ವೇಣೂರು : ಯುವಕನೊಬ್ಬ ಅಪ್ರಾಪ್ತೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ನಡೆದಿದೆ.
ಶಿರ್ಲಾಲು ಗ್ರಾಮದ ನಿವಾಸಿ ಸನತ್ ಎಂಬಾತನೇ ಅತ್ಯಾಚಾರವೆಸಗಿದ ಆರೋಪಿ. ಚಾಲಕನಾಗಿ ದುಡಿಯುತ್ತಿದ್ದ ಸನತ್ ಬಾಲಕಿಯ ತಂದೆಯೊಂದಿಗೆ ಆಗಾಗ ಮನೆಗೆ ಬದ್ದು ಹೋಗುತ್ತಿದ್ದ. ಈ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಬಾಲಕಿಯ ಹುಟ್ಟು ಹಬ್ಬದ ಕಾರ್ಯಕ್ರಮದ ದಿನದಂದು ಹುಡುಗಿಯ ಮನೆಗೆ ಬಂದು ಆರೋಪಿ ರಾತ್ರಿ ಮನೆಯಲ್ಲಿ ಉಳಿದುಕೊಂಡಿದ್ದಾನೆ.
ರಾತ್ರಿ ವೇಳೆ ಬಾಲಕಿ ಮಲಗಿದ್ದ ಕೋಣೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರದ ದಿನಗಳಲ್ಲಿ ಕೂಡಾ ಆಗಾಗ ರಾತ್ರಿ ವೇಳೆಯಲ್ಲಿ ಕದ್ದು ಮುಚ್ಚಿ ಬಂದು ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದು, ಇದೀಗ ಆರೋಪಿ ಸನತ್ ವಿರುದ್ದ ಬಾಲಕಿ ಹಾಗೂ ಕುಟುಂಬಸ್ಥರು ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.