ಮಂಗಳೂರು : ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿದ್ದ ಕೆದಂಬಾಡಿ ರಾಮಯ್ಯ ಗೌಡರ ಸ್ಮರಣೆಗಾಗಿ “ಸ್ಮಾರ್ಟ್ ಸಿಟಿ” ಯೋಜನೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತಿ ಎತ್ತರವಾದ ಧ್ವಜಸ್ಥಂಭ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಬಾವುಟಗುಡ್ಡೆಯಲ್ಲಿ ಆದಿತ್ಯವಾರ ನೆರವೇರಿತು.
1837ರಲ್ಲಿ ಮಂಗಳೂರನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿ ಆಡಳಿತ ನಡೆಸುತ್ತಿದ್ದ ಬ್ರಿಟಿಷರನ್ನು ಕೆದಂಬಾಡಿ ರಾಮಯ್ಯ ಗೌಡರು ರೈತವೀರರನ್ನು ಸಂಘಟಿಸಿ ಹೋರಾಟ ಮಾಡಿ ಬಾವುಟಗುಡ್ಡೆಯಲ್ಲಿ ಬ್ರಿಟಿಷ್ ಧ್ವಜವನ್ನು ಇಳಿಸಿ ನಮ್ಮ ದೇಶವನ್ನು ಸ್ವತಂತ್ರವೆಂದು ಘೋಷಿಸಿ ಸುಮಾರು 13 ದಿವಸಗಳವರೆಗೆ ನಮ್ಮ ನೆಲದ ಕ್ರಾಂತಿಕಾರಿ ಬಾವುಟವನ್ನು ಏರಿಸಿದ್ದರು.
ಬಾವುಟಗುಡ್ಡೆಯ ಇತಿಹಾಸವನ್ನು ಶಾಶ್ವತಗೊಳಿಸುವ ಸಲುವಾಗಿ ಧ್ವಜಸ್ತಂಭವನ್ನು ನಿರ್ಮಿಸಲು ಸ್ವಾತ್ರಂತ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಅವರು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಮಂಜುನಾಥ ಭಂಡಾರಿ ಅವರು ರಾಜ್ಯ ಸರ್ಕಾರದೊಂದಿಗೆ ಮಾತನಾಡಿ ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ನಗರಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಶಾಸಕ ಕೆ.ಹರೀಶ್ ಕುಮಾರ್ ಹಾಗು ನಗರ ಪಾಲಿಕೆಯ ಸದಸ್ಯರುಗಳು ಉಪಸ್ಥಿತರಿದ್ದರು.