ಉಡುಪಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಆನೆಕೆರೆ ಸಮೀಪದ ಕೃಷ್ಣಾ ಅಪಾರ್ಟ್ಮೆಂಟ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಅಡುಗೆ ಮನೆಯ ಹೊರಗಡೆಯ ಲಾಂಜ್ನಲ್ಲಿ ಇರಿಸಲಾಗಿದ್ದ ಹೊಸ ಗ್ಯಾಸ್ ಸಿಲಿಂಡರ್ ಏಕಾಎಕಿ ಸ್ಪೋಟಗೊಂಡಿದ್ದು, ಇದರ ಪರಿಣಾಮ ಅಡುಗೆ ಮನೆ ಛಿದ್ರವಾಗಿದ್ದು, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಸ್ಫೋಟದ ತೀವ್ರತೆಗೆ ಅಪಾರ್ಟ್ಮೆಂಟ್ನ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿ ಶಾಮಕದಳದ ಸಿಬ್ಬಂದಿ ಧಾವಿಸಿ ಕಟ್ಟಡಕ್ಕೆ ವ್ಯಾಪಿಸಿದ್ದ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿಗಳಾದ ಅಚ್ಯುತ್ ಕರ್ಕೇರಾ, ಸುರೇಶ್ ಕುಮಾರ್, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಭಾಗವಹಿಸಿದ್ದರು.
ಗಾಯಗೊಂಡ ಇಬ್ಬರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

