ಕಾರ್ಕಳ : ಪತಿ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ನವ ವಿವಾಹಿತೆಯೋರ್ವಳು ತನ್ನ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆಯನ್ನು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ತೆಳ್ಳಾರು ರಸ್ತೆ ನಿವಾಸಿ ಮೂಲತಃ ಬಾಗಲಕೋಟ ಜಿಲ್ಲೆಯ ನಿವಾಸಿ ಶರಣಮ್ಮ ಎಂಬವರ ಪುತ್ರಿ ಶಂಕ್ರಮ್ಮ (20) ಎಂದು ಗುರುತಿಸಲಾಗಿದೆ.
ಬಾಗಲ ಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೆರೆ ಯಲ್ಲನ ಜೊತೆ 2023ರ ಡಿ. 6 ರಂದು ಶಂಕ್ರಮ್ಮ ಅವರ ವಿವಾಹವಾಗಿತ್ತು.
ಮದುವೆಯಾದ ಆರಂಭದಲ್ಲಿ ಗಂಡನ ಮನೆಯಲ್ಲಿ ಚೆನ್ನಾಗಿ ಜೀವನ ನಡೆಸುತ್ತಿದ್ದ ಶಂಕ್ರಮ್ಮನಿಗೆ ಬಳಿಕ ಆಕೆಯ ಗಂಡ ಹಾಗೂ ಅತ್ತೆ ಗೌರಮ್ಮ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರು.
ಇದೇ ವಿಚಾರದಲ್ಲಿ ಮನನೊಂದ ಶಂಕ್ರಮ್ಮ ಮೇ 30 ರಂದು ಗಂಡನ ಮನೆಯಿಂದ ಕಿರುಕುಳ ತಾಳಲಾಗದೇ ವಾಪಾಸು ತಾಯಿ ಮನೆಯಾದ ಕಾರ್ಕಳಕ್ಕೆ ಬಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನನ್ನ ಮಗಳ ಸಾವಿಗೆ ಆಕೆಯ ಗಂಡ ಹಾಗೂ ಅತ್ತೆ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯೇ ಕಾರಣವೆಂದು ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
			        


 
			         
                        