ಮಂಗಳೂರು : ಸೇವಾ ಭಾರತಿ(ರಿ) ಮಂಗಳೂರು ಕಳೆದ 33 ವರ್ಷಗಳಿಂದ ದಿವ್ಯಾಂಗರ ಜೀವನ ಸ್ತರ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಈ ಪೈಕಿ 1998ರಲ್ಲಿ ಸೌಕರ್ಯಗಳನ್ನು ಒದಗಿಸಿಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಆರಂಭವಾದ “ಆಶಾಜ್ಯೋತಿ”ಯೂ ಒಂದು. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರ ಒಂದು ವೇದಿಕೆ. ಅದು ಈ ಕೆಳಗಿನ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜ.19ರಂದು ಕೆನರಾ ಹೈಸ್ಕೂಲ್ ಮೈದಾನದಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ“ ಎಂದು ಸಂಘಟನೆಯ ಗೌರವಾಧ್ಯಕ್ಷ ಡಾ. ವಿ.ಮುರಳೀಧರ ನ್ಯಾಕ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
”ದಿವ್ಯಾಂಗರಲ್ಲಿರುವ ಸುಪ್ತ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಅರಳಿಸುವುದು. ಅವರನ್ನು ಯಥಾಸಾಧ್ಯ ಸ್ವಾವಲಂಬಿಗಳನ್ನಾಗಿ ಮಾಡುವುದು, ದಿವ್ಯಾಂಗರಲ್ಲಿ ಹಾಗೂ ಪೋಷಕರಲ್ಲಿರುವ ಅಸಹಾಯಕತೆಯ ವಾತಾವರಣವನ್ನು ನೀಗಿಸಿ ಅವರಲ್ಲಿ ವಿಶ್ವಾಸ ತುಂಬಿಸುವುದು, ಅಂಗವಿಕಲತೆಯ ಗುರುತುಚೀಟಿಯನ್ನು ಪಡೆಯಲು ಸಹಕರಿಸುವುದು, ಅವರಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ/ಆಪ್ತ ಸಲಹಾ ಶಿಬಿರಗಳನ್ನು ನಡೆಸುವುದು, ಸರಕಾರಿ ಹಾಗೂ ಅರೆಸರಕಾರಿ ಸಂಸ್ಥೆಗಳಿಂದ ದಿವ್ಯಾಂಗರಿಗೆ ಸಿಗುವ ಸೌಲಭ್ಯಗಳ ಮಾಹಿತಿ
ಒದಗಿಸುವುದು, ದಿವ್ಯಾಂಗರಿಗಾಗಿ ವರ್ಷಕ್ಕೊಂದು ಬಾರಿ ಪ್ರವಾಸ ಹಾಗೂ ಮೇಳ ಆಯೋಜಿಸುವುದು, ವಿಶೇಷ ಸಾಧನೆ ಮಾಡಿದ ದಿವ್ಯಾಂಗರನ್ನು ಸನ್ಮಾನಿಸುವುದು ಇತ್ಯಾದಿ ಕಾರ್ಯಕ್ರಮವನ್ನು ಪ್ರತಿ ವರ್ಷ “ವಿಶಿಷ್ಟರಿಗಾಗಿ ವಿಶಿಷ್ಟ ಮೇಳ“ದ ಮೂಲಕ ಆಯೋಜಿಸುತ್ತ ಬಂದಿದೆ. ಅವರಿಗೆ ಮನರಂಜನೆ ಒದಗಿಸುವ ಜೊತೆ ಜೊತೆಗೆ ಅವರಲ್ಲಿ ಚೈತನ್ಯ, ವಿಶ್ವಾಸ ತುಂಬಿಸುವುದೂ ಇದರ ಉದ್ದೇಶ. ಆರಂಭಿಕ ಕೆಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದಿವ್ಯಾಂಗರು ಸೇರಿದ್ದರೆ 2024ರಲ್ಲಿ ಸುಮಾರು 1200 ದಿವ್ಯಾಂಗರು ಹಾಗೂ 1600 ಹೆತ್ತವರು, ಹಿತೈಷಿಗಳು ಸೇರಿ ಸುಮಾರು 2800ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮೇಳದಲ್ಲಿ ದಿವ್ಯಾಂಗರು ಖುಷಿ ಪಡುವುದರ ಜೊತೆಗೆ ಹಾಡುವುದು, ಕುಣಿಯುವುದು, ಸ್ಪರ್ಧೆ ಹಾಗೂ ಆಟೋಟಗಳಲ್ಲಿ ಭಾಗವಹಿಸುವುದು, ಕುದುರೆ ಸವಾರಿ ಸಹಿತ ಅನೇಕ ಮೋಜಿನ ಆಟಗಳ ವ್ಯವಸ್ಥೆ ಇರುತ್ತದೆ. ಹೆತ್ತವರನ್ನೂ ಸೇರಿಸಿದಂತೆ ಮನರಂಜನಾ ಸ್ಪರ್ಧೆಗಳು ಇರುತ್ತವೆ. ಮೇಳದಲ್ಲಿ ವಿಶಿಷ್ಟರಿಗೆ ಎಲ್ಲವೂ ಮುಕ್ತ ಮತ್ತು ಉಚಿತ. ಆಶಾಜ್ಯೋತಿಯ ಚಟುವಟಿಕೆಗಳು ಸಾರ್ವಜನಿಕರು ಹಾಗೂ ಸರ್ಕಾರಿ ಸಂಸ್ಥೆಗಳ ಆರ್ಥಿಕ ಸಹಕಾರದಿಂದಲೇ ನಡೆಯುತ್ತವೆ“ ಎಂದರು.
ಈ ವರ್ಷದ ಮೇಳವು ಕೆನರಾ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ನ ಸಹಭಾಗಿತ್ವದಲ್ಲಿ ಜ.19ರ ಆದಿತ್ಯವಾರದಂದು ಬೆಳಿಗ್ಗೆ 8.30ರಿಂದ ಸಾಯಂಕಾಲ 4.15ರ ತನಕ ಮಂಗಳೂರಿನ ಡೊಂಗರಿಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವುದು. ಅಂದು ಬೆಳಿಗ್ಗೆ 9.30 ಗಂಟೆಗೆ ಮೇಳದ ಉದ್ಘಾಟನೆಯನ್ನು ಮೇಯರ್ ಮನೋಜ್ ಕುಮಾರ್ ನೆರವೇರಿಸಲಿದ್ದಾರೆ. ಸಿಟಾಡೆಲ್ ಪ್ರೊಜೆಕ್ಟ್ ಮತ್ತು ಡೆವೆಲಪರ್ರ್ಸ್ನ ರಾಮ್ ಕುಮಾರ್ ಮತ್ತು ಅಸ್ತ್ರ ಗ್ರೂಪ್ ಸಿ.ಇ.ಒ. ಲಾಂಚೂಲಾಲ್ ಕೆ.ಎಸ್. ಇವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಕಾರ್ಯದರ್ಶಿ ಎಸ್. ರವಿನಾಥ ಕುಡ್ವ, ಜೊತೆ ಕಾರ್ಯದರ್ಶಿ ಗಣರಾಜ ವೈ, ಖಜಾಂಚಿ ಕೆ.ವಿಶ್ವನಾಥ ಪೈ, ಜೊತೆ ಖಜಾಂಚಿ ಬಿ.ಅಶ್ವತ್ಥಾಮ ರಾವ್ ಮತ್ತು ಸೇವಾಭಾರತಿ ಗೌರವ ಕಾರ್ಯದರ್ಶಿಯಾದ ಹೆಚ್.ನಾಗರಾಜ ಭಟ್, ಖಜಾಂಚಿ ಪಿ.ವಿನೋದ್ ಶೆಣೈ ಉಪಸ್ಥಿತರಿದ್ದರು.