ಉಡುಪಿ : ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆಮೀನುಗಾರರ ಸಂಘದ ನೇತೃತ್ವದಲ್ಲಿ ಮಾರ್ಚ್ 22ರಂದು ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಹಿಂದು ಯುವ ಸೇನೆ ಮಾಜಿ ಜಿಲ್ಲಾಧ್ಯಕ್ಷ ಮಂಜು ಕೊಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಸಭೆಯಲ್ಲಿ ಮಾತನಾಡಿದ್ದ ಮಂಜು ಕೊಳ, ಗಂಗೊಳ್ಳಿಯ ಒಂದು ಘಟನೆ ನೆನಪಿಟ್ಟುಕೊಳ್ಳಿ ಎಂದು ಇದೇ ಎಸ್ಪಿಗೆ ಹೇಳುತ್ತೇನೆ. ಒಬ್ಬ ಮೀನುಗಾರನನ್ನು ಒಳಗೆ ಹಾಕಿದರು. ಅದಕ್ಕೆ 10,000 ಜನ ಮೀನುಗಾರರು ಒಟ್ಟಾದಾಗ ಇದೇ ಎಸ್ಪಿ ಹೋಗಿ ಅವರ ಕಾಲು ಹಿಡಿದು ವಾಪಾಸು ಕರೆದುಕೊಂಡು ಬಂದರು. ಆ ಘಟನೆ ಮತ್ತೆ ಆಗಲು ಬಿಡಬೇಡಿ. ನೆನಪಿಟ್ಟುಕೊಳ್ಳಿ. ಮಾರ್ಚ್ 25ರೊಳಗೆ ರಘುಪತಿ ಭಟ್ ಹೇಳಿದ ಆ ಸೆಕ್ಷನ್ ಬದಲಾಯಿಸದಿದ್ದರೆ ಗಂಗೊಳ್ಳಿಯ ಕಥೆ ಇಲ್ಲಿ ಆಗುತ್ತದೆ ಎಂದು ಹೇಳಿದ್ದರು.
ಮುಂದುವರೆದು, ನಾವು ಕರಾವಳಿ ಭಾಗದ ಜನ, ಮುಂದೆ ನೋಡಿ ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಜನ ಒಟ್ಟು ಮಾಡಿ ಹೆದ್ದಾರಿ ಬಂದ್ ಮಾಡದಿದ್ದರೆ ನಾವು ಮೀನುಗಾರರೇ ಅಲ್ಲ. ದಯಮಾಡಿ ಬಂಧಿಸಿದ 4 ಮಹಿಳೆಯರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದರು. ಈ ಮೂಲಕ ಮಂಜು ಕೊಳ, ಸಾರ್ವಜನಿಕರಿಂದ ಇಂತಹ ಅಪರಾಧ ಮಾಡಿಸಲು ದುಷ್ಟೇರಣೆ ಮಾಡುತ್ತ ದ್ವೇಷ ಭಾವನೆಯಿಂದ, ಅಲ್ಲಿದ್ದವರನ್ನು ಪ್ರಚೋದಿಸುತ್ತ ಉದ್ರೇಕ ಭಾಷಣ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 57, 191(1), 192 ಬಿಎನ್‌ಎಸ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.