ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಶುಕ್ರವಾರ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನದ ಪರೀಕ್ಷೆ ಯಾವುದೇ ಅಕ್ರಮ, ಅವ್ಯವಹಾರಗಳಿಲ್ಲದೇ ಶಾಂತಿಯುತವಾಗಿ ನಡೆದಿದೆ ಎಂದು ಡಿಡಿಪಿಐ ಕೆ.ಗಣಪತಿ ಅವರು ತಿಳಿಸಿದ್ದಾರೆ.
ಬೆಳಗ್ಗೆ ಜಿಲ್ಲಾದಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು ವ್ಯವಸ್ಥೆಗಳ ಕುರಿತು ವಿಚಾರಿಸಿ ತಿಳಿದುಕೊಂಡರು.
ಮೊದಲ ದಿನದಂದು ಪ್ರಥಮ ಭಾಷಾ ಪರೀಕ್ಷೆ ನಡೆದಿದ್ದು 38 ಮಂದಿ ಬಾಲಕರು ಹಾಗೂ 27 ಮಂದಿ ಬಾಲಕಿಯರು ಸೇರಿದಂತೆ ಒಟ್ಟು 65 ಮಂದಿ ಪರೀಕ್ಷೆಗೆ ಗೈರುಹಾಜರಾಗಿದ್ದರು.
ಜಿಲ್ಲೆಯಲ್ಲಿ 7248 ಬಾಲಕರು ಹಾಗೂ 6647 ಬಾಲಕಿಯರು ಸೇರಿದಂತೆ ಒಟ್ಟು 13,895 ಮಂದಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು, ಇವರಲ್ಲಿ 7210 ಬಾಲಕರು ಹಾಗೂ 6620 ಬಾಲಕಿಯರು ಸೇರಿದಂತೆ 13830 ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಡಿಡಿಪಿಐ ಅವರು ತಿಳಿಸಿದ್ದಾರೆ.














