ಪಡುಬಿದ್ರಿ : ಜನ ವಿರೋಧದ ನಡುವೆಯೂ ಪಡುಬಿದ್ರಿ-ಕಾರ್ಕಳ ರಸ್ತೆ ಗುದ್ದಲಿಪೂಜೆ ನಡೆಸಲು ಬಂದ ತಂಡವನ್ನು ಸಾರ್ವಜನಿಕರು ಸೇರಿ ಹಿಂದೆ ಕಳುಹಿಸಿದ ಘಟನೆ ಪಡುಬಿದ್ರಿಯ ಸುಜ್ಲಾನ್ ಕಂಪನಿಯ ಸಮೀಪ ನಡೆದಿದೆ.
ಈ ಹಿಂದೆ ಬೆಳ್ಮಣ್ ಪ್ರದೇಶದಲ್ಲಿ ಈ ಪ್ರಯತ್ನಕ್ಕೆ ಬೇರೊಂದು ಗುತ್ತಿಗೆ ಕಂಪನಿ ಯತ್ನಿಸಿ ಕೈ ಸುಟ್ಟುಕೊಂಡಿತ್ತು, ಇದೀಗ ಈ ಭಾಗದಲ್ಲಿ ಮತ್ತೊಮ್ಮೆ ಪ್ರಯತ್ನ ನಡೆದಿದೆ. ಟೋಲ್ ಗೇಟ್ ನಿರ್ಮಾಣ ನಡೆಸಬೇಕಿದ್ದರೆ ಪೂರಕ ಹೆದ್ದಾರಿ, ಮೂಲಭೂತ ಸೌಕರ್ಯಗಳ ನಿರ್ಮಾಣ ಮುಂತಾದವುಗಳು ಆಗಬೇಕಾಗಿದೆ. ಅದ್ಯಾವುದರ ಬಗ್ಗೆಯೂ ಮುಂದಾಲೋಚನೆಯನ್ನೇ ಮಾಡದೆ ನೇರವಾಗಿ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ. ಹತ್ತು ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆಗೆ ಈಗ ಟೋಲ್ ನಾಟಕವಾಗಿ ಜನರನ್ನು ಸುಲಿಯಲು ಮುಂದಾದರೆ ಪಡುಬಿದ್ರಿ-ಕಾರ್ಕಳದುದ್ದಕ್ಕೂ ಜನ ಇದನ್ನು ಹಿಮ್ಮೆಟ್ಟಿಸಿಲು ಸಮರ್ಥರಾಗಿದ್ದಾರೆ. ಬೆಳ್ಮಣ್ ಟೋಲ್ ಹೋರಾಟ ಸಮಿತಿಯೂ ಈ ಹೋರಾಟದಲ್ಲಿ ಸಕ್ರಿಯವಾಗಲಿದೆ ಎಂದು ಮಾಜಿ ಜಿ.ಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಹೇಳಿದ್ದಾರೆ.
ಜನ ಸೇರುತ್ತಿದಂತೆ ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದ್ದಾರೆ. ಸುಮಾರು ಐವತ್ತಕ್ಕೂ ಅಧಿಕ ಮಂದಿ ಸಾರ್ವಜನಿಕರು ಕೆಲವೇ ಕ್ಷಣಗಳಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
