ಮಂಗಳೂರು : ಬಿಜೆಪಿ ಯುವ ಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ತಲಾಶ್ಗಾಗಿ ಎನ್ಐಎ ತಂಡ ಮತ್ತೆ ದ.ಕ.ಜಿಲ್ಲೆಗೆ ಆಗಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಿವಾಸಿ ನೌಶಾದ್, ಸುಳ್ಯದ ಬೆಳ್ಳಾರೆಯ ಸಿದ್ದೀಕ್ ಹಾಗೂ ಕೆಯ್ಯೂರಿನ ಉಮ್ಮರ್ ಎಂಬವರ ನಿವಾಸಗಳಿಗೆ ದಾಳಿ ನಡೆಸಿದ ಎನ್ಐಎ ತಂಡ ಆರೋಪಿಗಳಿಗಾಗಿ ತಲಾಶ್ ನಡೆಸಿದೆ. ಬೆಂಗಳೂರಿನಿಂದ ಆಗಮಿಸಿದ ಐವರು ಅಧಿಕಾರಿಗಳಿದ್ದ ಎನ್ಐಎ ತಂಡಕ್ಕೆ ಬೆಳ್ತಂಗಡಿ ಹಾಗೂ ಸುಳ್ಯ ಪೊಲೀಸರು ಸಾಥ್ ನೀಡಿದ್ದಾರೆ.
ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದಡ್ಕಕ್ಕೆ ಆಗಮಿಸಿದ ಎನ್ಐಎ ತಂಡ ನೌಷಾದ್ಗಾಗಿ ಹುಡುಕಾಟ ನಡೆಸಿದೆ. ಬುಧವಾರ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಹೋಗಿದ್ದಾನೆ ಎಂಬ ಮಾಹಿತಿ ಸ್ಥಳೀಯರಿಂದ ದೊರೆತಿದೆ.
ಬೆಳ್ತಂಗಡಿಗೆ ಎನ್ಐಎ ದಾಳಿ ನಡೆಸಲಿದೆ ಎಂಬ ವಿಚಾರ ತಿಳಿಯುತ್ತಲೇ ನೌಷದ್ ತಾಯಿ ಹಾಗೂ ಪತ್ನಿ ಮಕ್ಕಳೊಂದಿಗೆ ಪರಾರಿಯಾಗಿದ್ದರು. ಆದರೆ ಮೊಬೈಲ್ ಲೋಕೆಷನ್ ಆಧಾರದಲ್ಲಿ ಅವರನ್ನು ಪತ್ತೆ ಹಚ್ಚಿದ ಎನ್ಐಎ ಅಧಿಕಾರಿಗಳು ನೌಷಾದ್ ಮನೆಗೆ ಕರೆದುಕೊಂಡು ಬಂದು ಬೀಗ ತೆಗೆಸಿ ವಿಡಿಯೋ ಚಿತ್ರೀಕರಿಸಿ ಪರಿಶೀಲನೆ ನಡೆಸಿದೆ.
ಈ ವೇಳೆ ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಸಿದ್ದೀಕ್, ಕೆಯ್ಯೂರಿನ ಉಮ್ಮರ್ ಎಂಬವರ ಮನೆಗೂ ಎನ್ಐಎ ದಾಳಿ ನಡೆದಿದೆ. ಉಮ್ಮರ್ ಎಂಬಾತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿ ಅಬೂಬಕ್ಕರ್ ಸಿದ್ಧೀಕ್ ಪತ್ನಿಯ ಸಹೋದರ. ಈತ ಶಿವಮೊಗ್ಗದ ಮಸೀದಿಯೊಂದರ ಧರ್ಮಗುರು. ಪ್ರವೀಣ್ ಹತ್ಯೆ ಬಳಿಕ ನಾಪತ್ತೆಯಾಗಿರುವ ಮೂವರು ಆರೋಪಿಗಳಲ್ಲಿ ಅಬೂಬಕ್ಕರ್ ಸಿದ್ದೀಕ್ ಕೂಡಾ ಓರ್ವ. ಈತನ ಪತ್ತೆಗೆ 2ಲಕ್ಷ ಬಹುಮಾನ ಎನ್ಐಎ ಘೋಷಿಸಿತ್ತು. ಹಲವು ಬಾರಿ ಸಿದ್ದಿಕ್ ಮನೆಗೂ ಎನ್ಐಎ ನೋಟೀಸ್ ನೀಡಲಾಗಿತ್ತು.