ಕಾರ್ಕಳ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪಶ್ಚಿಮ ಘಟ್ಟ ಅದಿವಾಸಿಗಳ ಮನೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಜನರ ಸಂಕಷ್ಟವನ್ನು ಆಲಿಸಿದ್ದಾರೆ.
ಕಾರ್ಕಳ ತಾಲೂಕು ಈದುವಿನ ಆದಿವಾಸಿಗರ ಮನೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಿದರು. ಇದು ನಕ್ಸಲ್ ಬಾಧಿತ ಪ್ರದೇಶವಾಗಿಯೂ ಗುರುತಿಸಿಕೊಂಡಿದ್ದು, ಹೊಸ್ಮಾರುವಿನಿಂದ 15 ಕಿ.ಮೀ ದೂರದ ಈದು ಗ್ರಾಮದ ಕಗ್ಗತ್ತಲು ಕಾಡಿನೊಳಗಿನ ಪ್ರದೇಶಕ್ಕೆ ಭೇಟಿ ನೀಡಿ ಜನರೊಂದಿಗೆ ಕಾಲ ಕಳೆದರು. ಕಾಡಿನೊಳಗೆ ವಾಸವಿದ್ದ ಪರಿಸರದ ನಿವಾಸಿಗಳ ನಾನಾ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿದರು. ಶಾಸಕರ ಗ್ರಾಮವಾಸ್ತವ್ಯಕ್ಕೆ ಯಾವುದೇ ಸಿದ್ಧತೆ, ತಯಾರಿಯೂ ನಡೆದಿರಲಿಲ್ಲ.
ಆದಿವಾಸಿ ಸಮುದಾಯದ ದಿನೇಶ್ ಗೌಡ ಅವರ ಮನೆಯಲ್ಲಿ ಶಾಸಕರು ವಾಸ್ತವ್ಯ ಹೂಡಿ ಊಟೋಪಚಾರ ಮಾಡಿದರು. ಇಲ್ಲಿನ ದಟ್ಟ ಅರಣ್ಯದ ನಡುವೆ 11 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಕೃಷಿ ಅವಲಂಬಿತರಾಗಿದ್ದು, ಜಾನುವಾರು ಸಾಕಾಣೆ, ಕೋಳಿ ಸಾಕಣೆ ಮಾಡಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಮಾಡಿಕೊಂಡು ಸಾವಯವ ಕೃಷಿಗೆ ಒತ್ತುಕೊಟ್ಟು ಸಾಗಿಸುತ್ತಿದ್ದಾರೆ. ಕಾಡಿನ ನಿವಾಸಿಗಳ ಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.