು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ನಿರಂತರ ಹತ್ತನೇ ವರ್ಷದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು 85 ಸಿಬ್ಬಂದಿಗಳು ಕೂಡಿಕೊಂಡು ತಾವೇ ಬೆಳೆಸಿದ ನೇಜಿ ನಾಟಿ ಮಾಡಿ ಎಲ್ಲರಿಗೂ ಮಾದರಿಯಾದರು.
ನಿರಂತರ ಒಂದು ತಿಂಗಳಿನಿಂದ ಇದಕ್ಕಾಗಿ ತಯಾರಿ ನಡೆಸಿ ಈ ದಿನ ದೇವಸ್ಥಾನದ ಅರ್ಚಕರು ಶ್ರೀನಿವಾಸ ದೇವರ ತೀರ್ಥ ಪ್ರಸಾದವನ್ನು ಶಾಸ್ತ್ರದಂತೆ ಗದ್ದೆಗೆ ಪ್ರೋಕ್ಷಣೆ ಮಾಡುವ ಮೂಲಕ ಚಾಲನೆಗೊಳಿಸಿದರು. ಸರಿ ಸುಮಾರು ಎರಡೂವರೆ ಘಂಟೆಯಲ್ಲಿ ಒಂದು ಎಕರೆ ಜಮೀನನ್ನು ನಾಟಿ ಮಾಡಿದ ಸಿಬ್ಬಂದಿಗಳು ಕೊನೆಯಲ್ಲಿ ಸ್ವಲ್ಪ ಹೊತ್ತು ಹಗ್ಗ ಜಗ್ಗಾಟವನ್ನೂ ನಡೆಸಿ ಸಂಭ್ರಮಿಸಿದರು. ಇದರಿಂದ ಬರುವ ಭತ್ತವನ್ನು ಬಳಸಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.
ಪ್ರತೀ ಬಾರಿಯ ಈ ಕೃಷಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಉಡುಪಿಯ ಖ್ಯಾತ ಕಂಟ್ರಾಕ್ಟರ್ ನಂದಕುಮಾರ್ರವರ ವತಿಯಿಂದ ಮಾಡಲಾಗಿತ್ತು.
ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.