ಉಡುಪಿ : ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂ.ಗಳ ಅವ್ಯವಹಾರ ಕುರಿತು ‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ನಿಬಂಧಕರು ಆದೇಶ ನೀಡಿರುವುದು ಸಂತ್ರಸ್ತರು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿರುವ ಸತತ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ, ಪ್ರಕರಣದ ಕುರಿತು ದೂರು ನೀಡಿರುವ ಪ್ರಸಾದ್ ಕುಲಾಲ್ ಹಾಗೂ ನವೀನ್ ಸಾಲ್ಯಾನ್ ಕುಕ್ಕೆಹಳ್ಳಿ, ವಿಚಾರಣೆಗೆ ಒಳಪಡಿಸುವಾಗ ಬ್ಯಾಂಕಿನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನು ಸಹ ವಿಚಾರಣೆಗೊಳಪಡಿಸಬೇಕು ಎಂದು ತಿಳಿಸಿದರು. ತನಿಖೆಗೆ ಆದೇಶ ನೀಡಿರುವುದು ಹೋರಾಟಗಾರರಾದ ನಮಗೆ ಅತ್ಯಂತ ಸಂತೋಷ ತಂದಿದ್ದು, ನ್ಯಾಯ ಸಿಗುವ ಭರವಸೆ ಮೂಡಿಬಂದಿದೆ. ಇಡೀ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ, ಎಸ್ಐಟಿ ತನಿಖೆಗೂ ಪ್ರಯತ್ನ ನಡೆಯುತ್ತಿದೆ ಎಂದು ನವೀನ್ ಸಾಲ್ಯಾನ್, ಮಲ್ಪೆ ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ಬಣ್ಣ ಅವರ ಆತ್ಮಹತ್ಯೆ ಸಂಶಯಾಸ್ಪದವಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತಿದ್ದೇವೆ ಎಂದರು.
ಹೋರಾಟ ಮಾಡುತ್ತಿರುವ ನಮ್ಮ ಬಾಯಿ ಮುಚ್ಚಿಸಿ, ಹೋರಾಟವನ್ನು ಇಲ್ಲಿಗೆ ನಿಲ್ಲಿಸುವಂತೆ ವಾಮಮಾರ್ಗದ ಮೂಲಕ ಪ್ರಯತ್ನ ನಡೆಯುತ್ತಿದ್ದು, ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಶೆಣೈ ಹಾಗೂ ಕೋಟ ನಾಗೇಂದ್ರ ಪುತ್ರನ್ ಉಪಸ್ಥಿತರಿದ್ದರು.