ಉಡುಪಿ : ಕೈಮಗ್ಗದ ನೇಕಾರಿಕೆಯ ಅದ್ಭುತ ಕಲಾಕೌಶಲ್ಯವನ್ನು ಪೋಷಿಸಿ ಬೆಳೆಸಲು ನಿರಂತರವಾಗಿ ಶ್ರಮಿಸುತ್ತ, ಪುತ್ತಿಗೆ ಮಠದ ಪರ್ಯಾಯ ಮತ್ತು ಶ್ರೀ ಕೃಷ್ಣ ಮಾಸೋತ್ಸವದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕೈಮಗ್ಗ ಸೀರೆಗಳ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಿ, ಕೈಮಗ್ಗದ ಉದ್ದಿಮೆಗೆ ಮತ್ತು ಶ್ರೀ ಕೃಷ್ಣ ಮಾಸೋತ್ಸವಕ್ಕೆ ವಿಶೇಷವಾದ ಮೆರುಗನ್ನು ನೀಡಿದ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ಶ್ರೀಕೃಷ್ಣ ಜಯಂತಿಯ ಅಂಗವಾಗಿ ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Art and Culture
ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ – ಹುಲಿಗಳ ಜೊತೆ ಹೆಜ್ಜೆ ಹಾಕಿದ ಡಾನ್ಸರ್ ಶ್ರೇಯಾ ಆಚಾರ್ಯ
ಭಗವಾನ್ ಶ್ರೀ ಕೃಷ್ಣನ ಜನ್ಮವಾಗಿದೆ, ಇಂದು ಉಡುಪಿಯಲ್ಲಿ ಕೃಷ್ಣ ಲೀಲೋತ್ಸವ ನಡೆಯುತ್ತಿದೆ. ಎಲ್ಲಿ ನೋಡಿದರೂ ಹುಲಿಗಳ ಕಲರವ. ಮಹಿಳಾ ಹುಲಿವೇಷಗಳು ಪುರುಷರ ಹುಲಿ ವೇಷಗಳಿಗೆ ಫೈಟ್ ಕೊಡುತ್ತಿವೆ. ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋದ ಡಾನ್ಸರ್ ಶ್ರೇಯಾ ಆಚಾರ್ಯ ಮುಂಬೈನಿಂದ ಬಂದು ಹುಲಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಹುಲಿ ವೇಷ ತಂಡ ಕೊಂಬೆ ಕುಣಿತ ತಂಡಗಳ ಜೊತೆ ನಗರದ ಅಲ್ಲಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಕಲೆ, ಸಂಸ್ಕೃತಿ ಸಂಪ್ರದಾಯ ಉಳಿಸೋಣ ಎಂದು ಸಂದೇಶ ಕೊಟ್ಟಿದ್ದಾರೆ.
ಇಡೀ ಕುಟುಂಬ ಅಷ್ಟಮಿಯನ್ನು ಆಚರಣೆ ಮಾಡಲಿಕ್ಕೆ ಬೆಂಗಳೂರು ಮುಂಬೈಯ ಬೇರೆ ಬೇರೆ ಭಾಗಗಳಿಂದ ನಾವು ಉಡುಪಿಗೆ ಬರುತ್ತೇವೆ. ಕುಟುಂಬ ಜೊತೆಯಾಗುವ ಜೊತೆಗೆ, ನಮ್ಮ ಕಲೆ ಸಂಸ್ಕೃತಿಯ ಜೊತಗಿರುವ ಉದ್ದೇಶವು ಇದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚರಣೆಗಳು ತಿಳಿಯಬೇಕು ಅಂತ ಹೇಳಿದ್ದಾರೆ.
