ಮಂಗಳೂರು : ಪಿಲಿಕುಳ ಕಂಬಳಕ್ಕೆ ಕರೆಮುಹೂರ್ತ ನಡೆದ ಬೆನ್ನಲ್ಲೇ ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮದ ಮುಂದೆ ಜಿಲ್ಲಾಡಳಿತದಿಂದ ನಡೆಯುವ ಕಂಬಳಕ್ಕೆ ಕ್ಷೇತ್ರದ ಶಾಸಕನಾಗಿ ತನ್ನನ್ನೇ ದೂರವಿಟ್ಟು, ಅವಮಾನಿಸಲಾಗುತ್ತಿದೆ. ನನ್ನನ್ನು ಬಿಟ್ಟು ಹೇಗೆ ಕಂಬಳ ಮಾಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ. ಭಂಡಾರಿಯವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಪಿಲಿಕುಳವನ್ನು ಸೈಲೆಂಟ್ ಝೋನ್ ಘೋಷಿಸಬೇಕೆಂದು ಪತ್ರ ಬರೆದಿದ್ದಾರೆ. ಈ ಮೂಲಕ ಪಿಲಿಕುಳ ಕಂಬಳಕ್ಕೆ ಮತ್ತೊಂದು ಕಂಟಕ ಎದುರಾಗಿದೆ.
ಪಿಲಿಕುಳ ನಿಸರ್ಗಧಾಮ ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿ ಉದ್ದೇಶದಿಂದ ನಿರ್ಮಿಸಲಾಗಿದೆ. ಸದ್ಯ ಇಲ್ಲಿ 1250 ವನ್ಯಜೀವಿಗಳಿದೆ. ಸಾರ್ವಜನಿಕರಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಸಂಶೋಧನೆ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವನ್ಯಮೃಗಗಳನ್ನು ಇಲ್ಲಿ ರಕ್ಷಿಸಲಾಗುತ್ತಿದೆ. ಪಿಲಿಕುಳಕ್ಕೆ ಭೇಟಿ ನೀಡುವವರಿಗೆ ಮಾಲಿನ್ಯ ಮುಕ್ತ (ಗಾಳಿ, ಶಬ್ದ, ನೀರು, ಭೂಮಿ) ಪರಿಸರವನ್ನು ಒದಗಿಸುವುದು ಪ್ರಾಧಿಕಾರದ ಪ್ರಾಥಮಿಕ ಜವಾಬ್ದಾರಿ. ಅಲ್ಲದೆ ಸಂರಕ್ಷಣೆಯಲ್ಲಿರುವ ವನ್ಯ ಜೀವಿಗಳಿಗೆ ಶಬ್ದಮಾಲಿನ್ಯ ಮುಕ್ತ ಪರಿಸರವನ್ನು ಒದಗಿಸುವುದು ಅತೀ ಮುಖ್ಯ. ಆದ್ದರಿಂದ ಪಿಲಿಕುಳ ಮತ್ತು ಸುತ್ತಮುತ್ತಲಿನ 500 ಮೀ. ಪ್ರದೇಶವನ್ನು ಪರಿಸರ ಸಂರಕ್ಷಣಾ ಕಾಯ್ದೆ 1986ರನ್ವಯ “ಸೈಲೆಂಟ್ ಝೋನ್’ ಎಂದು ಘೋಷಿಸಲು ವಿನಂತಿಸುತ್ತೇನೆ ಎಂದು ಪತ್ರ ಬರೆಯಲಾಗಿದೆ.
ನವೆಂಬರ್ 17, 18ರಂದು ಪಿಲಿಕುಳದಲ್ಲಿ ಕಂಬಳ ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಕಂಬಳದ ವೇಳೆ ಕೊಂಬು, ವಾದ್ಯ, ಸಮ್ಮೇಳಗಳ ಸ್ವರ ತಾರಕಕ್ಕೇರುತ್ತದೆ. ಅಲ್ಲದೆ ನಿರಂತರವಾಗಿ ಮೈಕ್ಗಳಲ್ಲಿ ಕಂಬಳ ರೆಫ್ರಿಗಳು ಅನೌನ್ಸ್ ಮಾಡುತ್ತಲೇ ಇರುತ್ತಾರೆ. ಕೋಣಗಳನ್ನು ತರುವ ವಾಹನಗಳ ಕಿರಿಕಿರಿ, ವಾಯುಮಾಲಿನ್ಯದಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪಿಲಿಕುಳದಲ್ಲಿ ಜಿಲ್ಲಾಡಳಿತ ಕಂಬಳ ನಡೆಸಿದರೆ ಪ್ರಾಣಿಗಳಿಗೆ ಕಿರಿಕಿರಿ ಉಂಟಾಗುವುದು ಎಂಬ ಅಭಿಪ್ರಾಯ ಈ ಪತ್ರದ ಹಿಂದೆ ಅಡಗಿದೆ. ಆದ್ದರಿಂದ 13ವರ್ಷಗಳ ಬಳಿಕ ಜಿಲ್ಲಾಡಳಿತದಿಂದ ನಡೆಯುವ ಪಿಲಿಕುಳ ಕಂಬಳಕ್ಕೆ ಮತ್ತೊಂದು ವಿಘ್ನ ಎದುರಾಗಿರುವ ಲಕ್ಷಣ ಗೋಚರಿಸುತ್ತಿದೆ.