ಮಂಗಳೂರು : ಬಾಯ್ಸ್ ಪಿಜಿ ಸ್ವಚ್ಛತೆ ಇಲ್ಲದೇ, ಊಟ-ತಿಂಡಿ ವ್ಯವಸ್ಥೆ ಸರಿಯಿಲ್ಲದೇ ಅವ್ಯವಸ್ಥೆಯ ಆಗರವಾಗಿದ್ದರೂ ಗೂಗಲ್ ರೇಟಿಂಗ್‌ನಲ್ಲಿ ಹೆಚ್ಚಿನ ಸ್ಟಾರ್ ನೀಡಿ ಒಳ್ಳೆಯ ಕಮೆಂಟ್ ಹಾಕುವಂತೆ ಪಿಜಿ ಮಾಲೀಕ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ವಿಕಾಸ್ (19) ಎಂದು ಗುರುತಿಸಲಾಗಿದೆ. ಕಲಬುರಗಿ ಮೂಲದ ವಿಕಾಸ್ ಕಳೆದ 6 ತಿಂಗಳಿಂದ ಕದ್ರಿ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ. ಪಿಜಿಯಲ್ಲಿ ಊಟ-ತಿಂಡಿ ವ್ಯವಸ್ಥೆ ಸರಿಯಿಲ್ಲವಂತೆ, ಸ್ವಚ್ಛತೆ ಬಗ್ಗೆ ಕೇಳಲೇಬೇಡಿ. ಇನ್ನು ಶೌಚಾಲಯ, ನೀರಿನ ವ್ಯವಸ್ಥೆಯೂ ಸೂಕ್ತವಾಗಿಲ್ಲ.
ಈ ಬಗ್ಗೆ ಸಾಕಷ್ಟು ಬಾರಿ ಮಾಲೀಕರಿಗೆ ಹೇಳಿದರೂ ಗಮನ ಹರಿಸುತ್ತಿಲ್ಲವಂತೆ. ಸಾಲದ್ದಕ್ಕೆ ಗೂಗಲ್‌ನಲ್ಲಿ ಪಿಜಿ ಬಗ್ಗೆ ಒಳ್ಳೆ ಸ್ಟಾರ್ ರೇಟಿಂಗ್ ಕೊಡಬೇಕು ಎಂದು ಮಾಲೀಕನ ಧಮ್ಕಿ ಹಾಕಿದ್ದಾರೆ. ಸ್ಟಾರ್ ರೇಟಿಂಗ್ ಸರಿಯಾಗಿ ಕೊಡದಿದ್ದರೆ ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪಿಜಿ ಅವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿ ಗೂಗಲ್‌ನಲ್ಲಿ ಪಿಜಿಗೆ ಸಿಂಗಲ್ ಸ್ಟಾರ್ ಕೊಟ್ಟಿದ್ದನಂತೆ. ಊಟ, ಸ್ವಚ್ಚತೆ ಬಗ್ಗೆ ಕಮೆಂಟ್ ಮಾಡಿದ್ದನಂತೆ ಇದಕ್ಕೆ ಕೋಪಗೊಂಡ ಪಿಜಿ ಮಾಲೀಕ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ್ದಾನೆ. ನೊಂದ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.