ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸನ್ಮಾನಿಸಿದರು.
ವಾಣಿಜ್ಯ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ಕೆನರಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಹಾಗೂ ವಿಜ್ಞಾನ ವಿಭಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ ಅವರನ್ನು ಮಂಗಳವಾರ ಫಲಿತಾಂಶದ ಬಳಿಕ ಡಿಸಿ ತಮ್ಮ ಕಚೇರಿಗೆ ಕರೆಸಿ ಸನ್ಮಾನಿಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ, ಕಲಿಕಾ ವಿಧಾನ, ಅಧ್ಯಯನ, ಶ್ರದ್ಧೆ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಡಾ| ಕೆ. ಆನಂದ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಚ್.ಜಿ., ಇಲಾಖೆಯ ಶಾಖಾಧಿಕಾರಿ ನಿತಿನ್ ಶೆಟ್ಟಿ, ಕೆನರಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಲತಾ ಮಹೇಶ್ವರಿ, ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್, ಅಮೂಲ್ಯರ ಪೋಷಕರಾದ ಡಾ| ದಿನೇಶ್ ಕಾಮತ್ ಮತ್ತು ಡಾ| ಅನುರಾಧ ಕಾಮತ್, ದೀಪಶ್ರೀ ಪೋಷಕರಾದ ಅಶೋಕ್ ಎಸ್. ಮತ್ತು ಸುಮಾ, ಮತ್ತಿತರರು ಉಪಸ್ಥಿತರಿದ್ದರು.