ಕಾಸರಗೋಡು : ಯಕ್ಷಗಾನ ಕಲೆಯ ಉಳಿವು ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಸಬೇಕು. ಅವರಲ್ಲಿ ಭವಿಷ್ಯದ ಕಲಾವಿದರನ್ನು ರೂಪಿಸಬೇಕು ಎಂಬ ಉದ್ದೇಶವನ್ನು ಯಕ್ಷಗಾನ ಅಕಾಡೆಮಿ ಹೊಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಶನಿವಾರ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ‘ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮಾಯಣ, ಮಹಾಭಾರತದಂತರ ಪುಣ್ಯ ಕಥಾನಕಗಳನ್ನು ಯಕ್ಷಗಾನ ರೂಪದಲ್ಲಿ ಮಕ್ಕಳಿಗೆ ತಿಳಿಯಪಡಿಸಿದಾಗ ಅವರಲ್ಲಿ ನೈತಿಕ ಮೌಲ್ಯಗಳು ಜಾಗೃತವಾಗುತ್ತವೆ. ತಂದೆ ತಾಯಿ, ಗುರುಹಿರಿಯರಿಗೆ ಗೌರವ ಕೊಡುವುದಲ್ಲದೆ, ಸಮಾಜದ ಒಬ್ಬ ನಾಗರಿಕನಾಗಿಯೂ ರೂಪುಗೊಳ್ಳುತ್ತಾರೆ. ಭವಿಷ್ಯದಲ್ಲಿ ಉತ್ತಮ ಕಲಾವಿದನಾಗದಿದ್ದರೂ, ಒಬ್ಬ ಉತ್ತಮ ಯಕ್ಷಗಾನ ಪ್ರೇಕ್ಷಕನಾಗುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು ಈ ಸರಣಿಯಲ್ಲಿ ಎರಡನೇಯದ್ದಾಗಿದೆ ಎಂದು ಅವರು ತಿಳಿಸಿದರು.
ಇಂದಿನ ಮಕ್ಕಳಿಗೆ ಸುಖ ದು:ಖಗಳ ಅರಿವೇ ಬಾರದಂತೆ ತಂದೆ ತಾಯಿ ಸಾಕುತ್ತಿದ್ದಾರೆ. ಮಕ್ಕಳಲ್ಲಿ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸದಿದ್ದರೆ ಮುಂದೆ ಅವರು ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ, ಅವರನ್ನು ದೂರಿ ಪ್ರಯೋಜನವಿಲ್ಲ. ಹೀಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು. ಯಕ್ಷಗಾನ ಒಂದು ಪರಿಪೂರ್ಣ ಕಲೆಯಾಗಿದೆ. ಇಲ್ಲಿ ಬಣ್ಣ, ನಾಟ್ಯ, ವೇಷ, ಕುಣಿತ, ಹಾಡು, ಅರ್ಥ ಹೀಗೆ ನವರಸ ಭಾವಗಳನ್ನು ತುಂಬಿಕೊoಡ ಏಕೈಕ ಪ್ರದರ್ಶನ ಕಲೆಯಾಗಿದೆ. ಇದರ ಇನ್ನೊಂದು ವಿಶೇಷವೆಂದರೆ ಕಲಾವಿದ ಯಾವುದೇ ಜಿಲ್ಲೆಯವನಾಗಿರಲಿ, ಆತನ ಆಡು ಭಾಷೆ ಯಾವುದೇ ಆಗಿರಲಿ, ಆದರೆ ಆತ ರಂಗಸ್ಥಳಕ್ಕೆ ಬಂದಾಗ ‘ಶುದ್ಧ ಕನ್ನಡ’ವನ್ನೇ ಮಾತನಾಡುವುದು ಈ ಕಲೆಯ ಹಿರಿಮೆಗೆ ಸಾಕ್ಷಿ. ಯಕ್ಷಗಾನದಿಂದಲೇ ಕನ್ನಡದ ಉಳಿವು ಕೂಡಾ ಸಾಧ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ತç ಅವರು ಮಾತನಾಡಿ, ಯಕ್ಷಗಾನ ಕಲೆಗೆ ಯಕ್ಷಗಾನ ಅಕಾಡೆಮಿ ನೀಡುತ್ತಿರುವ ಪ್ರೋತ್ಸಾಹ ಪ್ರಶಂಸನೀಯ. ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಈ ಕಲೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಯಕ್ಷಗಾನದಿಂದ ಹಿಂದು – ಮುಸ್ಲಿಂ ಸಾಮರಸ್ಯ
