ಕಾರ್ಕಳ : ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಕಾರ್ಕಳ ನ್ಯಾಯಾಲಯ ಆದೇಶಿಸಿದೆ.

ಬಂಧಿತ ಪ್ರತಿಮಾಳನ್ನು ಪೊಲೀಸರು ಅಕ್ಟೋಬರ್ 25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನವೆಂಬರ್ 7ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವೇಳೆ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಆರೋಪಿ ದಿಲೀಪ್ ಹೆಗ್ಡೆಯನ್ನು ಪೊಲೀಸರು ಅಕ್ಟೋಬರ್ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇಬ್ಬರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಾರ್ಕಳ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು, ನ್ಯಾಯಾಲಯವು ಇಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಆದೇಶಿಸಿದೆ.