ಕಾರ್ಕಳ : ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಕೇರಿ ಎಂಬಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಹಲಕ್ಕೀಕೆರೆ ನಿವಾಸಿ ಕತ್ತರಿ ಸಾಣೆ ಇಮ್ತಿಯಾಜ್ರವರ ಪುತ್ರ ನಿಜಾಮ್ (22)ಎಂದು ಗುರುತಿಸಲಾಗಿದೆ.
ಕಾರ್ಕಳ ಸಾಣೂರುನಿಂದ ತನ್ನ ಕೆಲಸಕ್ಕೆಂದು ಬೆಳಗ್ಗೆ 10.30ರ ಸುಮಾರಿಗೆ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಪುಲ್ಕೇರಿಯ ಬಳಿ ಮುಂದಿನಿಂದ ಹೋಗುತ್ತಿದ್ದ ರಿಕ್ಷಾವನ್ನು ಓವರ್ಟೇಕ್ ಮಾಡುವಾಗ ಎದುರಿನಿಂದ ಅತಿವೇಗದಿಂದ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರ ಟಿಪ್ಪರ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