ಮಂಜೇಶ್ವರದ ಶಾಸಕ ಎ.ಕೆ.ಅಶ್ರಫ್ ಅವರು ಮಾತನಾಡಿ, ಈ ಪುಣ್ಯಭೂಮಿ ಭಾರತದಲ್ಲಿ 1956ರಲ್ಲಿ ಕಾಸರಗೋಡು ಅನಿರೀಕ್ಷಿತವಾಗಿ ಕೇರಳಕ್ಕೆ ಸೇರಿದರೂ, ಕನ್ನಡ ಸಾಂಸ್ಕೃತಿಕ ರಂಗಕ್ಕೆ ವಿಶೇಷ ಕೊಡುಗೆ ನೀಡಿದೆ. ಮಂಜೇಶ್ವರ ಗೋವಿಂದ ಪೈ, ಪಾರ್ತಿಸುಬ್ಬ ಅವರಂತಹ ಮಹಾನ್ ಕವಿಗಳು, ಎಡನೀರು ಮಠ ಯಕ್ಷಗಾನಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತಿಲ್ಲ. ಕರ್ನಾಟಕದಲ್ಲಿ ಯಕ್ಷಗಾನಕ್ಕೆ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಕೇರಳದ ಪ್ರಾಂತೀಯ ಮಟ್ಟದಲ್ಲಿ ಯಕ್ಷಗಾನ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಕಾಸರಗೋಡೇ ಪ್ರಥಮ ಸ್ಥಾನ ಪಡೆಯುತ್ತಿದ್ದು, ಇದೀಗ ಇನ್ನಿತರ ಪ್ರಾಂತ್ಯಗಳು ಕೂಡಾ ಸ್ಪರ್ಧೆಯನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು. ಯಕ್ಷಗಾನದಂತಹ ಉನ್ನತ ಕಲೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಇಂತಹ ಪ್ರಯತ್ನ ಅತ್ಯವಶ್ಯಕವಾಗಿದೆ. ಕಲೆ ವಿನಾಶದಂಚಿಗೆ ಹೋಗಬಾರದು. ಯಕ್ಷಗಾನದಲ್ಲಿ ಬಪ್ಪನಾಡು ಬ್ಯಾರಿಯ ಪಾತ್ರದ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಸಾರುವ ಜಗತ್ತಿನ ಏಕೈಕ ಕಲೆ ಎಂದರೆ ಅದು ಯಕ್ಷಗಾನ. ಮೊಹಮ್ಮದ್ ಜಬ್ಬಾರ್ ಅವರಂತಹ ಖ್ಯಾತ ಯಕ್ಷಗಾನವನ್ನು ಕಂಡು ಭೇಟಿಯಾಗಬೇಕು ಎನ್ನುವ ತುಡಿತ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಮಾತನಾಡಿ, ಅಕಾಡೆಮಿಯ ಸಹಕಾರದಲ್ಲಿ ಹಿಂದೆಯೂ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದೇವೆ. ಕಲೆಯ ಬೆಳವಣಿಗೆ ಹಾಗೂ ಕಲಾವಿದರಿಗೆ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಇಂತಹ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಜೇಶ್ವರದ ಶಾಸಕ ಎ.ಕೆ.ಅಶ್ರಫ್ ಅವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ ತೆಂಕುತಿಟ್ಟು ಯಕ್ಷಗಾನ ನಾಟ್ಯದ ಪ್ರಾಥಮಿಕ ಹಂತದ ದಾಖಲೀಕರಣ, ಪ್ರಾತ್ಯಕ್ಷಿಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ರವಿಶಂಕರ ವಳಕ್ಕುಂಜ, ಲಕ್ಷ್ಮಣ ಕುಮಾರ್ ಮರಕಡ, ಡಾ.ಶ್ರುತಕೀರ್ತಿ ರಾಜ್ ಉಜಿರೆ, ಗಣೇಶ್ ಪಾಲೆಚ್ಚಾರು, ಶ್ರೀಕೃಷ್ಣ ದೇವಕಾನ, ರಾಮಮೂರ್ತಿ ಕುದ್ರೆಕ್ಕೂಡ್ಲು, ಗಣೇಶ್ ಭಟ್ ಬೆಳಾಲು, ರವಿ ಮುಂಡಾಜೆ, ರಂಜಿತ್ ಗೋಳಿಯಡ್ಕ, ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ವಸಂತ ಗೌಡ ಕಾಯರ್ತಡ್ಕ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಜಿ.ವಿ.ಎಸ್.ಉಲ್ಲಾಳ್ ಹಾಗೂ ಪ್ರಥ್ವಿರಾಜ್ ಕವತ್ತಾರು ಉಪಸ್ಥಿತರಿದ್ದರು.
ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರಿತಾ ಎನ್. ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಗುರುರಾಜ್ ಭಟ್ ವಂದಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕರಾದ ಸತೀಶ್ ಅಡಪ್ಪ ಸಂಕಬೈಲು ಕಾರ್ಯಕ್ರಮ ನಿರೂಪಿಸಿದರು.

ಮಾಹೆಯ ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ಸ್ ಸೆಂಟರ್ನಲ್ಲಿ ರಾಜಸ್ತಾನಿ ಕಲಾವಿದರ ಜಾನಪದ ಸಂಗೀತ ಕಾರ್ಯಕ್ರಮ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನ ಹೆಬ್ಬಾರ್ ಆರ್ಟ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್ [ಎಚ್ಜಿಎಸಿ] ಯು ಜೋಧ್ಪುರದ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದು ಆಗಸ್ಟ್ 23, 2024 ರಂದು ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ನ ಗಂಗೂಬಾಯಿ ಹಾನಗಲ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ಸಿಂಧಿ ಸಾರಂಗಿ, ಧೋಲಕ್, ಮೋರ್ಚಿಂಗ್ ಮತ್ತು ಖರ್ತಾಲ್- ಹೀಗೆ ನಾಲ್ಕು ದೇಸಿ ವಾದ್ಯಗಳನ್ನು ಒಳಗೊಂಡಿದೆ. ಈ ನಾಲ್ಕು ವಾದ್ಯಗಳು ರಾಜಸ್ತಾನ ಮತ್ತು ಉತ್ತರಭಾರತದ ಸಾಂಪ್ರದಾಯಿಕ ಜಾನಪದ ಮತ್ತು ಭಕ್ತಿ ಸಂಗೀತಗಳಲ್ಲಿ ಬಳಕೆಯಾಗುತ್ತವೆ.
ಈ ಸಂಗೀತ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಯಾನ್ವಯ ಆಸನ ಸೌಲಭ್ಯವಿದೆ. ಸಂಜೆ 6.15 ದ ಬಳಿಕ ಸಭಾಂಗಣಕ್ಕೆ ಪ್ರವೇಶವಿಲ್ಲ.

ಉಡುಪಿ : ಯಕ್ಷರಂಗಾಯಣ ಕಾರ್ಕಳ ಇದರ ನೂತನ ನಿರ್ದೇಶಕರಾಗಿ ಬಿ. ಆರ್. ವೆಂಕಟರಮಣ ಐತಾಳ್ರವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ನಿಕಟಪೂರ್ವ ಯಕ್ಷರಂಗಾಯಣದ ನಿರ್ದೇಶಕ ಜೀವರಾಮ್ ಸುಳ್ಯ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸದಸ್ಯರಾದ ನಾಗೇಶ್ ಉದ್ಯಾವರ, ಸಂತೋಷ್ ಹಿರಿಯಡ್ಕ, ರಂಗಕರ್ಮಿಗಳಾದ ಬಾಸುಮ ಕೊಡಗು, ಸುಕುಮಾರ್ ಮುದ್ರಾಡಿ, ಕಾವ್ಯವಾಣಿ, ರಾಜು ಮಣಿಪಾಲ, ಚಂದ್ರನಾಥ ಬಜಗೋಳಿ, ಸಂದೇಶ್, ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್, ಪದ್ಮಪ್ರಸಾದ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ” ಯಲ್ಲಿ ಉಡುಪಿಯ ಇಬ್ಬರಿಗೆ ಬಹುಮಾನ
ಉಡುಪಿ : ಚಲನಚಿತ್ರತಾರೆ ಭಾವನಾ ರಾಮಣ್ಣ ಹಾಗು ಚಾರುಮತಿಯವರು ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ “ವರ್ಣ ಸ್ಪರ್ಧೆ”ಯಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ. ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರೂ. 1,00,000/- ಹಾಗು ಸಾನ್ವಿ ರಾಜೇಶ್ ಜೂನಿಯರ್ ವಿಭಾಗದಲ್ಲಿ 3ನೇ ಸ್ಥಾನ ಪಡೆದು ರೂ. 30,000/- ಬಹುಮಾನ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಕುಮಾರಿ ಪನ್ನಗ ದೊಡ್ಡಣಗುಡ್ಡೆಯ ಶ್ರೀ ಗಣೇಶ್ ರಾವ್ ಹಾಗು ಸುಮಾ ಅವರ ಪುತ್ರಿ.
