ಉಡುಪಿ : ನಗರದ ಬೈಲೂರು ವಾರ್ಡ್ನಲ್ಲಿ ಸೆಪ್ಟೆಂಬರ್ 29ರ ರಾತ್ರಿ ನಡೆದ ಸರಣಿ ಕಳ್ಳತನದ ಕಳ್ಳರ ಚಲನವಲನಗಳ ಮಾಹಿತಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಒಟ್ಟು 3 ಮಂದಿ ಮುಸುಕುಧಾರಿಗಳು ಅತ್ತಿಂದಿತ್ತ ಓಡಾಡುವ ದೃಶ್ಯ ಕಂಡುಬಂದಿದೆ. ಮುಖಕ್ಕೆ ಮಾಸ್ಕ್ ಧರಿಸಿ ತಲೆಗೆ ಬಿಳಿ ಬಣ್ಣದ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿದ್ದಾರೆ ಎನ್ನುವುದು ಇದರಿಂದ ಗೋಚರಿಸುತ್ತದೆ. ಕಾಂಪೌಂಡ್ವೊಂದರ ಹೊರಭಾಗದಲ್ಲಿ ಅವರು ಕಂಡುಬಂದಿದ್ದಾರೆ. ಆದರೆ ಅನಂತರ ಎತ್ತ ಹೋಗಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಈಗಾಗಲೇ ವಿವಿಧ ಅಂಗಡಿ, ಮನೆಗಳ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಅವರು ಯಾವ ಭಾಗಕ್ಕೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕಳ್ಳರು ಸುಮಾರು 9 ಲ.ರೂ.ಗೂ ಅಧಿಕ ಮೌಲ್ಯದ ಚಿನ್ನ ಸಹಿತ ನಗದು ದೋಚಿ ಪರಾರಿಯಾಗಿದ್ದರು. ಘಟನೆ ನಡೆದು ವಾರ ಕಳೆಯುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಗರದ ಹಲವೆಡೆ ಸಿಸಿಟಿವಿಗಳನ್ನು ಪರಿಶೀಲಿಸಿದ್ದು, ತಾಂತ್ರಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಕೆಲವು ಆರೋಪಿಗಳ ಮೇಲೆ ಅನುಮಾನವಿದ್ದು, ಅದರಂತೆ ಒಂದು ತಂಡ ಉತ್ತರ ಭಾರತಕ್ಕೆ ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.