ಹಾಗೆಯೇ ಕುಮಾರಿ ಸಾನ್ವಿ ಕುಕ್ಕಿಕಟ್ಟೆಯ ಶ್ರೀ ರಾಜೇಶ್ ಹಾಗು ಉಷಾ ಅವರ ಪುತ್ರಿ.

ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಪಾದರು ಅಮೇರಿಕಾದ ಹೂಸ್ಟನ್ ಮಹಾನಗರದಲ್ಲಿ ಪುತ್ತಿಗೆ ಮಠದ ಶಾಖೆ ಮಾಡಿದ ನಂತರ ಅಲ್ಲಿ ನಿರಂತರ ದೇಸೀ ಚಟುವಟಿಕೆಗಳು ನಡೆಯುತ್ತಿವೆ. ಅಮೆರಿಕಾದ ಮಠದ ಮುಂಭಾಗದಲ್ಲಿರುವ ವಿಶಾಲ ಬಯಲಿನಲ್ಲಿ “ಶಾಂಭವಿ ವಿಜಯ” ಎಂಬ ಯಕ್ಷಗಾನ ಕಲಾ ಪ್ರದರ್ಶನ ಅದ್ಭುತವಾಗಿ ಮೂಡಿಬಂದು ಕಲಾರಸಿಕರ ಮನಸೂರೆಗೊಂಡಿತು.

ಖ್ಯಾತ ಕಲಾವಿದ ಪಟ್ಲ ಸತೀಶ್ ನೇತೃತ್ವದ ತಂಡದ ಕಲಾವಿದರು ಈ ಕಾರ್ಯಕ್ರಮವನ್ನು ಊರಿನಂತೆಯೇ ಅಮೆರಿಕಾದಲ್ಲೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.
ಮಹಿಷಾಸುರನ ದೊಂದಿಯ ಆರ್ಭಟ, ದೇವಿಯ ಪರಾಕ್ರಮ ವೈಭವ, ಚಂಡೆಯ ಅಬ್ಬರ, ಈ ಎಲ್ಲದರೊಂದಿಗೆ ವೇಷಧಾರಿಗಳ ಕುಣಿತ. ಈ ಎಲ್ಲವೂ ಕಲಾರಸಿಕರಾಗಿ ಅಲ್ಲೇ ನೆಲಸಿದ್ದ ಅನಿವಾಸಿ ಭಾರತೀಯರನ್ನು ಮೈನವಿರೇಳಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸುಮಾರು ಐನೂರಕ್ಕೂ ಹೆಚ್ಚು ಮಂದಿ ಬಯಲಿನಲ್ಲಿ ಸೇರಿ ಯಕ್ಷಗಾನವನ್ನು ನೋಡಿ ಆನಂದಿಸಿದರು.


ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ “ಐಲೇಸಾ ದಿ ವಾಯ್ಸ್ ಆಫ್ ಓಷ್ಯನ್” ವತಿಯಿಂದ “ಐ-ಲೇಸಾ ವಿಜಯಕಲಾ ರಂಗೋತ್ಸವ”ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭವು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇದೇ ಬರುವ ದಿನಾಂಕ 21-07-2024 ಭಾನುವಾರ ಬೆಂಗಳೂರಿನ ಬನ್ನೇರುಘಟ್ಟ ಮಾರ್ಗದ, ವಿಜಯಾ ಬ್ಯಾಂಕ್ ಲೇಔಟ್ ನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣ”ದಲ್ಲಿ ನಡೆಯಲಿದೆ.
ಶರತ್ ಶೆಟ್ಟಿ ನೇತೃತ್ವದ ತುಳುನಾಡಿನ ಖ್ಯಾತ ರಂಗಭೂಮಿ ಸಂಸ್ಥೆ “ವಿಜಯ ಕಲಾವಿದರು ಕಿನ್ನಿಗೋಳಿ” ಇವರ 25ನೇ ವಾರ್ಷಿಕ ಸಂಭ್ರಮಾರ್ಥವಾಗಿ ತುಳು ಹಾಸ್ಯಮಯ ಸಾಮಾಜಿಕ ನಾಟಕ “ತೊಟ್ಟಿಲ್” ಪ್ರದರ್ಶನವಿದೆ.
“ಐ-ಲೇಸಾ ದಿ ವಾಯ್ಸ್ ಆಫ್ ಓಷ್ಯನ್(ರಿ)” ನಿರ್ಮಾಣದ ಹೊಸ ತುಳು ಭಾವಗೀತೆಗಳನ್ನು ಖ್ಯಾತ ಸಂಗೀತ ನಿರ್ದೇಶಕ ಶ್ರೀ ವಿ. ಮನೋಹರ್ ಲೋಕಾರ್ಪಣೆ ಗೊಳಿಸಲಿದ್ದಾರೆ. ಬಹು ಭಾಷಾ ತಾರಾ ಗಾಯಕ ಡಾ. ರಮೇಶ್ಚಂದ್ರರೊಂದಿಗೆ ಹಾಡುಗಳ ಮೂಲ ಗಾಯಕರೇ ಸಂಗೀತ ರಸಮಂಜರಿಯನ್ನು ಪ್ರಸ್ತುತ ಪಡಿಸಲಿದ್ದಾರೆ.
“ಯಕ್ಷತರಂಗ ಬೆಂಗಳೂರು (ರಿ)” ಸಂಸ್ಥೆಯ ಬಾಲ ಕಲಾವಿದರಿಂದ “ಶ್ರೀ ಕೃಷ್ಣ ಲೀಲೆ-ಕಂಸ ವದೆ” ಯಕ್ಷಗಾನ ಪ್ರದರ್ಶನವಿದೆ.
ಬೆಂಗಳೂರಿನ “ಮುಲ್ಕಿ ಸುಂದರ್ ರಾಮ್ ಶೆಟ್ಟಿ ನಗರ”ದ ನಾಗರಿಕ ಬಂಧುಗಳು ತುಂಬು ಸಹಕಾರ ನೀಡಲಿದ್ದಾರೆ. 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ “ವಿಜಯ ಕಲಾವಿದರು ಕಿನ್ನಿಗೋಳಿ” ತಂಡವನ್ನು ರಾಜಧಾನಿ ಬೆಂಗಳೂರಿನಲ್ಲಿ ಉದ್ಯಮಿ, ಕಲಾ ಪೋಷಕ ಶ್ರೀ ಭವಾನಿಶಂಕರ್ ಶೆಟ್ಟಿಯವರು ಸನ್ಮಾನಿಸಿ ಅಭಿನಂದಿಸಲಿದ್ದಾರೆ.
ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಾಗಿದ್ದು, ಸಮಸ್ತ ಕಲಾಭಿಮಾನಿಗಳಿಗೆ “ಟೀಮ್ ಐ-ಲೇಸಾ” ತುಂಬು ಹೃದಯದ ಸ್ವಾಗತ ಕೋರಿದ್ದಾರೆ.

